ಸಾರಾಂಶ
ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರ ಆಧಾರ್ ಕಾರ್ಡ್, ಆಸ್ತಿ ದಾಖಲೆಗಳನ್ನು ಪಡೆದುಕೊಂಡು ಅಧಿಕ ಬಡ್ಡಿದರ ವಿಧಿಸಿ, ರೌಡಿಗಳ ಮೂಲಕ ರೈತರನ್ನು ಬೆದರಿಸಿ ಮನೆಯಿಂದ ಹೊರಹಾಕುವ ನೀಚ ಕೃತ್ಯ ನಡೆಸುತ್ತಿದ್ದಾರೆ, ಕೇಂದ್ರ ಸರ್ಕಾರ ನಬಾರ್ಡ್ ಸಾಲ ನೀಡುವ ಮೊತ್ತವನ್ನು ಕಡಿತಗೊಳಿಸಿದ್ದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಅಧಿಕ ಬಡ್ಡಿದರ ವಿಧಿಸಿ ರೈತರನ್ನು ಷೋಷಿಸುತ್ತಿರುವ ಮೈಕ್ರೋ ಫೈನಾನ್ಸ್ ಗಳ ವಿರುದ್ದ ಸರ್ಕಾರ ಕಠಿಣ ಕ್ರಮವಹಿಸಬೇಕು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳನ್ನು ನಿಯಂತ್ರಿಸಲು ಖಾಯಿದೆ ರೂಪಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಬುಧವಾರ ನಡೆದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.
ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರ ಆಧಾರ್ ಕಾರ್ಡ್, ಆಸ್ತಿ ದಾಖಲೆಗಳನ್ನು ಪಡೆದುಕೊಂಡು ಅಧಿಕ ಬಡ್ಡಿದರ ವಿಧಿಸಿ, ರೌಡಿಗಳ ಮೂಲಕ ರೈತರನ್ನು ಬೆದರಿಸಿ ಮನೆಯಿಂದ ಹೊರಹಾಕುವ ನೀಚ ಕೃತ್ಯ ನಡೆಸುತ್ತಿದ್ದಾರೆ, ಕೇಂದ್ರ ಸರ್ಕಾರ ನಬಾರ್ಡ್ ಸಾಲ ನೀಡುವ ಮೊತ್ತವನ್ನು ಕಡಿತಗೊಳಿಸಿದ್ದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ರಾಜ್ಯದ ಎಂಡಿಸಿಸಿ ಬ್ಯಾಂಕ್‌ಗಳು ಮುಚ್ಚುವ ಸ್ಥಿತಿ ತಲುಪಿವೆ, ಕೃಷಿ ಪತ್ತಿನ ಸಹಕಾರ ಸಂಘಗಳು ತೊಂದರೆಗೆ ಸಿಲುಕುತ್ತವೆ, ಶೂನ್ಯ ಬಡ್ಡಿ ದರಕ್ಕೆ ಬೆಳೆ ಸಾಲ ಪಡೆಯುತ್ತಿದ್ದ ರೈತರು ಖಾಸಗಿ ಫೈನಾನ್ಸ್ ಗಳಿಂದ ಸಾಲ ಪಡೆದು ಮನೆ, ಮಠ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಬಾರ್ಡ್ ಸಾಲ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ದ ರೈತ ಸಂಘ ಜ. 29ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ಸಹಕಾರ ಸಚಿವ ಅಮಿತ್ ಶಾ ಸಹಕಾರ ಸಂಘಗಳನ್ನು ನಾಶಪಡಿಸಿ ಖಾಸಗಿ ಪೈನಾನ್ಸ್ ಗಳಿಗೆ ಅನುಕೂಲ ಮಾಡಕೊಡುತ್ತಿದ್ದಾರೆ, ಸಹಕಾರ ಸಂಘಗಳು ನಾಶವಾದರೆ ಹೈನುಗಾರಿಕೆ, ಕುರಿ, ಕೋಳಿ ಸಾಕಣೆ ಮಾಡುವವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿದ್ದ ಸಬ್ಸಿಡಿ ತಪ್ಪುತ್ತದೆ, ರೈತರು ಖಾಸಗಿ ಪೈನಾನ್ಸ್ ಕಂಪನಿಗಳ ಕಪಿ ಮುಷ್ಟಿಗೆ ಸಿಲುಕುತ್ತಿದ್ದಾರೆ, ಮಹಿಳೆಯರು ಸಾಲ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಗಳ ವಿರುದ್ದ ಖಾಯಿದೆ ರೂಪಿಸದಿದ್ದರೆ ರೈತ ಸಂಘ ರಾಜ್ಯಾದ್ಯಂತ ಹೋರಾಟ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಹೊಸಕೋಟೆ ಬಸವರಾಜು, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮಂಕರಯ್ಯ, ಅಂಕಪ್ಪ, ಮಹೇಶ್ ಪ್ರಭು, ನೇತ್ರಾವತಿ, ಪರಮೇಶ್, ಪ್ರೇಮರಾಜ್, ಮಹೇಶ್, ಪ್ರತಾಪ್ ಇದ್ದರು.