ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಭೀಕರ ಬರಕ್ಕೆ ಅಂತರ್ಜಲವೇ ಕುಸಿದು ಹೋಗುತ್ತಿರುವ ಇಂದಿನ ದಿನದಲ್ಲಿ ಈ ಭಾಗದ ರೈತನೊಬ್ಬ ಬರದಲ್ಲಿಯೂ ಹಿಮಾಚಲ ಪ್ರದೇಶದ ತಂಪು ಪ್ರದೇಶದಲ್ಲಿ ಬೆಳೆಯುವ ಸೇಬು ಬೆಳೆ ಬೆಳೆಯುವುದರ ಮೂಲಕ ಸಾಧನೆ ಮಾಡಿದ್ದಾನೆ.
ಹೌದು, ಬರದ ನಾಡು, ಚಳಿಗಾಲದಲ್ಲಿಯೂ ಅಧಿಕ ಉಷ್ಣತೆ ಹೊಂದಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸೇಬು ಬೆಳೆದು ಇತರೆ ರೈತರಿಗೂ ಮಾದರಿಯಾಗಿದ್ದಾರೆ ಲಚ್ಯಾಣ ಗ್ರಾಮದ ಬಸವರಾಜ ಕರಾಳೆ. ವಿಜಯಪುರ ಜಿಲ್ಲೆ ಎಂದರೆ ಬೇಸಿಗೆಯಲ್ಲಿ 41 ಡಿಗ್ರಿವರೆಗೂ ದಾಖಲಾಗುತ್ತದೆ. ಇಂತಹ ಉಷ್ಣ ವಲಯದಲ್ಲಿ ಸೇಬು ಬೆಳೆಯುವುದರ ಮೂಲಕ ಬೇಸಿಗೆ ಬರಕ್ಕೆ ಸೆಡ್ಡು ಹೊಡೆದಿದ್ದಾನೆ. ಪಿಯುಸಿವರೆಗೆ ಓದಿರುವ ಬಸವರಾಜ ಕರಾಳೆ ಒಕ್ಕಲುತನದಲ್ಲಿಯೇ ಹೆಚ್ಚು ಆಸಕ್ತಿ ಹೊಂದಿರುವುದರಿಂದ ಸುಧಾರಿಸಿದ ಕೃಷಿ ಪದ್ಧತಿಯನ್ನು ಮಾಡುವುದರ ಮೂಲಕ ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.ಸಾವಯವ ಕೃಷಿ:ಸಾವಯವ ಕೃಷಿ ಮಾಡುವುದರ ಮೂಲಕ ವಿಷಯುಕ್ತ ಆಹಾರ ಪದಾರ್ಥದಿಂದ ಮುಕ್ತಿ ಕಂಡುಕೊಳ್ಳುವ ಹಾಗೂ ಮುಂದಿನ ಪೀಳಿಗೆಗೆ ಸತ್ವಯುತ ಭೂಮಿಯನ್ನು ಬಿಟ್ಟುಹೋಗುವ ಸಾವಯವ ಕೃಷಿಗೆ ಒತ್ತು ನೀಡಿ ತಮ್ಮ 20 ಎಕರೆ ಜಮೀನದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಬದನೆ ಬೆಳೆ ಬೆಳೆಯಲು ಸಾಧ್ಯವಿಲ್ಲ ಎನ್ನುವವರಿಗೆ ತಮ್ಮ ಜಮೀನಿನಲ್ಲಿ ಸಾವಯವದಲ್ಲಿ ಬದನೆ ಬೆಳೆದು ತೋರಿಸಿದ್ದಾನೆ.
1 ಸಾವಿರ ಸೇಬು ಸಸಿ ನೆಟ್ಟಿದ್ದಾರೆ:ಜಿಲ್ಲೆಯಲ್ಲಿಯೇ ಸೇಬು ಬೆಳೆ ಬೆಳೆಯುವ ಏಕೈಕ ರೈತ ಎನಿಸಿಕೊಂಡಿದ್ದು, ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿ ತಮ್ಮ ಗೆಳೆಯನ ಸಹಕಾರದಿಂದ ಸೇಬು ಬೆಳೆಯಲು ಪಣ ತೊಟ್ಟಿದ್ದು, ಇದೀಗ ಎರಡೂವರೆ ಎಕರೆ (1 ಹೆಕ್ಟೇರ್) ಜಮೀನಿನಲ್ಲಿ 1 ಸಾವಿರ ಸೇಬು ಸಸಿಗಳನ್ನು ನೆಟ್ಟು ವರ್ಷವಾಗಿದೆ. ಇಂದು ಸೇಬು ಸಸಿಗಳು ಬೆಳೆದು ಫಲ ಹತ್ತಿದ್ದು, ಹೆಚ್ಚು ಉಷ್ಣ ಇರುವ ನೆಲದಲ್ಲಿಯೂ ಸೇಬು ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಒಂದು ಸಸಿಗೆ ₹225:ಹಿಮಾಚಲ ಪ್ರದೇಶದಿಂದ ಒಂದು ಸಸಿಗೆ ₹225ಗಳನ್ನು ನೀಡಿ ಒಟ್ಟು ಸಾವಿರ ಸಸಿಗಳನ್ನು ತರಿಸಿಕೊಂಡಿದ್ದು, ಒಂದು ಸಸಿಗೆ ಫಲ ಹತ್ತಿದ ಮೇಲೆ ಅದು ಕನಿಷ್ಠ 20 ಕೆಜಿ ಸೇಬು ನೀಡುತ್ತದೆ. ಒಂದು ಕೆಜಿ ಸೇಬು ಬೆಲೆ ಕನಿಷ್ಠ ₹50ಗಳಂತೆ ಮಾಡಿದರೆ ಒಂದು ಸಸಿಯಿಂದ ಸಾವಿರಗಳು ಪಡೆಯಬಹುದು. ಆದರೆ ಒಂದು ಸಸಿ ಸಂರಕ್ಷಣೆ ಮಾಡಬೇಕಾದರೆ ₹100 ಖರ್ಚಾಗುತ್ತದೆ ಎನ್ನುತ್ತಾನೆ ರೈತ ಬಸವರಾಜ ಕರಾಳೆ.
ಉಷ್ಣ ವಲಯದ ಸೇಬಿಗೆ ಬೇಡಿಕೆ ಹೆಚ್ಚು:ಹಿಮಾಚಲ ಪ್ರದೇಶದ ತಂಪು ನೆಲದಲ್ಲಿ ಬೆಳೆಯುವ ಸೇಬಿಗಿಂತ ಉಷ್ಣ ವಲಯದಲ್ಲಿ ಬೆಳೆದಿರುವ ಸೇಬಿಗೆ ಹೆಚ್ಚು ಬೇಡಿಕೆ ಇದೆ. ಹಿಮಾಚಲ ಪ್ರದೇಶದಲ್ಲಿ ಹೆಚ್ಚು ತಂಪು ಇರುವುದರಿಂದ ಅಲ್ಲಿ ಬೆಳೆದ ಸೇಬು ಅಷ್ಟೊಂದು ರುಚಿ (ಸಕ್ಕರೆ ಅಂಶ) ಇರುವುದಿಲ್ಲ. ಉಷ್ಣ ಎಷ್ಟು ಹೆಚ್ಚಿಗೆ ಇರುತ್ತದೆಯೋ ಅಷ್ಟು ಹಣ್ಣು ಸಿಹಿಯಾಗಿರುತ್ತದೆ. ಹೀಗಾಗಿ ಈ ನೆಲದ ಸೇಬುವಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸೇಬು ಬೆಳೆ ಬೆಳೆಯಲಾಗಿದೆ.
ಈ ಬೆಳೆಗೆ ಯಾವುದೇ ರೋಗ ಬಾರದೇ ಇರುವುದರಿಂದ ಖರ್ಚು ಕಡಿಮೆಯಾಗುತ್ತದೆ. ಹೆಚ್ಚಿನ ಔಷಧ ಸಿಂಪಡಿಸುವ ಪ್ರಶ್ನೆಯೇ ಬರುವುದಿಲ್ಲ. ನೊರಜಿನ ಕಾಟವೊಂದು ಬಿಟ್ಟರೆ, ಇದಕ್ಕೆ ಇತರೇ ಕೀಟ ಬಾಧೆ ಬರುವುದಿಲ್ಲ. ತೋಟದಲ್ಲಿ 6000 ಲೀಟರ್ ಟ್ಯಾಂಕ್ ನಿರ್ಮಿಸಿ, ಇದರಲ್ಲಿ ಬೆಲ್ಲ, ಸಗಣಿ, ಜಾನುವಾರು ಮೂತ್ರ ಎಲ್ಲವನ್ನು ಸೇರಿಸಿ ಔಷಧ ತಯಾರಿಸಿ ಬೆಳೆಗಳಿಗೆ ಸಿಂಪಡಿಸಲಾಗುತ್ತದೆ. ಎರೆಹುಳ ಗೊಬ್ಬರ,ತಿಪ್ಪೆಗೊಬ್ಬರ ಬಳಕೆ ಮಾಡಿಕೊಳ್ಳಲಾಗುತ್ತದೆ.----
ಬಾಕ್ಸ್ಸೇಬು ಕಸಿ ಮೂಲಕ ಉಷ್ಣ ಹೆಚ್ಚಳ
ಸೇಬು ಬೆಳೆಯಲು ಕನಿಷ್ಠ ತಾಪಮಾನ ಬೇಕು. ಆದರೆ ವಿಜಯಪುರ ಜಿಲ್ಲೆಯ ತಾಪಮಾನಕ್ಕೆ ತಕ್ಕಂತೆ ಸೇಬು ಬೆಳೆ ಬೆಳೆಯಲು ಗುಡ್ಡವೊಂದರಲ್ಲಿ ಬೆಳೆಯುವ ಕಂಟಿಯನ್ನು ತಂದು ಅದಕ್ಕೆ ಹಿಮಾಚಲ ಪ್ರದೇಶದ ಸೇಬು ಸಸಿ ಕಸಿ ಮಾಡಿ ಸೇಬು ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.---
ಕೋಟ್ಗೆಳೆಯನ ಸಹಾಯದಿಂದ ಹಿಮಾಚಲ ಪ್ರದೇಶದಿಂದ ಸೇಬು ಸಸಿಗಳನ್ನು ತರಿಸಿಕೊಂಡು 1 ಹೆಕ್ಟೇರ್ ಜಮೀನಿನಲ್ಲಿ ಸಾವಿರ ಸೇಬು ಸಸಿಗಳನ್ನು ನಾಟಿ ಮಾಡಿದ್ದೇನೆ. ಸೇಬು ಫಲ ಹತ್ತಿವೆ. ಸೇಬು ಕೇವಲ ತಂಪು ಪ್ರದೇಶದಲ್ಲಿ ಮಾತ್ರ ಬೆಳೆಯುತ್ತದೆ. ಆದರೆ ಅದನ್ನು ಮೀರಿಸಿ ಹೆಚ್ಚು ಉಷ್ಣ ಇರುವ ಪ್ರದೇಶದಲ್ಲಿಯೂ ಸೇಬು ಬೆಳೆದು ತೋರಿಸಬೇಕು ಎಂದು ಹಠದಿಂದ ಈ ಕಾರ್ಯಕ್ಕೆ ಮುಂದಾಗಿದ್ದು, ಇದರಲ್ಲಿ ಯಶಸ್ಸು ಕಂಡು ಬಂದಿದೆ.
-ಬಸವರಾಜ ಕರಾಳೆ, ಪ್ರಗತಿಪರ ರೈತ,ಲಚ್ಯಾಣ.--
ಸೇಬು ಬೆಳೆ ಬೆಳೆಯಲು ತಂಪಾದ ಪ್ರದೇಶ ಬೇಕಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿನ ಮಣ್ಣಿನ ಗುಣಧರ್ಮ ಉಷ್ಣ ಇರುವುದರಿಂದ ಸೇಬು ಬೆಳೆಯುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಹೆಚ್ಚು ಉಷ್ಣ ಇರುವ ಪ್ರದೇಶದಲ್ಲಿ ಬೆಳೆದಿರುವ ಸೇಬು ಹೆಚ್ಚು ಸಿಹಿ ಇರುವುದರಿಂದ ಬೇಡಿಕೆ ಹೆಚ್ಚಿದೆ. ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಕೊಲ್ಹಾರದಲ್ಲಿ ಓರ್ವ ರೈತರು ಬೆಳೆದಿದ್ದಾರೆ. ಸೇಬು ರುಚಿ ಇದೆ. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ರೈತರೊಬ್ಬರು ಸೇಬು ಬೆಳೆ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರ ತೋಟಕ್ಕೆ ಭೇಟಿ ನೀಡಿ, ಸೇಬು ಬೆಳೆ ಬೆಳೆಯಲು ಅಗತ್ಯ ಸಹಾಯ, ಸಹಕಾರ ನೀಡಲಾಗುತ್ತದೆ.-ಎಚ್.ಎಸ್.ಪಾಟೀಲ, ಸಹಾಯಕ ಹಿರಿಯ ತೋಟಗಾರಿಕೆ ನಿರ್ದೇಶಕರು,ಇಂಡಿ.
---