ಸಾರಾಂಶ
ಚನ್ನಪಟ್ಟಣ: ಜಾತ್ಯತೀತ ಪಕ್ಷವೆಂದೇ ಹೆಸರಾಗಿದ್ದ ಜೆಡಿಎಸ್ ತನ್ನ ಸಿದ್ಧಾಂತಗಳನ್ನು ಬಿಟ್ಟು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದಲ್ಲದೇ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರ ತ್ಯಜಿಸಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸುತ್ತಿದ್ದಾರೆ. ಇದರಿಂದ ಬೇಸರಗೊಂಡು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾಗಿ ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ತೊರೆದು ತಮ್ಮೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದ ನಗರಸಭೆ ಸದಸ್ಯರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಗೆಲುವಿಗಾಗಿ ಅವಿರತವಾಗಿ ಶ್ರಮಿಸಿದೆವು. ಎಲ್ಲರೂ ಸೇರಿ ದುಡಿದು ಕುಮಾರಸ್ವಾಮಿಯನ್ನು ಗೆಲ್ಲಿಸಿದೆವು. ಆದರೆ, ಅವರು ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ವಲಸೆ ಹೋಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರಿಗಾಗಿ ಹೊಡೆದಾಡಿದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಬೇಸರ ತರಿಸಿದ್ದು, ಇದರಿಂದ ಪಕ್ಷ ತ್ಯಜಿಸಿದೆವು ಎಂದರು.ಅವರು ಮುಸ್ಲೀಂ ವಾರ್ಡ್‌ಗಳನ್ನು ಬಿಟ್ಟೇ ಬಿಡಿ ಎಂಬಂತೆ ಮಾತನಾಡುತ್ತಾರೆ. ನಾವೆಲ್ಲ ಮುಸ್ಲೀಮರ ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಅಲ್ಪಸಂಖ್ಯಾತರು, ನಾವು ಒಂದಾಗಿದ್ದೇವೆ. ಈಗ ಅವರ ವಾರ್ಡ್ ಬಿಡಿ ಎನ್ನುತ್ತಾರೆ. ಮುಂದೆ ಮುಸ್ಲೀಂ ಸಮುದಾಯವನ್ನೇ ಬಿಡಿ ಎನ್ನುತ್ತಾರೆ. ಆಮೇಲೆ ನಮ್ಮನ್ನೇ ಬೇಡ ಎನ್ನುತ್ತಾರೆ. ಅವರ ಸಿದ್ಧಾಂತಗಳನ್ನು ಒಪ್ಪಲಾಗದೆ ನಾವು ಜೆಡಿಎಸ್ ತ್ಯಜಿಸುವಂತಾಯಿತು ಎಂದು ತಿಳಿಸಿದರು.
ಆಮುಷಕ್ಕೆ ಹೋಗಿಲ್ಲ:ನಾವು ಕಾಂಗ್ರೆಸ್ ಸಿದ್ಧಾಂತ ಹಾಗೂ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವನ್ನು ಮೆಚ್ಚಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದೇವೆಯೇ ಹೊರತು, ಯಾವುದೇ ಆಮೀಷಕ್ಕೆ ಬಲಿಯಾಗಿ ಹೋಗಿಲ್ಲ. ಯಾವುದೇ ಷರತ್ತುಗಳನ್ನು ನಾವು ವಿಧಿಸಿಲ್ಲ. ಯಾರಾದರೂ ಪಕ್ಷಾಂತರ ಮಾಡಿದಾಗ ಆರೋಪಗಳು ಬರುವುದು ಸಹಜ. ಆದರೆ, ನಮಗೆ ಕಾಂಗ್ರೆಸ್‌ನವರು ಯಾವುದೇ ಆಮೀಷ ಒಡ್ಡಿಲ್ಲ. ಕುಮಾರಸ್ವಾಮಿ ಬಿಜೆಪಿಯೊಡನೆ ಹೊಂದಾಣಿಕೆ ಮಾಡಿಕೊಂಡಿದ್ದು ತಪ್ಪಲ್ಲವಾದರೇ ನಮ್ಮ ಪಕ್ಷಾಂತರವೂ ತಪ್ಪಲ್ಲ ಎಂದು ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ನಗರದ ಅಭಿವೃದ್ಧಿ, ವಾರ್ಡ್‌ನ ಅಭಿವೃದ್ಧಿ ದೃಷ್ಟಿಯಿಂದ ನಾವು ಪಕ್ಷಾಂತರ ಮಾಡಿದ್ದೇವೆ. ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಈಗಾಗಲೇ ನಮ್ಮ ವಾರ್ಡ್‌ನ ಮುಖಂಡರು ಹಾಗೂ ನಾಗರಿಕರೊಂದಿಗೆ ಚರ್ಚೆ ನಡೆಸಿದ್ದೇವೆ. ಆ ಬಳಿಕವೇ ಪಕ್ಷ ತ್ಯಜಿಸುವ ತೀರ್ಮಾನ ಕೈಗೊಂಡಿದ್ದೇವೆ. ಇನ್ನು ಉಳಿದಿರುವವರಿಗೆ ಪಕ್ಷ ತ್ಯಜಿಸಿದ್ದು ಯಾವ ಕಾರಣಕ್ಕೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ. ಇನ್ನು ಎರಡುವರೆ ವರ್ಷ ಸದಸ್ಯತ್ವ ಅವಧಿ ಉಳಿದಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.ಚನ್ನಪಟ್ಟಣಕ್ಕೆ ಬರಲು ಅಧಿಕಾರಿಗಳು ಹಿಂಜರಿಯುತ್ತಾರೆ. ಇಲ್ಲಿ ಸಾಕಷ್ಟು ನ್ಯೂನ್ಯತೆಗಳು ಇರುವುದರಿಂದ ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ನಗರಸಭೆಯಲ್ಲಿ ಹೆಲ್ತ್ ಇನ್ಸೆಪೆಕ್ಟರ್, ಆರ್‌ಐಗಳು, ಸಿಬ್ಬಂದಿ ಕೊರತೆ ಇದೆ. ಪ್ರಯತ್ನಪಟ್ಟರೂ ಇದನ್ನು ಸರಿಪಡಿಸಲು ಆಗುತ್ತಿಲ್ಲ. ಇಲ್ಲಿನ ವಾತಾವರಣ ಸರಿಯಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ವೇಳೆ ಹೊಡೆದಾಡಿದ್ದ ಬಿಜೆಪಿ-ಜೆಡಿಎಸ್‌ನವರು ತತ್ವ ಸಿದ್ಧಾಂತವಿಲ್ಲದೇ ಒಂದಾಗಿದ್ದಾರೆ. ಸ್ವಹಿತಾಸಕ್ತಿಗಾಗಿ ಅವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದನ್ನು ವಿರೋಧಿಸಿ ಜೆಡಿಎಸ್ ನಗರಸಭೆ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಅವರನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್, ಮುಖಂಡ ಎ.ಸಿ.ವೀರೇಗೌಡ, ನಗರಸಭೆ ಸದಸ್ಯರಾದ ವಿ.ಸತೀಶ್ ಬಾಬು, ಸಿ.ಜೆ.ಲೋಕೇಶ್, ಶ್ರೀನಿವಾಸಮೂರ್ತಿ, ನಾಗೇಶ್, ಸೈಯ್ಯದ್ ರಫೀಕ್ ಅಹ್ಮದ್ ಕುನುಮೀರಿ, ಅಭಿದಾಬಾನು, ಭಾನುಪ್ರಿಯ, ಪಕ್ಷೇತರ ಸದಸ್ಯೆ ಉಮಾ ಇತರರಿದ್ದರು.ಪೊಟೋ೫ಸಿಪಿಟಿ೨:
ಚನ್ನಪಟ್ಟಣದಲ್ಲಿ ನಗರಸಭೆ ಅಧ್ಯಕ್ಷ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ನಗರಸಭೆ ಸದಸ್ಯರು ಹಾಜರಿದ್ದರು.