ದೇವರಾಜೇಗೌಡರಿಂದ ತನಿಖೆ ದಿಕ್ಕುತಪ್ಪಿಸುವ ಯತ್ನ: ಶಾಸಕ ಶಿವಲಿಂಗೇಗೌಡ

| Published : May 10 2024, 01:31 AM IST

ಸಾರಾಂಶ

ಪೆನ್‌ಡ್ರೈವ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಎಸ್‌ಐಟಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಗೃಹಮಂಡಳಿ ಅಧ್ಯಕ್ಷ ಆರೋಪ । ಪೆನ್‌ಡ್ರೈವ್‌ನಿಂದ ಜಿಲ್ಲೆಯ ಮರ್ಯಾದೆ ಹೋಗಿದೆ

ಕನ್ನಡಪ್ರಭ ವಾರ್ತೆ ಹಾಸನ

ಪೆನ್‌ಡ್ರೈವ್ ಪ್ರಕರಣದ ಇಡೀ ಹಾಸನ ಜಿಲ್ಲೆಯ ಮಾನ, ಮರ್ಯಾದೆ ಹಾಳಾಗಿದೆ. ಇದರ ಮಧ್ಯೆ ವಕೀಲ ದೇವರಾಜೇಗೌಡ ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಎಸ್‌ಐಟಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಲೈಂಗಿಕ ಹಗರಣದಿಂದ ನಾವು ತಲೆ ತಗ್ಗಿಸಬೇಕಾಗಿದೆ. ಇದು ಈಗ ಇಡೀ ಜಗತ್ತಿನಲ್ಲಿ ಸುದ್ದಿಯಾಗಿದೆ. ಈ ಕೃತ್ಯ ಮಾಡಿದವರು ವಿದೇಶಕ್ಕೆ ಹೋದ ಕಾರಣ ಇದು ಎಲ್ಲೆಡೆ ಹರಡಿ ಹೋಗಿದೆ. ಹಾಸನ ಎಂದರೆ ಕಳಂಕಕ್ಕೆ ಗುರಿಯಾಗಿದೆ. ಪಕ್ಷಭೇದ ಮರೆತು ನಾವು ಇದನ್ನು ಖಂಡಿಸಬೇಕಾಗಿದೆ. ಇಂತಹ ಘಟನೆಗಳು ಹಿಂದೆಯೂ ನಡೆದಿವೆ. ಆದರೆ ಮಾಡಿದ ಹೀನ ಕೃತ್ಯವನ್ನು ರೆಕಾರ್ಡ್ ಮಾಡಿ ಎಲ್ಲೆಡೆ ಹಬ್ಬುವಂತೆ ಮಾಡಿಧ್ದು ಸಹಿಸಲು ಆಗುವುದಿಲ್ಲ. ಈ ಬಗ್ಗೆ ಮೊದಲು ಹೇಳಿದ್ದು ದೇವರಾಜೇಗೌಡ, ಹಾಸನದ ವೃತ್ತದಲ್ಲಿ ಪರದೆ ಹಾಕಿ ತೋರಿಸ್ತೇನೆ ಎಂದು ದೇವರಾಜೇಗೌಡ ಸವಾಲು ಹಾಕಿದ್ದರು. ಹೆಣ್ಣುಮಕ್ಕಳ ಮುಖ ಬ್ಲರ್ ಮಾಡದೆ ಹಂಚಿದ್ದು ಸಮಾಜ ತಲೆ ತಗ್ಗಿಸುವ ವಿಚಾರ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೆಣ್ಣುಮಕ್ಕಳ ಗೌರವ ಉಳಿಯಬೇಕಾಗಿದ್ದರೆ ಅವರು ಪೊಲೀಸರಿಗೊ ನ್ಯಾಯಾಧೀಶರಿಗೊ ಕೊಡಬೇಕಿತ್ತು. ಪೆನ್‌ಡ್ರೈವ್ ಯಾರು ಬಿಟ್ಟಿದ್ದಾರೆ ಎಲ್ಲವೂ ತನಿಖೆಯಿಂದ ಹೊರ ಬರುತ್ತದೆ’ ಎಂದು ಎಚ್ಚರಿಸಿದರು.

‘ಈಗ ಪೆನ್‌ಡ್ರೈವ್ ಹರಿಬಿಟ್ಡಿದ್ದು ಯಾರು ಎಂದು ಚರ್ಚೆ ಶುರುವಾಗಿದೆ. ಇದರಲ್ಲಿ ರಾಜಕೀಯ ಬೆರೆತಿದೆ, ಜಾತಿಯೂ ಬಂದಿದೆ. ಆರೋಪ ಪ್ರತ್ಯಾರೋಪ ಕೂಡ ಆಗುತ್ತಿದೆ. ದೇವರಾಜೇಗೌಡ ಅವರು ಶಿವರಾಮೇಗೌಡ ಅವರ ಮೂಲಕ ಡಿ.ಕೆ. ಶಿವಕುಮಾರ್ ಮಾತಾಡಿದಾರೆ ಎನ್ನಲಾಗುತ್ತಿದೆ. ಇಷ್ಟೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡುತ್ತಾರೆ’ ಎಂದು ದೂರಿದರು.

ಕಾರ್ತಿಕ್ ಎಲ್ಲಾ ವಿರೋದ ಪಕ್ಷಗಳ ನಾಯಕರ ಸಂಪರ್ಕ ಮಾಡಿದ್ದಾರೆ. ಅವರು ಶ್ರೇಯಸ್ ಪಟೇಲ್ ಜೊತೆ ಫೋಟೋ ಹೊಡೆಸಿಕೊಂಡಿದ್ದನ್ನು ದೊಡ್ಡದಾಗಿ ಬಿಂಬಿಸಿತ್ತಿದ್ದಾರೆ. ದೇವೇಗೌಡರ ಕುಟುಂಬ ಬಿಟ್ಟು ಬಂದ ಮೇಲೆ ವಿರೋದ ಪಕ್ಷದವರ ಜೊತೆ ಬರೋದು ಸಹಜ ಅಲ್ಲವೇ ಎಂದು ವ್ಯಂಗ್ಯವಾಡಿದರು.

‘ಪ್ರಜ್ವಲ್ ರನ್ನು ವಿದೇಶದಿಂದ ಕರೆಸಲು ಮೋದಿಯವರು ಮನಸ್ಸು ಮಾಡಬೇಕು. ಅವರು ಮೊನ್ನೆ ಪ್ರಜ್ವಲ್‌ಗೆ ಉಗ್ರ ಶಿಕ್ಷೆ ಆಗಬೇಕು ಅಂದಿದ್ದಾರೆ. ಇದು ಅಂತರಾಷ್ಟ್ರೀಯ ವಿಚಾರ. ಇದಕ್ಕೆ ಕೇಂದ್ರ ಸರ್ಕಾರದ ಗಮನ ಬೇಕು. ಎಲ್ಲಾ ಮನೆಯವರು ಅವರನ್ನು ಕರೆಸಿ ಶರಣಾಗತಿ ಮಾಡಿಸಬೇಕು’ ಎಂದು ಹೇಳಿದರು.

ರೇವಣ್ಣ ಅವರ ಬಂಧನ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ‘ಸಂತ್ರಸ್ತೆ ಮಗ ರೇವಣ್ಣ ನಮ್ಮ ತಾಯಿಯನ್ನು ಅಪಹರಣ ಮಾಡಿಸಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಆ ದೂರಿನಂತೆ ಕೇಸ್ ದಾಖಲಾಗಿ ರೇವಣ್ಣ ಅವರಿಗೆ ಮೂರು ನೋಟಿಸ್ ನೀಡಲಾಗಿದೆ. ಅವರು ನಿರೀಕ್ಷಣ ಜಾಮೀನು ಅರ್ಜಿ ಹಾಕಿದ್ದರೂ ಅದೂ ಕೂಡ ವಜಾ ಆಗಿತ್ತು. ಹಾಗಾಗಿ ಬಂಧನ ಮಾಡಲೇಬೇಕಾಯಿತು’ ಎಂದು ರೇವಣ್ಞ ಬಂಧನ ಸಮರ್ಥಿಸಿದರು.

‘ಕಿಡ್ನಾಪ್ ಕೇಸ್ ಆಗಿದ್ದ ಕಾರಣ ರೇವಣ್ಣ ಅವರ ಬಂಧನವಾಗಿದೆ. ಸಾಕ್ಷಿ ನಾಶ ಮಾಡ್ತಾರೆ ಅಂತಾ ಬಂಧನ ಮಾಡಿರಬಹುದು. ಜಡ್ಜ್ ಕೊಟ್ಟಿರೊ ತೀರ್ಪು ನಾವು ಪ್ರಶ್ನೆ ಮಾಡೋಕೆ ಆಗುತ್ತಾ. ಇದನ್ನು ರಾಜಕೀಯ ಎಂದರೆ ಹೇಗೆ? ಒಕ್ಕಲಿಗರ ನಾಯಕತ್ವ ವಿಚಾರವಾಗಿ ಮಾತನಾಡಿ, ಜಗಳ ಮಾಡ್ತಾ ಇರೋದು ಒಕ್ಕಲಿಗರೇ. ಕೃತ್ಯ ಮಾಡಿರೋದು ಒಕ್ಕಲಿಗನೆ. ಇವರು ಹೇಳಿದ ಹಾಗೆ ಕುಣಿಯೋಕೆ ಬಂದಿಲ್ಲ. ನಾವು ೧೩೬ ಸ್ಥಾನ ಗೆದ್ದಿದ್ದೇವೆ. ರಾಜ್ಯ ನಡೆಸೋದು ಗೊತ್ತಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಕಾಂಗ್ರೆಸ್ ನಾಯಕರಾದ ಎಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಶ್ರೀದರ್ ಗೌಡ ಇದ್ದರು.