ಸಾರಾಂಶ
ಶಿವಮೊಗ್ಗ: 21500 ಎಕರೆ ಜಾಗವನ್ನು ವಕ್ಫ್ ಖಾತೆಗಳಿಗೆ ಏರಿಸಲು ಕಂದಾಯ ಇಲಾಖೆಗೆ ಆದೇಶ ಮಾಡಿದ್ದು, ಎರಡು ಧರ್ಮಗಳ ಮಧ್ಯೆ ಜಾತಿಯ ಸಂಘರ್ಷಕ್ಕೆ ರಾಜ್ಯ ಸರ್ಕಾರ ಕಾರಣವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಆದೇಶ ನೀಡಿದ್ದಾರೆ. ಭಾರತ ಪಾಕಿಸ್ತಾನ ವಿಭಾಗವಾದ ಸಂದರ್ಭದಲ್ಲಿ ಒಂದೂವರೆ ಲಕ್ಷ ಎಕರೆಯಷ್ಟು ಇದ್ದ ಜಾಗ ಈಗ ಹೆಚ್ಚಾಗಿರಲು ಕಾರಣ ಏನು ?ಭೂಮಿ ಸಾಫ್ಟ್‌ವೇರ್‌ನಲ್ಲಿ ವಕ್ಫ್ ಆಸ್ತಿ ನೋಂದಣಿಗೆ ಸೂಚನೆ ನೀಡಲಾಗಿದೆ. ಖಬರಸ್ತಾನಕ್ಕೆ ಸರ್ಕಾರಿ ಜಾಗ ಕೊಡುವುದು ಇಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಸಿ ಕೊಡುವುದು ಎಂದು ಸರ್ಕಾರ ಆದೇಶ ನೀಡಿದೆ ಎಂದು ದೂರಿದರು.ರಾಜ್ಯ ಸರ್ಕಾರ ಲ್ಯಾಂಡ್ ಜಿಹಾದ್ ಮಾಡಲು ಹೊರಟಿದೆ. ಜಿಲ್ಲೆಯಲ್ಲಿ ರೈತರಿಗೆ ಭೂಮಿ ಕೊಡುವಲ್ಲಿ ವಿಫಲವಾಗಿದೆ. ಆದರೆ, ವಕ್ಫ್ ಆಸ್ತಿ ವಿಚಾರದಲ್ಲಿ ಆಸಕ್ತಿ ತೋರುತ್ತಿದೆ. ಶಿವಮೊಗ್ಗದಲ್ಲಿ ಸರ್ಕಾರಿ ಭೂಮಿಯನ್ನು ಇಡೀಕರಣ ಮಾಡಿದ್ದರಿಂದ ಜನರಿಗೆ ಭೂಮಿ ಕೊಡಲು ಆಗುತ್ತಿಲ್ಲ. ರೈತರು, ಮಠ, ಮಂದಿರಗಳ ಆಸ್ತಿಯನ್ನು ವಕ್ಫ್ ಗೆ ಸೇರಿಸುವ ಆಸಕ್ತಿ ಯಾಕೆ ? ಒಂದು ಸಮುದಾಯವನ್ನು ಓಲೈಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಜಿಹಾದ್ ನಡೆಸುತ್ತಿದೆ ಎಂದು ಆರೋಪಿಸಿದರು.ಇಲ್ಲಿ ಬೇಕಾಬಿಟ್ಡಿ ಆಸ್ತಿಗಳ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ರಾಜ್ಯ ಸರ್ಕಾರ ಹಿಂದೂಗಳ ಭೂಮಿಯನ್ನಷ್ಟೆ ಅಲ್ಲದೆ ಮುಸ್ಲಿಂ ಸಮುದಾಯದವರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದು, ಧರ್ಮ -ಧರ್ಮಗಳ ನಡುವಿನ ವಿವಾದವನ್ನಾಗಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.ರಾಜ್ಯದಲ್ಲಿ ವಕ್ಫ್ ನ್ಯಾಯಾಲಯದಲ್ಲಿ ವಕ್ಫ್ ಆಸ್ತಿಯ ಅನಧಿಕೃತ ಒತ್ತುವರಿಯ 3720 ಪ್ರಕರಣಗಳು 319 ಎಕರೆ ಭೂಮಿಗೆ ಸಂಬಂಧಿಸಿದಂತೆ ದಾಖಲಾಗಿವೆ. 1400 ಕ್ಕಿಂತ ಹೆಚ್ಚಿನ ಪ್ರಕರಣಗಳು ತೀರ್ಪಿಗೆ ಕಾದಿವೆ. ರಾಜ್ಯದಲ್ಲಿ ತರಾತುರಿಯಲ್ಲಿ ಉದ್ದೇಶಪೂರ್ವಕವಾಗಿ ವಕ್ಫ್ ಆಸ್ತಿ ಖಾತೆ ಏರಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಬಿಜೆಪಿ ಇದರ ವಿರುದ್ಧ ಹೋರಾಟ ಮುಂದುವರೆಸಲಿದೆ. ತಕ್ಷಣವೇ ರೈತರ, ಮಠಮಂದಿರಗಳ ಭೂಮಿಯನ್ನು ವಕ್ಫ್ ಖಾತೆಗೆ ಸೇರಿಸುವ ಕೆಲಸವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ತರಲು ಜಂಟಿ ಸದನ ಸಮಿತಿ ರಚನೆ ಮಾಡಿದೆ. ಈ ಪ್ರಯತ್ನ ಮಾಡಿದ ನಂತರ ಇಂಡಿ ಕೂಟದ ಮಿತ್ರ ಪಕ್ಷಗಳು ಅಧಿವೇಶನಕ್ಕೆ ಅಡ್ಡಿ ಮಾಡಿದೆ. ಅನ್ವರ್ ಮಾನ್ಪಾಡಿ ರಾಜ್ಯದಲ್ಲಿ ಎರಡರಿಂದ ಮೂರು ಲಕ್ಷ ಕೋಟಿ ವಕ್ಫ್ ಆಸ್ತಿಯಲ್ಲಿ ಅಕ್ರಮ ನಡೆದಿದೆ ಎಂದು ವರದಿ ನೀಡಿದ್ದಾರೆ. ಕಾಂಗ್ರೆಸ್ಸಿನ ಹಲವು ಶಾಸಕರು, ಸಚಿವ ಜಮೀರ್ ಅಹ್ಮದ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಶಿವರಾಜು, ಪದಾಧಿಕಾರಿಗಳಾದ ಹರಿಕೃಷ್ಣ, ವಿನ್ಸೆಂಟ್, ಗಣೇಶ್ ಬಿಳಕಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ:ಮುಡಾ ಹಗರಣದ ಹಿನ್ನೆಲೆ ಬಿಜೆಪಿ ಕಳೆದ ಮೂರು ತಿಂಗಳಿನಿಂದ ಹೋರಾಟ ಪಾದಯಾತ್ರೆ ನಡೆಸಿದೆ. ಅಧಿಕಾರದಲ್ಲಿರುವಾಗ ಈ ಹಗರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಹಾಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ನಿರ್ದೋಷಿಯಾಗಿ ತೀರ್ಪು ಬಂದರೆ ನಂತರ ಸಿಎಂ ಸ್ಥಾನ ಅಲಂಕರಿಸಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.ಯತ್ನಾಳ್‌ರಿಂದ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಂದೇ ಮನೆಯಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಭಿನ್ನಾಭಿಪ್ರಾಯ ಇರುತ್ತದೆ ಹಾಗಾಗಿ ಎಲ್ಲವೂ ಸರಿ ಹೋಗಲಿದೆ ಎಂದರು.
ಅಬಕಾರಿ ಸಚಿವರು ಮತ್ತು ಮುಖ್ಯಮಂತ್ರಿ ಕಚೇರಿಗೂ ಅಧಿಕಾರಿಗಳ ವರ್ಗಾವಣೆಯ ಜಟಾಪಟಿ ನಡೆದಿದೆ. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಅವರ ಮಗ ವರ್ಗಾವಣೆ ವಿಷಯದಲ್ಲಿ ಸಿಎಂ ಕಚೇರಿ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದಾಖಲೆ ಸಮೇತ ದೂರ ನೀಡಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಒತ್ತಡದ ಹಿನ್ನೆಲೆ ಎಸ್ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರದಲ್ಲಿ ಅಧಿಕಾರಿಗಳು ಕೆಲಸ ಮಾಡುವ ವಾತಾವರಣ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.435 ಕೋಟಿ ರು. ಬೆಳೆ ವಿಮೆ ಬಿಡುಗಡೆಬೆಳೆ ವಿಮೆ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರಿಗೆ ಸುಮಾರು 435 ಕೋಟಿ ರು. ಬಿಡುಗಡೆಯಾಗಲಿದ್ದು, 50383 ರೈತರಿಗೆ ಎಕರೆಗೆ 25 ಸಾವಿರ ರು.ಗಳಾದರೂ ವಿಮೆ ಪರಿಹಾರ ಸಿಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.2023-24ರ ಬೆಳೆ ವಿಮೆಗಾಗಿ ಜಿಲ್ಲೆಯಲ್ಲಿ ಸುಮಾರು 50383 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿಗೆ ಇದರ ಜವಾಬ್ದಾರಿ ನೀಡಲಾಗಿತ್ತು. ಕಳೆದ ವರ್ಷ ಬರಗಾಲ ಬಂದಿತ್ತು. ಸುಮಾರು 87 ಸಾವಿರ ಎಕರೆ ಜಮೀನಿನಲ್ಲಿ ಬೆಳೆಯೇ ಇರಲಿಲ್ಲ. 445 ಕೋಟಿ ರು. ಪರಿಹಾರ ನೀಡಬೇಕಿತ್ತು. ಇದರಲ್ಲಿ ರೈತರು ಸುಮಾರು 22.50 ಕೋಟಿ ರು. ವಿಮೆ ಕಟ್ಟಿದ್ದಾರೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಹೆಚ್ಚು ನಷ್ಟ ಉಂಟಾಗಿದೆ. ಇದರ ಜೊತೆಗೆ ಶುಂಠಿ, ಮಾವು ಮೆಣಸು ಕೂಡ ಸೇರಿದೆ. ಆದರೆ, ಸುಮಾರು 48619 ಅಡಕೆ ಬೆಳೆಗಾರರು ವಿಮೆಗಾಗಿ ಅರ್ಜಿ ಹಾಕಿದ್ದಾರೆ. ಸುಮಾರು 84 ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆ ನಷ್ಟವಾಗಿದೆ. 445 ಕೋಟಿ ರು.ಗಳಲ್ಲಿ 435 ಕೋಟಿ ರು. ಅಡಿಕೆ ಬೆಳೆಗೆ ಪರಿಹಾರ ಸಿಗಲಿದೆ. ಇನ್ನು 10 ದಿನಗಳಲ್ಲಿ ರೈತರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಮಾಹಿತಿ ನೀಡಿದರು.