ಸಾರಾಂಶ
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರದಲ್ಲಿ ಉಪಚುನಾವಣೆ ಘೋಷಣೆಯಾಗುವ ನಿರೀಕ್ಷೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಉಪಕದನಕ್ಕೆ ಭರ್ಜರಿಯಾಗಿಯೇ ಸಿದ್ಧತೆ ನಡೆಸುತ್ತಿದ್ದು, ಎರಡೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಲೇ ಇದೆ.ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಶೀಘ್ರ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಳೆದ ಎರಡು ಮೂರು ತಿಂಗಳಿಂದಲೇ ರಾಜಕೀಯ ಚಟುವಟಿಕೆ ಶುರುವಾಗಿತ್ತಾದರೂ ಈಗ ಅದು ಜೋರಾಗಿದೆ. ಯಾವ ಕ್ಷಣದಲ್ಲಾದರೂ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಚುನಾವಣೆ ಎದುರಿಸಲು ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ಕಾರ್ಯ ಮಾಡುತ್ತಿವೆ.
ಗೆಲುವಿಗಾಗಿ ರಣತಂತ್ರ: ಸತತ ನಾಲ್ಕು ಸಲ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ ಶಿಗ್ಗಾಂವಿ ಕ್ಷೇತ್ರ ಸಹಜವಾಗಿಯೇ ಉಪಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದೆ. ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರತಿಷ್ಠೆ ಬಿಜೆಪಿಯದ್ದಾದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕ್ಷೇತ್ರ ಗೆಲ್ಲುವ ಪಣ ತೊಟ್ಟಿದೆ. ಅದಕ್ಕಾಗಿ ಎರಡೂ ಪಕ್ಷಗಳು ಮತ ಶಿಕಾರಿಗಾಗಿ ರಣತಂತ್ರ ರೂಪಿಸುತ್ತಿವೆ. ಕ್ಷೇತ್ರದಲ್ಲಿ ಯಾವ ಸಮಾಜದ ಮತಗಳು ಹೆಚ್ಚಿವೆ ಎಂಬುದು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ನಾಯಕರು ಗೆಲುವಿನ ಲೆಕ್ಕಾಚಾರದಲ್ಲಿ ಯಾರಿಗೆ ಟಿಕೆಟ್ ನೀಡಿದರೆ ಪ್ಲಸ್ ಆಗುತ್ತದೆ ಎಂಬುದರ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು, ಪಕ್ಷದ ಪದಾಧಿಕಾರಿಗಳನ್ನು ಚುನಾವಣೆಗೆ ಸಜ್ಜುಗೊಳಿಸುವ ಕಾರ್ಯ ಎರಡೂ ಪಕ್ಷಗಳಿಂದ ಆಗುತ್ತಿದೆ.ಆಕಾಂಕ್ಷಿಗಳಿಗೆ ಟಾಸ್ಕ್: ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಈಗಾಗಲೇ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ಸಂಪ್ರದಾಯ ಮುಗಿದಿದೆ. ಬಿಜೆಪಿಯಿಂದ 57 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರೆ, ಕಾಂಗ್ರೆಸ್‌ನಿಂದ 16 ಆಕಾಂಕ್ಷಿಗಳು ಟಿಕೆಟ್ ಕೇಳಿದ್ದಾರೆ. ಅವರಿಗೆಲ್ಲ ಆಯಾ ಪಕ್ಷಗಳ ನಾಯಕರು ಸದಸ್ಯತ್ವ ನೋಂದಣಿ ಟಾಸ್ಕ್ ನೀಡಿದ್ದಾರೆ. ನೈಜ ಟಿಕೆಟ್ ಆಕಾಂಕ್ಷಿಗಳು ಸದಸ್ಯತ್ವ ನೋಂದಣಿ ಅಭಿಯಾನ ಶುರುಮಾಡಿದ್ದಾರೆ. ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳೆಲ್ಲ ಒಂದಾಗಿ ತಮ್ಮಲ್ಲಿನ ಭಿನ್ನಮತ ಮರೆತು ಮೆಂಬರ್‌ಶಿಪ್ ಮಾಡಿಸುತ್ತಿದ್ದಾರೆ. ಕ್ಷೇತ್ರದ ೨೪೧ ಬೂತ್‌ಗಳಲ್ಲಿ ತಲಾ 20 ಸದಸ್ಯರು, ಓರ್ವ ಬಿಎಲ್‌ಓ ಒಳಗೊಂಡ ಸಮಿತಿ ಮಾಡಿರುವ ಕೈ ಪಡೆ ಚುನಾವಣೆಗೆ ರಣಕಹಳೆ ಮೊಳಗಿಸಲು ಸನ್ನದ್ಧವಾಗಿದೆ. ಇನ್ನು ಕಮಲ ಪಡೆ ಕೂಡ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಹಾಲಿ, ಮಾಜಿ ಶಾಸಕರ ನೇತೃತ್ವದಲ್ಲಿ ತಂಡ ರಚನೆ ಮಾಡಿ ೯ ಶಕ್ತಿ ಕೇಂದ್ರಗಳ ಜವಾಬ್ದಾರಿ ಹಂಚಿಕೆ ಮಾಡಿದೆ. ಪ್ರತಿ ಬೂತ್‌ನಲ್ಲಿ ೪೦೦ರಿಂದ ೫೦೦ ಸದಸ್ಯತ್ವ ಮಾಡಿಸುವ ಗುರಿಯನ್ನು ಆಕಾಂಕ್ಷಿಗಳಿಗೆ ನೀಡಿದೆ. ಹೆಚ್ಚಿನ ಸದಸ್ಯತ್ವ ಮಾಡಿಸುವ ಮೂಲಕ ಸ್ಥಳೀಯವಾಗಿ ಪಕ್ಷ ಬಲವರ್ಧನೆಗೆ ಎರಡೂ ಪಕ್ಷಗಳು ಯೋಜನೆ ರೂಪಿಸಿವೆ.
ಹಿಂದಿನ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತ ಅಭ್ಯರ್ಥಿ ಪರಾಭವಗೊಂಡಿರುವ ಕಾರಣಕ್ಕೆ ಈ ಸಲ ಬೇರೆ ಸಮಾಜದವರಿಗೆ ನೀಡಬೇಕು ಎಂಬ ಚರ್ಚೆ ನಡೆದಿದೆ. ಆದರೆ, ಅಲ್ಪಸಂಖ್ಯಾತ ಮತದಾರರು ಹೆಚ್ಚಿರುವುದರಿಂದ ಕಡೆಗಣಿಸಿದರೆ ಸಮಸ್ಯೆಯಾದೀತು ಎಂಬ ಆತಂಕವೂ ಕೈ ನಾಯಕರಲ್ಲಿದೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ, ಸಂಜೀವಕುಮಾರ ನೀರಲಗಿ, ರಾಜೇಶ್ವರಿ ಪಾಟೀಲ, ಆರ್.ಶಂಕರ್, ರಾಜು ಕುನ್ನೂರ ಮೊದಲಾದವರು ಕೈ ಟಿಕೆಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.ಬಿಜೆಪಿಯಿಂದ ಯಾರಿಗೆ ಟಿಕೆಟ್ ಎಂಬುದು ತೀವ್ರ ಚರ್ಚೆಯಲ್ಲಿರುವ ವಿಷಯವಾಗಿದೆ. ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುತ್ತಾರೋ ಅಥವಾ ಬೇರೆಯವರಿಗೆ ಅವಕಾಶ ನೀಡುತ್ತಾರೆ ಎಂಬ ಕುತೂಹಲವಿದೆ. ಮುರುಗೇಶ ನಿರಾಣಿ ಹೆಸರು ಕೂಡ ಕೇಳಿಬರುತ್ತಿದೆ. ಸ್ಥಳೀಯರಾದ ಶ್ರೀಕಾಂತ ದುಂಡಿಗೌಡ್ರ, ಶೋಭಾ ನಿಸ್ಸೀಮಗೌಡ್ರ, ಶಶಿಧರ ಯಲಿಗಾರ ಸೇರಿದಂತೆ ಅನೇಕರು ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದು, ಬಸವರಾಜ ಬೊಮ್ಮಾಯಿ ಅವರು ಹೇಳಿದ ಹೆಸರು ಫೈನಲ್ ಆಗುವುದು ನಿಶ್ಚಿತ.