ಜನಪ್ರತಿನಿಧಿಯಾದವನು ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. ತಾಲೂಕಿನ ಯಡಜಿಗಳೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಳೆಹಳ್ಳಿ ಗ್ರಾಮದ ಸಿಮೆಂಟ್ ರಸ್ತೆ ಮತ್ತು ನೂತನ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸಾಗರ
ಜನಪ್ರತಿನಿಧಿಯಾದವನು ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.ತಾಲೂಕಿನ ಯಡಜಿಗಳೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಳೆಹಳ್ಳಿ ಗ್ರಾಮದ ಸಿಮೆಂಟ್ ರಸ್ತೆ ಮತ್ತು ನೂತನ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಮಾತನಾಡಿದ, ಕೆಲಸಗಳು ಮಾತ್ರ ಅಭಿವೃದ್ಧಿಯಲ್ಲ. ಜನಸಾಮಾನ್ಯನ ದುಃಖ ಆಲಿಸುವ ಮಾನವೀಯ ಗುಣ ಜನಪ್ರತಿನಿಧಿಗೆ ಇರಬೇಕು ಎಂದರು.ರಾಜ್ಯ ಸರ್ಕಾರ ಗ್ರಾಮೀಣ ರಸ್ತೆ ಅಭಿವೃದ್ದಿಗೆ ವಿಶೇಷ ಒತ್ತು ನೀಡಿದೆ. ದಶಕಗಳಿಂದ ರಸ್ತೆಯನ್ನೇ ಕಾಣದ ಬಾಳೆಹಳ್ಳಿ ಗ್ರಾಮಕ್ಕೆ ಸಿಮೆಂಟ್ ರಸ್ತೆ ನಿರ್ಮಿಸಿ ಸಂಪರ್ಕಕ್ಕೆ ಅವಕಾಶ ಕಲ್ಪಿಸಿದ್ದು ಆತ್ಮಸಂತೋಷ ನೀಡಿದೆ. ತಾಲೂಕಿನ ಎಲ್ಲ ಭಾಗಗಳಲ್ಲೂ ಹಂತಹಂತವಾಗಿ ಸಂಪರ್ಕ ರಸ್ತೆ ನಿರ್ಮಾಣ ಮಾಡಿಕೊಡುತ್ತೇನೆ. ಜತೆಗೆ ಗ್ರಾಮೀಣ ದೇವಸ್ಥಾನಗಳ ಅಭಿವೃದ್ದಿಗೆ ಒತ್ತು ನೀಡಿದ್ದು, 126 ದೇವಸ್ಥಾನಕ್ಕೆ ಮೊದಲ ಹಂತದಲ್ಲಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಸಾಮಾಜಿಕ ಕಾರ್ಯಕರ್ತ ಶ್ರೀಧರಮೂರ್ತಿ ಮಾತನಾಡಿ, ಶಾಸಕರ ಸೇವಾ ಮನೋಭಾವ, ಎಲ್ಲರಿಗೂ ಸ್ಪಂದಿಸುವ ಗುಣ ಅನುಕರಣೀಯವಾದದ್ದು. ಬಾಳೆಹಳ್ಳಿ ರಸ್ತೆ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ಗ್ರಾಮಸ್ಥರು ಮಾಡಿಕೊಂಡ ಮನವಿಗೆ ಶಾಸಕರು ಸ್ಪಂದಿಸಿದ್ದಾರೆ ಎಂದರು.ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಜಯಪ್ರಕಾಶ್ ಮಾವಿನಕುಳಿ, ಗಿರೀಶ್, ರಾಮಚಂದ್ರ, ರಾಘವೇಂದ್ರ, ನವನೀತ್ ಇನ್ನಿತರರು ಹಾಜರಿದ್ದರು.ನೋವಿಗೆ ಸ್ಪಂದಿಸಿದ ಶಾಸಕರು: ನಮ್ಮ ಸ್ನೇಹಿತರೊಬ್ಬರು ತಮ್ಮ ಪತ್ನಿಯನ್ನು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ತಾಯಿ-ಮಗು ಸ್ಥಿತಿ ಗಂಭೀರವಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕು, ಇದಕ್ಕೆ ೪೦ಸಾವಿರ ರೂ. ವೆಚ್ಚವಾಗುತ್ತದೆ ಎಂದರು. ಆದರೆ ಅವರು ಬಡವರಾಗಿದ್ದು ನನ್ನ ಹತ್ತಿರ ಹೇಳಿದರು. ತಕ್ಷಣ ನಾನು ಶಾಸಕರಿಗೆ ಫೋನ್ ಮಾಡಿ ತಿಳಿಸಿದಾಗ ಶಾಸಕರು ವೈದ್ಯರಿಗೆ ಫೋನ್ ಮೂಲಕ ಸೂಚನೆ ನೀಡಿದ್ದರು. ತಕ್ಷಣ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ತಾಯಿ-ಮಗು ಆರೋಗ್ಯದಿಂದ ಹೊರಗೆ ಬಂದರು. ಆ ಕುಟುಂಬವು ಹುಟ್ಟಿದ ಗಂಡು ಮಗುವಿಗೆ ಗೋಪಾಲಕೃಷ್ಣ ಎಂದು ಹೆಸರು ಇಟ್ಟಿದ್ದು, ಈಗ ಮಗುವಿಗೆ ಎರಡು ವರ್ಷ ಎಂದು ಶ್ರೀಧರಮೂರ್ತಿ ನೆನಪಿಸಿಕೊಂಡರು.