ಕಾಫಿ ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು : ದಿನೇಶ್

| Published : Nov 07 2024, 12:33 AM IST / Updated: Nov 07 2024, 12:34 AM IST

ಸಾರಾಂಶ

ಚಿಕ್ಕಮಗಳೂರು, ಭಾರತ ದೇಶಕ್ಕೆ ಕಾಫಿ ಉದ್ಯಮ ಮತ್ತು ಬೆಳೆಗಾರರ ಬೆವರಿನ ಫಲವಾಗಿ ಅತೀ ಹೆಚ್ಚು ವಿದೇಶಿ ವಿನಿಮಯ ಕೇಂದ್ರ ಸರ್ಕಾರಕ್ಕೆ ಬರುತ್ತಿದ್ದು, ಇದಕ್ಕೆ ಪೂರಕ ವಾತಾವರಣವನ್ನು ಅಧಿಕಾರಿಗಳು ನಿರ್ಮಾಣ ಮಾಡಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.

ಕಾಫಿ ಬೆಳೆಗಾರರು ಮತ್ತು ಕಾಫಿ ಮಂಡಳಿಯ ವಿಶೇಷ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಾರತ ದೇಶಕ್ಕೆ ಕಾಫಿ ಉದ್ಯಮ ಮತ್ತು ಬೆಳೆಗಾರರ ಬೆವರಿನ ಫಲವಾಗಿ ಅತೀ ಹೆಚ್ಚು ವಿದೇಶಿ ವಿನಿಮಯ ಕೇಂದ್ರ ಸರ್ಕಾರಕ್ಕೆ ಬರುತ್ತಿದ್ದು, ಇದಕ್ಕೆ ಪೂರಕ ವಾತಾವರಣವನ್ನು ಅಧಿಕಾರಿಗಳು ನಿರ್ಮಾಣ ಮಾಡಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.ನಗರದ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ನಡೆದ ಜಿಲ್ಲೆಯ ಕಾಫಿ ಬೆಳೆಗಾರರು ಮತ್ತು ಕಾಫಿ ಮಂಡಳಿ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಲಸೆ ಕಾರ್ಮಿಕರಿಗೆ ಕಾಫಿ ಬೆಳೆಗಾರರು ಸೌಜನ್ಯದಿಂದ ಎಲ್ಲಾ ರೀತಿ ಸೌಲಭ್ಯಗಳ ಜೊತೆಗೆ ಕೆಲಸ ಕೊಟ್ಟು ಉತ್ತಮ ವೇತನ ನೀಡುತ್ತಿದ್ದಾರೆ. ಆದರೆ, ಹಿಂದೆ ಯಾವುದೇ ಸರ್ಕಾರದ ಪ್ರಾಯೋಜಕತ್ವದ ಸಹಾಯ ಕಾಫಿ ಬೆಳೆಗಾರರಿಗೆ ಇರಲಿಲ್ಲ ಎಂದು ಹೇಳಿದರು.ಕಾಫಿ ಬೆಳೆಗಾರರ ಬದುಕಿಗೆ ಮತ್ತು ಕಾಫಿ ತೋಟಗಳ ನಿರ್ವಹಣೆಗೆ ವಲಸೆ ಕಾರ್ಮಿಕರು ಆಸರೆ ಆಗಿದ್ದರು. ಅದಕ್ಕೆ ನಾವೆಲ್ಲರೂ ಕೊಡುಗೆ ನೀಡಿದ್ದೇವೆ. ಜೊತೆಗೆ ಕಾರ್ಮಿಕರ ಹಸಿವು ನೀಗಿಸುವ ಕೆಲಸವನ್ನು ಬೆಳೆಗಾರರು ಮಾಡುತ್ತಿದ್ದಾರೆ. ಇಂದು ಕಾರ್ಮಿಕರ ಕೊರತೆ ಜೊತೆಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಅದಕ್ಕೆ ಪೂರಕವಾಗಿ ದೇಶದ ಬೇರೆ ಬೇರೆ ಭಾಗದಿಂದ ಕಾರ್ಮಿಕರು ಆಗಮಿಸುತ್ತಿದ್ದು ಇವರು ಬರುವುದು ಬೇಡ ಎಂದು ಹೇಳುವ ಬದಲಾಗಿ ಕಾರ್ಮಿಕರಿಂದ ಪೂರಕ ದಾಖಲೆಗಳನ್ನು ಪಡೆಯಬೇಕೆಂಬುದು ನಿಯಮವಾಗಿದೆ ಎಂದರು.

ನಾಗರಿಕ ಬಂದೂಕು ಪರವಾನಗಿ ನವೀಕರಣ ಮಾಡುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಸಾಗಾಣೆ ಮಾಡುತ್ತಿದ್ದಾಗ ತಡೆದು ಬಂದೂಕು ವಶಪಡಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದು, ಇದು ಅನಿವಾರ್ಯವಾಗಿದ್ದರೂ ಇಲಾಖೆಯೊಂದಿಗೆ ಸಹಕರಿಸುವುದು ಬೆಳೆಗಾರರ ಕರ್ತವ್ಯ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ಜಿಲ್ಲೆಯಲ್ಲಿ ತುಂಬಾ ಬೇಡಿಕೆ ಇರುವ ನಾಗರಿಕ ಬಂದೂಕು ತರಬೇತಿಯನ್ನು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ಜನವರಿಯಲ್ಲಿ ನೀಡಲು ಯೋಜನೆ ರೂಪಿಸಿದ್ದೇವೆ ಎಂದರು.ಈಗಾಗಲೇ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಪರವಾನಗಿ ಸಹಿತ ಬಂದೂಕುಗಳಿವೆ. ಈ ಪೈಕಿ ಪರವಾನಗಿ ಪಡೆದಿರುವವರಲ್ಲಿ ಬಹುತೇಕರು ಬಂದೂಕು ಉಪಯೋಗಿಸುವ ಕುರಿತು ತರಬೇತಿ ಹೊಂದಿಲ್ಲ ಎಂಬುದು ಪರಿಶೀಲಿಸಿದಾಗ ತಿಳಿದು ಬಂದಿದೆ ಎಂದು ಹೇಳಿದರು.ಕಳೆದ 2 ವರ್ಷಗಳಿಂದ ಈ ತರಬೇತಿ ನೀಡಲಾಗಿಲ್ಲ, ಜಿಲ್ಲೆಯಲ್ಲಿ 3 ಭಾಗದಲ್ಲಿ ತರಬೇತಿ ನೀಡಲು ಯೋಜನೆ ರೂಪಿಸಿದ್ದು, ಈ ಅವಧಿಯಲ್ಲಿ ತರಬೇತಿ ಪಡೆದವರು ಮನೆಯಲ್ಲಿರುವ ಬಂದೂಕು ಸಾಗಣೆಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು.

ವಲಸೆ ಕಾರ್ಮಿಕರು ಉತ್ತರ ಭಾರತದ ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಯ ಕಾಫಿ ತೋಟಗಳಿಗೆ ಆಗಮಿಸುತ್ತಿದ್ದಾರೆ. ಆದರೆ, ಕಾಫಿ ಬೆಳೆಗಾರರು ಕಾರ್ಮಿಕರ ಸಂಪೂರ್ಣ ದಾಖಲೆ ಪರಿಶೀಲಿಸಿ ನಿರ್ವಹಣೆ ಮಾಡುವ ಜೊತೆಗೆ ಅವರ ಆಧಾರ್ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮುಂತಾದ ದಾಖಲೆಗಳನ್ನು ಪಡೆದು ಸ್ಥಳೀಯ ಪೊಲೀಸ್ ಇಲಾಖೆಗೆ ನೀಡಿದಾಗ ವಲಸೆ ಕಾರ್ಮಿಕರು ಕ್ರಿಮಿನಲ್ ಹಿನ್ನೆಲೆ ಉಳ್ಳವರೇ, ಇಲ್ಲವೇ ಎಂಬುದು ತಿಳಿಯುತ್ತದೆ ಎಂದರು.

ಕಾಫಿ ತೋಟಕ್ಕೆ ಸಂಬಂಧಿಸಿದ ಕಾಫಿ ಬೆಳೆಗಾರರು ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುವ ಜೊತೆಗೆ ಪಿಎಸ್‌ಐ, ಆರ್‌ಎಫ್‌ಓ, ಕಾರ್ಮಿಕ ಇಲಾಖೆ ಇನ್ಸ್‌ಪೆಕ್ಟರ್ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ ಮೋಹನ್ ಕುಮಾರ್ ಮಾತನಾಡಿ, ಕಾಫಿ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.ಸಭೆಯಲ್ಲಿ ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ, ರತೀಶ್ ಕುಮಾರ್, ಉತ್ತಮ್, ಟಿ.ಡಿ. ಮಲ್ಲೇಶ್, ಬಾಲಕೃಷ್ಣ, ಮನೋಹರ್, ಎಂ.ಎಸ್.ಲಿಂಗಪ್ಪಗೌಡ, ಎಚ್.ಎಂ. ಶ್ರೀಧರ್, ಮಹೇಂದ್ರ, ವೆಂಕಟೇಗೌಡ, ರತ್ನಾಕರ್, ಸುರೇಶ್, ಜಯರಾಜ್, ನಾಗಭೂಷಣ್, ಕೊಳಗಾವೆ ರವಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಸ್ವಾಗತಿಸಿದರು. 6 ಕೆಸಿಕೆಎಂ 3ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ನಡೆದ ಜಿಲ್ಲೆಯ ಕಾಫಿ ಬೆಳೆಗಾರರು ಮತ್ತು ಕಾಫಿ ಮಂಡಳಿಯ ವಿಶೇಷ ಸಭೆಯನ್ನು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಉದ್ಘಾಟಿಸಿದರು. ಎಸ್ಪಿ ಡಾ. ವಿಕ್ರಂ ಅಮಟೆ, ಮೋಹನ್‌ಕುಮಾರ್‌, ವೆಂಕಟರೆಡ್ಡಿ, ರತೀಶ್‌ಕುಮಾರ್‌ ಇದ್ದರು.