ಕಾಸರಕೋಡು ವಾಣಿಜ್ಯ ಬಂದರು ವಿವಾದಕ್ಕೆ ಅಂತ್ಯವೆಂದು?

| Published : Feb 02 2024, 01:01 AM IST

ಕಾಸರಕೋಡು ವಾಣಿಜ್ಯ ಬಂದರು ವಿವಾದಕ್ಕೆ ಅಂತ್ಯವೆಂದು?
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಮಾರ್ದನಿಸಿದ್ದ ಕಾಸರಕೋಡು ವಾಣಿಜ್ಯ ಬಂದರು ವಿವಾದ ತದನಂತರದಲ್ಲಿ ನ್ಯಾಯಾಲಯದ ವಿಚಾರಣೆಯಿಂದ ಕಾಮಗಾರಿ ಸ್ಥಗಿತವಾಗಿತ್ತು. ಆಗೊಮ್ಮೆ,ಈಗೊಮ್ಮೆ ಎಂಬಂತೆ ಮೀನುಗಾರರು-ಪೋರ್ಟ್‌ ಕಂಪನಿ ನಡುವೆ ಶೀತಲ ಸಮರ ನಡೆಯುತ್ತಿತ್ತು.

ಹೊನ್ನಾವರ

ತಾಲೂಕಿನ ಕಾಸರಕೋಡು ವಾಣಿಜ್ಯ ಬಂದರು ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಮಾರ್ದನಿಸಿದ್ದ ಕಾಸರಕೋಡು ವಾಣಿಜ್ಯ ಬಂದರು ವಿವಾದ ತದನಂತರದಲ್ಲಿ ನ್ಯಾಯಾಲಯದ ವಿಚಾರಣೆಯಿಂದ ಕಾಮಗಾರಿ ಸ್ಥಗಿತವಾಗಿತ್ತು. ಆಗೊಮ್ಮೆ,ಈಗೊಮ್ಮೆ ಎಂಬಂತೆ ಮೀನುಗಾರರು-ಪೋರ್ಟ್‌ ಕಂಪನಿ ನಡುವೆ ಶೀತಲ ಸಮರ ನಡೆಯುತ್ತಿತ್ತು. ಇತ್ತೀಚೆಗೆ ಕಾಸರಕೋಡ್‌ನಲ್ಲಿ ಭೂಗತ ಪಾತಕಿಗಳು ಎಂಟರ್ ಆಗಿ ಮೀನುಗಾರರ ಮೇಲೆ ದೌರ್ಜನ್ಯ ನಡೆಸುತ್ತಿದ್ದರು ಎನ್ನುವ ಆರೋಪ ಸಹ ಕೇಳಿ ಬಂದಿತ್ತು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಬುಧವಾರ ಹೈಟೈಡ್ ಲೈನ್ ಗುರುತಿಸಲು ಸರ್ವೇ ಕಾರ್ಯಕ್ಕೆ ಎಸಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಸರ್ವೇ ವಿಚಾರವಾಗಿ ಅಧಿಕಾರಿಗಳು, ಕಡಲಮಕ್ಕಳ ನಡುವೆ ವಾಗ್ವಾದ ನಡೆದಿತ್ತು. 5 ಗಂಟೆಯ ನಂತರ ಪೊಲೀಸ್ ಅಧಿಕಾರಿಗಳು ಸರ್ವೇಗೆ ಅಡ್ಡಿಪಡಿಸಿ ಪ್ರತಿಭಟಿಸಿದವರ ಬಂಧಿಸಿ ಠಾಣೆಗೆ ಕರೆದೊಯ್ದರು. ಈ ವೇಳೆ ಹಲವರಿಗೆ ಗಾಯನೋವಾಗಿತ್ತು ಎನ್ನುವ ಆರೋಪ ಕೇಳಿ ಬಂದಿದೆ. ಮಹಿಳಾ ಮೀನುಗಾರರ ತಲೆಕೂದಲು ಎಳದಾಡಿ ಬಂಧಿಸಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ದೌರ್ಜನ್ಯಕ್ಕೆ ಹಲವರು ಖಂಡನೆ ವ್ಯಕ್ತಪಡಿಸಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಡುವವರ ಮೇಲೆ ಏಕೆ ಈ ದೌರ್ಜನ್ಯ, ಮಾನವೀಯತೆ ಮರೆತರಾ ಅಧಿಕಾರಿಗಳು ಎನ್ನುವ ಅಭಿಪ್ರಾಯ ಕೇಳಿ ಬಂದವು.ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂದರು ವಿವಾದ ಭುಗಿಲೆದ್ದು ರಾಜಕೀಯ ಕೆಸರೆರಚಾಟಕ್ಕೆ ನಾಂದಿಯಾಗಿತ್ತು. ಒಂದೊಮ್ಮೆ ಮೀನುಗಾರರ ಮನೆ ಕೆಡವಲು ಮಂದಾದರೆ ಆ ಸ್ಥಳದಲ್ಲಿ ನಾನು ಬಂದು ಮಲಗುತ್ತೇನೆ ಎಂದು ಅಂದು ಕ್ಷೇತ್ರದ ಶಾಸಕರಾಗಿದ್ದ ಸುನೀಲ್ ನಾಯ್ಕ ಹೇಳಿದ್ದರು. ವಿವಾದಿತ ಸ್ಥಳಕ್ಕೆ ಜು. 7, 2021ರಂದು ಡಿ.ಕೆ. ಶಿವಕುಮಾರ, ಮಂಕಾಳ ವೈದ್ಯ, ಶಾರದಾ ಶೆಟ್ಟಿ ಅವರೊಂದಿಗೆ ಭೇಟಿ ನೀಡಿದ್ದರು. ಒಬ್ಬ ಮೀನುಗಾರ ಹತ್ತಾರು ಜನಕ್ಕೆ ಉದ್ಯೋಗ ಕೊಡುತ್ತಾನೆ. ತಮ್ಮ ವೃತ್ತಿ ನಂಬಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಾರೆ. ಎಲ್ಲ ಜೀವನದ ಕನಸುಗಳನ್ನು ಬದಿಗೊತ್ತಿ ದೇವರ ನಂಬಿ ಸಮುದ್ರಕ್ಕಿಳಿಯುತ್ತಾರೆ. ದುಡಿಮೆ ಅಲ್ಲ ಅದು ಜೀವನವಾಗಿದೆ. ಇದು ರಾಜಕೀಯ ಮಾಡುವ ಸಂದರ್ಭವಲ್ಲ, ಸಂಕಷ್ಟ ಆಲಿಸುವ ಸಂದರ್ಭ. ಅದಕ್ಕಾಗಿ ನೇರವಾಗಿ ಮೀನುಗಾರ ಭೇಟಿಯಾಗಲು ಬಂದಿದ್ದೇನೆ. ಮೀನುಗಾರ ಬೇಡಿಕೆಯ ಕುರಿತು ಇಪ್ಪತ್ತು ವಿಚಾರ ಚರ್ಚಿಸಿದ್ದೇನೆ. ಅಭಿವೃದ್ಧಿ ಆಗಬೇಕು ನಿಜ, ಆದರೆ ಬಂದರು ನಿರ್ಮಾಣಕ್ಕೆ ಖಾಸಗಿಯವರಿಗೆ ಇಲ್ಲೆ ನೀಡಬೇಕಿಂದಿಲ್ಲ. ಪಾರಂಪರಿಕವಾಗಿ ಬದುಕು ಕಟ್ಟಿಕೊಂಡು ಬಂದವರ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಯಾವುದೇ ಪೊಲೀಸ್ ಬರಲಿ, ಯಾರೇ ಬರಲಿ ನಿಮ್ಮ ನೆಲ ಬಿಡಬೇಡಿ ಎಂದು ಮೀನುಗಾರಿಗೆ ಕರೆ ನೀಡಿದ್ದರು. ಈ ವಿಡಿಯೋ ಸಹ ಇದೀಗ ವೈರಲ್ ಆಗುತ್ತಿದೆ.ಇದೀಗ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರ್ಕಾರ. ಅಂದು ಮಾಜಿ ಸಚಿವರಾಗಿ ಬಂದಿದ್ದ ಡಿಕೆಶಿ ಈಗ ಡಿಸಿಎಂ. ಕ್ಷೇತ್ರದವರೆ ಆದ ಮಂಕಾಳ ವೈದ್ಯರು ಇದೀಗ ಮೀನುಗಾರಿಕೆ ಇಲಾಖೆ ಸಚಿವರು. ಈ ವಿಚಾರದಲ್ಲಿ ಸರ್ಕಾರ, ಸಚಿವರ ಮುಂದಿನ ನಿಲುವು ಏನು ಎನ್ನುವುದರ ಬಗ್ಗೆ ವ್ಯಾಪಕ ಚರ್ಚೆ ಬುಗಿಲೆದ್ದಿದೆ.