ಸಾರಾಂಶ
ಜಿಲ್ಲಾಮಟ್ಟದ ಮಾರಾಟ ಮೇಳ । 20ಕ್ಕೂ ಹೆಚ್ಚು ಮಳಿಗೆಗಳು
ಕನ್ನಡಪ್ರಭ ವಾರ್ತೆ ದಾವಣಗೆರೆನಗರದ ಹೈಸ್ಕೂಲ್ ಶಾಲಾ ಆವರಣದಲ್ಲಿ ಶನಿವಾರ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಸಂಜೀವಿನಿ ಸ್ವ ಸಹಾಯ ಗುಂಪುಗಳ ಉತ್ಪಾದಿತ ಉತ್ಪನ್ನಗಳ ಜಿಲ್ಲಾ ಮಟ್ಟದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ’ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ಮೇಳದಲ್ಲಿ ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು ಹಾಗೂ ನ್ಯಾಮತಿ ತಾಲೂಕಿನ ಒಟ್ಟು 39 ಸ್ವ-ಸಹಾಯ ಗುಂಪುಗಳ ಸದಸ್ಯರು ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಸುಮಾರು 20ಕ್ಕೂ ಹೆಚ್ಚು ಮಳಿಗೆಗಳನ್ನು ಒದಗಿಸಲಾಗಿದ್ದು, ವಸ್ತುಪ್ರದರ್ಶನ ಮಳಿಗೆಗಳಿಗೆ ದಂಡು ದಂಡೋಪಾದಿಯಲ್ಲಿ ಜನರು ಬಂದ ದೃಶ್ಯ ಕಂಡುಬಂದಿತು. ಅದರಲ್ಲೂ ಪ್ರಮುಖವಾಗಿ ಜಿಲ್ಲೆಯ ವಿವಿಧ ಸ್ವ-ಸಹಾಯ ಗುಂಪುಗಳು ಉತ್ಪಾದಿಸಿರುವ ತಿಂಡಿ ತಿನಿಸುಗಳು, ಆಯುರ್ವೇದಿಕ್ ಹೇರ್ ಆಯಿಲ್, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಕರ ಕುಶಲತೆಯಿಂದ ತಯಾರಿಸಿದ ವೈರ್ ಬ್ಯಾಗ್, ಜ್ಯೂಟ್ ಬ್ಯಾಗ್, ಅಲಂಕಾರಿಕ ವಸ್ತುಗಳು, ರಾಗಿ ಹಾಗೂ ಟೊಮಾಟೊದಿಂದ ಮಾಡಿದ ಹಪ್ಪಳ, ಉಪ್ಪಿನಕಾಯಿ, ಖಾರದ ಪುಡಿ ಹಾಗೂ ದೇಶಿಯವಾಗಿ ತಯಾರಿಸಿದ ಆಹಾರ ಪದಾರ್ಥಗಳು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳು ನೋಡುಗರ ಕಣ್ಮನ ಸೆಳೆಯಿತು.ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಮಗಿಷ್ಟವಾದ ಕರಕುಶಲ ವಸ್ತು, ಸಿಹಿ ತಿನಿಸು ಮುಂತಾದ ಉತ್ಪನ್ನಗಳನ್ನು ಖರೀದಿಸಿದರು. ಸ್ವ-ಸಹಾಯ ಸಂಘದ ಸದಸ್ಯರನ್ನು ಬೆಂಬಲಿಸಿದರು. ಅಷ್ಟೇ ಅಲ್ಲದೇ ಸಾರ್ವಜನಿಕರು ಕೂಡ ವಸ್ತುಪ್ರದರ್ಶನ ಮಳಿಗೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಆಕರ್ಷಕ ಉತ್ಪನ್ನಗಳ ಖರೀದಿಯನ್ನೂ ಮಾಡಿದರು.
ವಸ್ತುಪ್ರದರ್ಶನ ಇನ್ನೂ 4 ದಿನಗಳವರೆಗೂ ಮುಂದುವರಿಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿ, ಆಸಕ್ತರು ಖರೀದಿ ಮಾಡಬಹುದು.ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಯೋಜನಾ ನಿರ್ದೇಶಕಿ ರೇಷ್ಮ ಕೌಸರ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ನಿರ್ದೇಶಕ ಬೋಜರಾಜ್, ಮತ್ತಿತರರು ಇದ್ದರು.