ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ಗೋವಿಂದ ಕಾರಜೋಳ ಹೇಳಿದರು.ವಕೀಲರ ಭವನದಲ್ಲಿ ಶನಿವಾರ ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಲ್ಲಿ ಜಿಲ್ಲೆಯ ರೈತರ, ಜನಸಾಮಾನ್ಯರ, ದುಡಿಯುವ ವರ್ಗದವರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ತಮ್ಮ ಬಳಿ ಬಂದು ಮತ ಯಾಚಿಸಿದಾಗ ವಿಶ್ವಾಸ, ನಂಬಿಕೆಯಿಟ್ಟು ನರೇಂದ್ರ ಮೋದಿ ಅವರು ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಲೆಂದು ನನ್ನನ್ನು ಗೆಲ್ಲಿಸಿದ್ದೀರಿ. ಅದೆ ರೀತಿ ಸಿರಾ, ಪಾವಗಡದಲ್ಲೂ ಹೆಚ್ಚಿನ ಮತಗಳನ್ನು ನೀಡಿದ್ದಾರೆ. ನನ್ನ ಇತಿಮಿತಿಯೊಳಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತೇನೆ. ಹಾಗೆಯೆ ರಾಜ್ಯ ಸರ್ಕಾರದಿಂದ ಆಗುವ ಕೆಲಸಗಳನ್ನು ಮಾಡಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದು ವಕೀಲರಿಗೆ ಭರವಸೆ ನೀಡಿದರು.ವಕೀಲರ ಸಂಘಕ್ಕೆ ಕಂಪ್ಯೂಟರ್ ಹಾಗೂ ಬೆರಳಚ್ಚು ಕೊಠಡಿ, ಸ್ಟೇಷನರಿ ಅಂಗಡಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿ ಹೊಸ ಕಟ್ಟಡ ನಿರ್ಮಿಸಿ ಕೊಡುವಂತೆ ವಕೀಲರ ಸಂಘದವರು ಸಲ್ಲಿಸಿದ ಮನವಿಗೆ ತಕ್ಷಣವೇ ಸ್ಪಂದಿಸಿದ ಗೋವಿಂದ ಕಾರಜೋಳ ವೇದಿಕೆಯಲ್ಲೇ ಎಸ್ಟಿಮೇಷನ್ ತಯಾರಿಸಿ ತರುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರನ್ನು ಮೊಬೈಲ್‍ನಲ್ಲಿ ಸಂಪರ್ಕಿಸಿ ಸೂಚಿಸಿದರು.ಈಗಿರುವ ನ್ಯಾಯಾಲಯದ ಕಟ್ಟಡ 1969 ರಲ್ಲಿ ನಿರ್ಮಾಣವಾಗಿದ್ದು, ಹೊಸ ಕಟ್ಟಡಕ್ಕೆ ₹93 ಕೋಟಿ ಮಂಜೂರಾಗಿದೆ. ರಾಜ್ಯ ಸರ್ಕಾರದಿಂದ ವಿಳಂಭವಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ 5,300 ಕೋಟಿ ರು. ತಕ್ಷಣವೆ ಬಿಡುಗಡೆಗೊಳಿಸಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು. ಅದಕ್ಕೆ ನಿಮ್ಮ ಪ್ರಯತ್ನ ಮುಖ್ಯ ಎಂದು ವೈ.ತಿಪ್ಪೇಸ್ವಾಮಿ ಸಂಸದ ಗೋವಿಂದ ಕಾರಜೋಳ ಅವರಲ್ಲಿ ಕೋರಿದರು.
ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಗಂಗಾಧರ್, ಸಹ ಕಾರ್ಯದರ್ಶಿ ಗಿರೀಶ್ ವಿ.ಮಲ್ಲಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಇದ್ದರು.