ಸಾರಾಂಶ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.10ರಂದು ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್ ಡೈರಿ)ದ ಬೆಂಗಳೂರು ಕೇಂದ್ರ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.
ಕನ್ನಡಪ್ರಭ ವಾರ್ತೆ ಹುಳಿಯಾರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.10ರಂದು ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್ ಡೈರಿ)ದ ಬೆಂಗಳೂರು ಕೇಂದ್ರ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ. ಈ ಸಂಬಂಧ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡ ಸದಸ್ಯರು ಬೇಡಿಕೆ ಈಡೇರುವವರೆಗೂ ಹೋರಾಟ ಮಾಡಲು ನಿರ್ಧಾರ ಮಾಡಿದರು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಬೆಳಗಾವಿ ಅಧಿವೇಶನದ ವೇಳೆಯೂ ಸಹ ಭೇಟಿ ಮಾಡಿ ನಮ್ಮ ಬೇಡಿಕೆ ಕುರಿತು ಮನವಿ ಸಲ್ಲಿಸಲಾಗಿತ್ತು. ಅದನ್ನು ಸಹ ಪರಿಗಣನೆ ಮಾಡಿಲ್ಲ. ಈ ಸಿದ್ದರಾಮಯ್ಯ ಸರ್ಕಾರ ರೈತರ ಪಂಪ್ ಸೆಟ್‌ಗು ಮೀಟರ್ ಅಳವಡಿಸಲು ಹೊರಟಿದೆ. ಹಳ್ಳಿ ಹಳ್ಳಿಗಳಲ್ಲಿಯೂ ರೈತರು ಸಂಘಟಿತರಾಗಿ ರೈತರ ಬದುಕಿಗಾಗಿ ಹೋರಾಟ ಮಾಡಬೇಕು, ಇಲ್ಲವಾದರೇ ಸರ್ಕಾರ ರೈತರನ್ನು ಉಳಿಸಲ್ಲ ಎಂದರು.ನಮ್ಮ ಬೇಡಿಕೆಗಳಾದ ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ 50 ನಿಗದಿಪಡಿಸಬೇಕು, ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡಿ ಹೆಚ್ಚಿನ ಪ್ರೋತ್ಸಾಹ ಧನ ನೀಡಬೇಕು. ಸರ್ಕಾರ ನೀಡುವ ಪ್ರೋತ್ಸಾಹ ಧನ ರೂ 5 ರಿಂದ 10 ರುಪಾಯಿಗೆ ಹೆಚ್ಚಿಸಬೇಕು. ಹಾಲಿನ ಬೆಲೆ ನಿಗದಿಯಲ್ಲಿ ಒಕ್ಕೂಟಗಳು ಸ್ವತಂತ್ರವಾಗಿರಬೇಕು, ಗರಿಷ್ಠ ವೇತನ ಮಿತಿ ನಿಯಮ ಜಾರಿ ಮಾಡಬೇಕು. ಬಾಕಿ ಇರುವ ಸಹಾಯ ಧನ ಬಾಬ್ತು 620 ಕೋಟಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾ ಕಾರ್ಯದರ್ಶಿ ಎಚ್ ಎನ್ ಸತೀಶ್, ಜಿಲ್ಲಾ ಮಹಿಳಾ ಮುಂಖಡರಾದ ಶಶಿಕಲಾ, ತಾಲೂಕು ಉಪಾಧ್ಯಕ್ಷ ಸೀತಾರಾಮಯ್ಯ , ಗಿರೀಶ್ , ಹಸಿರು ಸೇನೆ ಅಧ್ಯಕ್ಷರಾದ ನಾಗರಾಜು, ರೇಣುಕಮ್ಮ ತಾಲೂಕು ಕಾರ್ಯದರ್ಶಿ ಲಕ್ಷ್ಮಮ್ಮ, ಶರತ್, ಷಣ್ಮುಖಯ್ಯ , ಉಪಸ್ಥಿತರಿದ್ದರು.