- ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮ ಸಮಾರೋಪ
- - -ಕನ್ನಡಪ್ರಭ ವಾರ್ತೆ ಹರಿಹರ
ಆದರ್ಶ ಶಿಕ್ಷಕ ಭವಿಷ್ಯದ ಕನಸುಗಳ ರುವಾರಿ ಎಂದು ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ರವಿಕಾಂತೇ ಗೌಡ ತಿಳಿಸಿದರು.ತಾಲೂಕಿನ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಕ್ಷಕರು ಪಾಠ ಬೋಧನೆಯ ಜೊತೆಗೆ ಕೌಶಲ್ಯ, ಭಾಷಾ ನೈಪುಣ್ಯತೆ, ನಡವಳಿಕೆ, ಸಂಪರ್ಕ ಹಾಗೂ ಸಂವಹನ ಕಲೆಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಕೇವಲ ಕಲಿಯುವವರಂತೆ ಅಲ್ಲ, ಭವಿಷ್ಯದ ಕನಸುಗಳನ್ನು ಹೊತ್ತಿರುವ ವ್ಯಕ್ತಿತ್ವಗಳೆಂದು ಕಾಣಬೇಕು ಎಂದು ಸಲಹೆ ನೀಡಿದರು.
ನಾವು ಕಾರ್ಯಕ್ರಮದ ಮೂಲಕ ಜ್ಞಾನದೀಪವನ್ನು ಬೆಳಗಿಸಿದ್ದೇವೆ. ಆದರೆ ಆ ದೀಪ ನಿರಂತರವಾಗಿ ಪ್ರಕಾಶಿಸಬೇಕಾದರೆ, ಶಿಕ್ಷಕರು ಸದಾ ವಿದ್ಯಾರ್ಥಿಯಂತೆ ಕಲಿಯುತ್ತಾ ಆಸಕ್ತಿ, ಕೌಶಲ್ಯಗಳೆಂಬ ಎಣ್ಣೆ, ಬತ್ತಿಯನ್ನು ತುಂಬಬೇಕು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಈ ಕಾರ್ಯಾಗಾರ ನಾಂದಿಯಾಗಲಿದ್ದು, ಶಿಕ್ಷಕರು ಸದಾ ವಿದ್ಯಾರ್ಥಿಗೆ ಏನು ಬೇಕು ಎಂಬ ಕಲ್ಪನೆಯೊಂದಿಗೆ ಬೋಧನೆ ರೂಪಿಸಬೇಕು. ಶಿಕ್ಷಕರ ಕೌಶಲ್ಯವೃದ್ಧಿಗೆ ಇಂತಹ ಕಾರ್ಯಾಗಾರಗಳು ಅಗತ್ಯವೆಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಕೆಪಿಎಸ್ಸಿ ಸದಸ್ಯ ರಾಮಕೃಷ್ಣ ಪ್ರಸಾದ್ ಎಂ.ವಿ. ಮಾತನಾಡಿ, ಶಿಕ್ಷಕನಿಗೆ ಕಲಿಕೆಯ ಹಸಿವಿರಬೇಕು, ಆದರಿಂದ ಪ್ರತಿದಿನ ಹೊಸದನ್ನು ಕಲಿಯುತ್ತಾ ಶಿಕ್ಷಕ ಎಂದಿಗೂ ವಿದ್ಯಾರ್ಥಿಯಾಗಿಯೇ ಉಳಿಯಬೇಕು. ಶಿಕ್ಷಣದಲ್ಲಿ ಹೊಸತನ ಅಳವಡಿಸಿಕೊಳ್ಳುವ ಮನೋಭಾವ ಅತ್ಯಗತ್ಯವಾಗಿದ್ದು, ಶಿಕ್ಷಕರು ತಾವು ಮಾಡುವ ಕೆಲಸದಲ್ಲಿ ಸ್ಪಷ್ಟ ಉದ್ದೇಶ ಮತ್ತು ಗುರಿಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಬೋಧನೆ ಪರಿಣಾಮ ವಿದ್ಯಾರ್ಥಿಗಳ ಬದುಕಿನ ಮೇಲೆ ಹೇಗೆ ಬೀರುತ್ತದೆ ಎಂಬ ಅರಿವು ಶಿಕ್ಷಕರಲ್ಲಿ ಇರಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಕರು ತಂತ್ರಜ್ಞಾನದ ಸಹಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನೈಪುಣ್ಯತೆ, ಹೊಸತನ ಮತ್ತು ವೃತ್ತಿಪರತೆಯೊಂದಿಗೆ ಪ್ರತಿಯೊಂದು ತರಗತಿಯನ್ನು ನಡೆಸಬೇಕು. ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಶಿಕ್ಷಣ ಅರ್ಥಪೂರ್ಣವಾಗುತ್ತದೆ. ಇಂತಹ ಪುನಶ್ಚೇತನ ಕಾರ್ಯಾಗಾರಗಳು ಶಿಕ್ಷಕರಿಗೆ ಹೊಸ ಚಿಂತನೆ ನೀಡುವುದರ ಜೊತೆಗೆ, ಅವರನ್ನು ಮತ್ತಷ್ಟು ಕ್ರಿಯಾಶೀಲರನ್ನಾಗಿಸುತ್ತವೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನೀರಜಾಕ್ಷಿ, ಪದ್ಮ ಪ್ರಭು, ಕಾಮಾಕ್ಷಿ ಸುರೇಶ್, ಇಂದುಮತಿ, ಕರೀಮಾ ಅಂಜುಂ, ಅಶೋಕ್ ಉಪಸ್ಥಿತರಿದ್ದು, ಕಾರ್ಯಗಾರದಲ್ಲಿ ಶಿಕ್ಷಕರಿಗೆ ವಿವಿಧ ರೀತಿಯ ಬೋಧನಾ ವಿಧಾನಗಳನ್ನು ತಿಳಿಸಿಕೊಟ್ಟರು.
ದಾವಣಗೆರೆ, ಶಿವಮೊಗ್ಗ, ಶಿಗ್ಗಾವಿಯ ಪಿಪಿಎಸ್ ಶಾಲೆಯ ಪ್ರಾಂಶುಪಾಲೆ ಚಂಪ ಸತೀಶ್, ಮಾರ್ಗರೇಟ್, ಸಿದ್ದಲಿಂಗ ಸ್ವಾಮಿ ಹಾಗೂ ನಗರದ ಡಿಎಆರ್ ಡಿವೈಎಸ್ಪಿ ಪ್ರಕಾಶ್ ಪಿ.ಬಿ. ಮತ್ತು ಆರ್‌ಪಿಐ ಕಿರಣ್ ಕುಮಾರ್, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ನಿರೂಪಣೆಯನ್ನು ಶಿಕ್ಷಕಿ ಮಂಜುಳಾ, ವಂದನಾರ್ಪಣೆಯನ್ನು ಶಿಕ್ಷಕಿ ಸಲ್ಮಾ ಬಾನು ಮಾಡಿದರು.- - -
-24HRR.02-02ಎ: ಹರಿಹರ ತಾಲೂಕಿನ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ರವಿಕಾಂತೇ ಗೌಡ, ಕೆಪಿಎಸ್ಸಿ ಸದಸ್ಯ ರಾಮಕೃಷ್ಣ ಪ್ರಸಾದ್ ಎಂ.ವಿ. ಮತ್ತಿತರ ಗಣ್ಯರು ಪಾಲ್ಗೊಂಡರು.