ಕನಕಪುರ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ದ್ವಿತೀಯ ಪಿಯುಸಿ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಕಠಿಣ ತಪಸ್ಸು ಮತ್ತು ಏಕಾಗ್ರತೆಯಿಂದ ಉತ್ತಮ ಸಾಧನೆ ಮಾಡುವಂತೆ ಅಬಕಾರಿ ಇಲಾಖೆಯ ಅಧಿಕ್ಷಕ ಮೋಹನ್ ಕಿವಿಮಾತು ಹೇಳಿದರು.

ಕನಕಪುರ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ದ್ವಿತೀಯ ಪಿಯುಸಿ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಕಠಿಣ ತಪಸ್ಸು ಮತ್ತು ಏಕಾಗ್ರತೆಯಿಂದ ಉತ್ತಮ ಸಾಧನೆ ಮಾಡುವಂತೆ ಅಬಕಾರಿ ಇಲಾಖೆಯ ಅಧಿಕ್ಷಕ ಮೋಹನ್ ಕಿವಿಮಾತು ಹೇಳಿದರು. ನಗರದ ರೂರಲ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ರೂರಲ್ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಯಾವ ವಿಭಾಗದಲ್ಲಿ ವ್ಯಾಸಂಗ ಮಾಡುತ್ತೇವೆ ಎಂಬುದು ಮುಖ್ಯವಲ್ಲ, ಅದರಲ್ಲಿ ನೀವು ಯಾವ ರೀತಿ ಸಾಧನೆ ಮಾಡುತ್ತೇವೆ ಎಂಬುದಷ್ಟೇ ಮುಖ್ಯ. ಕಲಾ ವಿಭಾಗದ ವಿದ್ಯಾರ್ಥಿಗಳು ಕೀಳರಿಮೆ ತೊರೆದು, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ತಮ್ಮ ಭವಿಷ್ಯ ನಾವು ತೆಗೆದುಕೊಳ್ಳುವ ಕೋರ್ಸಿನ ಮೇಲೆ ನಿರ್ಧಾರ ಆಗುವುದಿಲ್ಲ. ಇಂಜಿನಿಯರ್, ಡಾಕ್ಟರ್ ಆದರೆ ಮಾತ್ರ ಭವಿಷ್ಯ ಚೆನ್ನಾಗಿರುತ್ತದೆ ಎಂಬುದು ಸುಳ್ಳು. ನಾವು ಮಾಡುವ ಕೋರ್ಸುಗಳ ಮೇಲೆ ನಮ್ಮ ಶ್ರಮ ಇರಬೇಕು. ಅಚಲವಾದ ಗುರಿ ಇರಬೇಕು. ಆಗ ಮಾತ್ರ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಹಾಗೂ ಸಾಂಪ್ರದಾಯಿಕ ಕೋರ್ಸುಗಳನ್ನು ಮಾತ್ರ ಓದುತ್ತಾರೆ. ಆದರೆ ಅದು ತಪ್ಪಲ್ಲ. ಉನ್ನತ ಸಾಧನೆ ಮಾಡಲು ನಮಗೆ ಒಂದು ಪದವಿ ಅವಶ್ಯಕತೆ ಇರುತ್ತದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಡೆಸುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ನಿಮ್ಮ ಜೀವನದ ಗುರಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗಿದ್ದು ಉತ್ತಮ ಅಂಕ ಗಳಿಸುವ ಮೂಲಕ ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಂಡಿರುವವರು ಬಹುತೇಕರು ಗ್ರಾಮೀಣ ವಿದ್ಯಾರ್ಥಿಗಳೇ ಆಗಿದ್ದಾರೆ ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಣ ಕೆಲಸ ಮಾಡುವುದಿಲ್ಲ. ನಮ್ಮ ಜ್ಞಾನ ಕೆಲಸ ಮಾಡುತ್ತದೆ. ಅದರಲ್ಲಿ ತಾವೂ ಒಬ್ಬರಾಗಿದ್ದು ನಾನು ರೂರಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಎಂಬುದು ಹೆಮ್ಮೆ ನನಗೆ ಹೆಮ್ಮೆ. ಶೈಕ್ಷಣಿಕವಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಜೀವನದ ಅತ್ಯಂತ ಪ್ರಮುಖ ಘಟ್ಟ, ಅದೇ ರೀತಿ ದುಶ್ಚಟಗಳಿಗೆ ಬಲಿಯಾಗುವ ವಯಸ್ಸು, ಈ ವಯಸ್ಸಿನಲ್ಲಿ ಮಾದಕ ವಸ್ತುಗಳಿಗೆ ಬೇಗನೆ ಆಕರ್ಷಿತರಾಗುತ್ತಾರೆ. ಸಹವಾಸ ದೋಷದಿಂದ ದುಶ್ಚಟಗಳಿಗೆ ಬಲಿಯಾಗುತ್ತಾರೆ. ತುಂಬಾ ಎಚ್ಚರಿಕೆಯಿಂದ ಇರಬೇಕೆಂದು ಕಿವಿಮಾತು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಶಿಕ್ಷಣ ಫೌಂಡೇಶನ್ ಇದ್ದ ಹಾಗೆ. ಸಾಂಪ್ರದಾಯಿಕ ಶಿಕ್ಷಣದಿಂದ ಆಧುನಿಕ ಶಿಕ್ಷಣಕ್ಕೆ ಹೊಂದಿಕೊಳ್ಳಬೇಕು. ಪಿಯುಸಿಯಲ್ಲಿನ ಅಂಕ ಮುಖ್ಯ. ಅದರಿಂದ ಮುಂದಿನ ಉನ್ನತ ಶಿಕ್ಷಣದ ಭವಿಷ್ಯ ನಿರ್ಧಾರವಾಗುತ್ತದೆ. ಶಿಕ್ಷಣ ಕಲಿಯುವುದರ ಜೊತೆಗೆ ನಾವು ಸಂಸ್ಕಾರವನ್ನು ಕಲಿಯಬೇಕು. ತಂದೆ ತಾಯಿ ಗುರು ಹಿರಿಯರ ಮಾತನ್ನು ಕೇಳಬೇಕು, ಅವರನ್ನು ಗೌರವಿಸಬೇಕು. ಏಕಾಗ್ರತೆಯಿಂದ ನೀವು ಕಲಿತಾಗ ನಿಮ್ಮ ಗುರಿಯನ್ನು ಸಾಧಿಸಬಹುದು ಎಂದು ಸಲಹೆ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷೆ ಪ್ರೊ.ರಂಗನಾಯಕಮ್ಮ, ಆರ್‌ಇಎಸ್ ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಎಸ್.ಸಿ.ಮಂಜುನಾಥ್, ನಿರ್ದೇಶಕ ಕೆ.ಬಿ.ನಾಗರಾಜು, ಕೃಷಿ ಕಾಲೇಜಿನ ಡೀನ್ ಡಾ.ಟಿ.ಕೆ.ಸಿದ್ದರಾಮೇಗೌಡ, ಪ್ರೊ. ಡಾ.ಟಿ.ಬಿ.ಪುಟ್ಟರಾಜು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರೇಶ್, ಶಿಕ್ಷಣ ಇಲಾಖೆಯ ತುಕಾರಾಂ, ಎನ್‌ಸಿಸಿ, ಎನ್ಎಸ್ಎಸ್ ಹಾಗೂ ರೆಡ್ ಕ್ರಾಸ್ ಮತ್ತು ಸೇವಾದಳದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರದ ರೂರಲ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ರೂರಲ್ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಅಬಕಾರಿ ಇಲಾಖೆಯ ಅಧಿಕ್ಷಕ ಮೋಹನ್ ಮಾತನಾಡಿದರು.