ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಶಾಲಾ ಮಕ್ಕಳಿಗೆ ನೀಡುವ ಮೈಸೂರು ನಂದಿನಿ ಹಾಲಿನ ಪುಡಿ ಪ್ಯಾಕೆಟ್ ಗಳನ್ನು ಶಾಲಾ ಮಕ್ಕಳಿಗೆ ನೀಡದೆ ತಮ್ಮ ಸ್ಕೂಟರ್ ಮತ್ತು ಬ್ಯಾಗಿನಲ್ಲಿ ಮುಖ್ಯಶಿಕ್ಷಕರೊಬ್ಬರು ಸಾಗಿಸುತ್ತಿರುವ ವೇಳೆ ಮಾಲು ಸಮೇತ ಸಿಕ್ಕಿ ಬಿದ್ದಿರುವ ಘಟನೆಯು ಜರಗಿದೆ.ಪಟ್ಟಣದ ಒಂದನೇ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಎಂಬುವವರೇ ಸಿಕ್ಕಿಬಿದ್ದವರು.
ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರ್ಕಾರವು ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲಿನ ಪುಡಿಯನ್ನು ನೀಡಲಾಗುತ್ತಿದ್ದು, ಇದನ್ನು ಶಾಲೆಯ ಮುಖ್ಯಶಿಕ್ಷಕ ತಮ್ಮ ದ್ವಿಚಕ್ರ ವಾಹನದ ಟೂಲ್ ಕಿಟ್ ಹಾಗೂ ಬ್ಯಾಗಿನಲ್ಲಿ ಸಾಗಾಣಿಕೆ ಮಾಡುತ್ತಿರುವಾಗ ಪಟ್ಟಣ ವಾಸಿ ಸಿದ್ದರಾಜು ಎಂಬವರು ಮುಖ್ಯಶಿಕ್ಷಕರ ಮೇಲೆ ಅನುಮಾನ ಬಂದು ಅವರನ್ನು ತಡೆದು ನಿಲ್ಲಿಸಿ ಶೋಧಿಸಿದಾಗ ಗಾಡಿಯಲ್ಲಿ ಹತ್ತು ಪ್ಯಾಕೇಟ್ ಹಾಲಿನ ಪುಡಿ ಇರುವುದು ಕಂಡು ಬಂದಿದೆ.ಕೂಡಲೇ ಸಿದ್ದರಾಜು ಅವರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಮುಖ್ಯ ಶಿಕ್ಷಕ ಗಣೇಶ್ ಹಾಲಿನ ಪುಡಿ ಪ್ಯಾಕೆಟ್ ಅನ್ನ ಸಾಗಿಸುತ್ತಿರುವ ವಿಚಾರವನ್ನು ತಿಳಿಸಿದಾಗ ಬಿಆರ್.ಸಿ ಕೃಷ್ಣಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವಿಚಾರವಾಗಿ ಕೃಷ್ಣಯ್ಯ ಅವರು ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಅವರನ್ನು ವಿಚಾರಿಸಿದಾಗ ಹಾಲಿನ ಪುಡಿ ಪ್ಯಾಕೆಟ್‌ಗಳ ಅವಧಿ ಮೀರಿದ್ದು ಇವುಗಳನ್ನು ಹೊರಗೆ ಬಿಸಾಡುವುದಕ್ಕಾಗಿ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ಆದರೆ ಪ್ಯಾಕೆಟ್‌ನ ಮೇಲೆ 2024ರ ಡಿಸೆಂಬರ್ ವರೆಗೆ ಅವಧಿ ಇದು ಸಾಗಿಸಿರುವುದು ಕಂಡುಬಂದಿರುತ್ತದೆ.ಈ ಮುಖ್ಯ ಶಿಕ್ಷಕರು ಈ ಶಾಲೆಗೆ ಬಂದ ನಂತರ ಯಾವುದೇ ಪುಸ್ತಕಗಳಲ್ಲಿ ಲೆಕ್ಕ ಖರ್ಚಿನ ಬಾಬ್ತು ನಿರ್ವಹಣೆ ಮಾಡದೆ ಖಾಲಿ ಪುಸ್ತಕ ಇರುವುದು ಕಂಡುಬಂದಿರುತ್ತದೆ. ಈ ಎಲ್ಲರ ನಡುವೆ ಶಾಲೆಯಲ್ಲಿ ಅಕ್ಕಿ, ಬೆಳೆ, ಎಣ್ಣೆ ಹಾಗೂ ಹಾಲಿನ ಪೌಡರ್ ಎಷ್ಟು ಇದೇ ಎಂಬುದರ ಬಗ್ಗೆ ಮುಖ್ಯ ಶಿಕ್ಷಕರಲ್ಲಿ ಮಾಹಿತಿ ಇಲ್ಲ.
ಮೇಲ್ಕಂಡ ಎಲ್ಲ ವರದಿಗಳನ್ನು ಹಾಗೂ ಮುಖ್ಯ ಶಿಕ್ಷಕರ ಹೇಳಿಕೆಯನ್ನು ಪಡೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಅವರು ಮೈಸೂರು ಜಿಲ್ಲೆಯ ಡಿಡಿ ಸಿ.ಟಿ. ಜವರೇಗೌಡ ಹಾಗೂ ಜಿಪಂ ಸಿಇಒ ಗಾಯತ್ರಿ ಅವರಿಗೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿರುತ್ತಾರೆ.ಈ ವಿಷಯವನ್ನು ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೆ ತಂದಾಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಅವರಿಗೆ ಕೂಡಲೇ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಕ್ರಮ ಜರುಗಿಸಿ ಮುಂದಿನ ತನಿಖೆ ನಡೆಸಬೇಕೆಂದು ಅವರು ಸೂಚಿಸಿದ್ದಾರೆ.
----------------