ಸಾರಾಂಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಕಾಂಗ್ರೆಸ್ ಉತ್ತುಂಗ ಸ್ಥಿತಿಯಲ್ಲಿದ್ದಾಗಲೇ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಪಕ್ಷೇತರ ಅಭ್ಯರ್ಥಿ ಶಿವಮೂರ್ತಿ ಸ್ವಾಮಿ ಅಳವಂಡಿಯವರು ಜಯ ಸಾಧಿಸುವ ಮೂಲಕ ದೇಶದ ಗಮನ ಸೆಳೆದಿದ್ದರು.
ಅಷ್ಟೇ ಅಲ್ಲ, ಸಂಸತ್ತಿನಲ್ಲಿ ಗಂಟೆಗಟ್ಟಲೇ ಮಾತನಾಡಿ, ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದರು.
1952ರಲ್ಲಿ ಸ್ವತಂತ್ರ ಭಾರತದಲ್ಲಿ ಪ್ರಥಮ ಚುನಾವಣೆ ಘೋಷಣೆಯಾದಾಗ ದೇಶದಲ್ಲಿ ಇದ್ದಿದ್ದು ಕಾಂಗ್ರೆಸ್ ಮಾತ್ರ. ಅದಕ್ಕೆ ಪರ್ಯಾಯವಾಗಿ ಬೇರೆ ಪಕ್ಷ ಇರಲಿಲ್ಲ.
ಆ ಸಂದರ್ಭದಲ್ಲಿ ಕಾಂಗ್ರೆಸ್ ವಿರೋಧಿಸುವುದು, ಆ ಪಕ್ಷದ ವಿರುದ್ಧವೇ ಸ್ಪರ್ಧಿಸುವುದು, ಜಯ ಸಾಧಿಸುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಅಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೂರ್ತಿಸ್ವಾಮಿ ಅಳವಂಡಿ ಸ್ಪರ್ಧೆ ಮಾಡಿದರು.
ಅದೊಂದು ರೀತಿಯಲ್ಲಿ ಪ್ರವಾಹದ ವಿರುದ್ಧ ಈಜಿದಂತೆ. ಕಾಂಗ್ರೆಸ್ ಪಕ್ಷದಿಂದ ಆಗ ಅಧಿಕೃತ ಅಭ್ಯರ್ಥಿಯಾಗಿ ಮಾಧವರಾವ್ ಅನ್ವರಿ ಸ್ಪರ್ಧಿಸಿದ್ದರು.
ಚುನಾವಣೆ ಘೋಷಣೆಗೂ ಮುನ್ನವೇ ಶಿವಮೂರ್ತಿ ಸ್ವಾಮಿ ಅವರಿಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿತ್ತು. ಆದರೆ, ಗಾಂಧೀಜಿ ಹೇಳಿದ ಮಾತಿನಂತೆ ಇವರು ಕಾಂಗ್ರೆಸ್ ಪಕ್ಷದಿಂದ ದೂರ ಸರಿದರು.
ಮಹಾತ್ಮಾಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡುವಂತೆ ಹೇಳಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವನ್ನು ಚುನಾವಣಾ ರಾಜಕಾರಣಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದಿದ್ದರು.
ಅವರ ಮಾತಿಗೆ ಕಟ್ಟು ಬಿದ್ದು, ಕಾಂಗ್ರೆಸ್ ಪಕ್ಷದಿಂದ ಶಿವಮೂರ್ತಿಸ್ವಾಮಿ ಅಳವಂಡಿ ದೂರ ಸರಿದರು. ಕಾಂಗ್ರೆಸ್ ನಾಯಕರನ್ನು ಕಟುವಾಗಿ ಟೀಕಿಸಿದರು.
ಆಗ ಕಾಂಗ್ರೆಸ್ ಆಹ್ವಾನವನ್ನು ತಿರಸ್ಕರಿಸಿದ ಅಳವಂಡಿ, ಪಕ್ಷೇತರರಾಗಿ ಅಖಾಡಕ್ಕೆ ಇಳಿದು ಬರೋಬ್ಬರಿ 43 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದರು.
ಶಿವಮೂರ್ತಿ ಸ್ವಾಮಿಯವರು ಪಕ್ಷೇತರರಾಗಿ ಆಯ್ಕೆಯಾದ ಬಳಿಕ ಸಂಸತ್ ಪ್ರವೇಶ ಮಾಡಿದಾಗಲೂ ಮಹಾತ್ಮಾ ಗಾಂಧೀಜಿಯವರ ಮಾತನ್ನು ಪ್ರತಿಪಾದನೆ ಮಾಡಿದರು.
ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಕ್ಕಾಗ ಪ್ರಥಮ ಬಾರಿಗೆ ಶಿವಮೂರ್ತಿಸ್ವಾಮಿ ಅಬ್ಬರಿಸಿ ಮಾತನಾಡಿದರು. ದೇಶ, ಸಂಸ್ಕೃತಿ, ಸ್ವಾತಂತ್ರ್ಯ ಹೋರಾಟ ಹೀಗೆ ಹತ್ತು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿ ಮಾತನಾಡುತ್ತಿರುವಾಗ ಕಾಂಗ್ರೆಸ್ ಪಕ್ಷವನ್ನೇ ಟೀಕೆ ಮಾಡಲು ಮುಂದಾದರು.
ಇದಕ್ಕೆ ಕಾಂಗ್ರೆಸ್ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಆಗಿನ ಪ್ರಧಾನಿ ನೆಹರು ಮಧ್ಯಪ್ರವೇಶ ಮಾಡಿ, ಮಾತು ಮುಂದುವರೆಸಲು ಹೇಳಿದರು. ಇವರ ಮಾತನ್ನು ಗಂಭೀರವಾಗಿ ಆಲಿಸಿದರು. ಶಿವಮೂರ್ತಿ ಸ್ವಾಮಿ 45 ನಿಮಿಷಗಳ ಕಾಲ ಸುದೀರ್ಘವಾಗಿ ಮಾತನಾಡಿದರು.
ಇದಾದ ಬಳಿಕ ನೆಹರು ಅವರೇ ಶಿವಮೂರ್ತಿಸ್ವಾಮಿ ಅಳವಂಡಿ ಅವರನ್ನು ಕರೆದು ಮಾತನಾಡಿಸಿದರು. ಇವರನ್ನು ಕರ್ನಾಟಕ ಹುಲಿ ಎಂದೇ ಕರೆದರು.
ನಂತರ, 1957ರಲ್ಲಿ ಸ್ಪರ್ಧೆ ಮಾಡಿ ಕೇವಲ 10 ಸಾವಿರ ಮತಗಳ ಅಂತರದಿಂದ ಸೋತರು. ಆಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಸಂಗಣ್ಣ ಅಗಡಿ ಜಯ ಸಾಧಿಸಿದರು.
ಅದಾದ ನಂತರ 1962ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಸ್ಥಾಪನೆಯಾದ ಲೋಕ ಸೇವಕ ಸಂಘದಿಂದ ಸ್ಪರ್ಧೆ ಮಾಡಿ ಜಯ ಸಾಧಿಸಿದರು. ಹೀಗೆ ಸ್ವಾತಂತ್ರ್ಯ ಹೋರಾಟಗಾರರಾಗಿಯೂ ನಿರಂತರವಾಗಿ ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))