ಸಾರಾಂಶ
ಹಾವೇರಿ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಲವಾರು ವಿಶೇಷತೆಗಳಿಂದಾಗಿ ವಿಶ್ವಕ್ಕೆ ಮಾದರಿಯಾಗಿದೆ. ಪ್ರಜೆಗಳೇ ಪ್ರಭುಗಳಾಗುವ ವ್ಯವಸ್ಥೆಯಲ್ಲಿ ಯಾವ ಲೋಪ ದೋಷವೂ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲ್ಲಿನ ಪ್ರಬುದ್ಧ ಮತದಾರರ ಮೇಲಿರುತ್ತದೆ. ಇಂತಹ ವ್ಯವಸ್ಥೆಯ ಮೇಲೆ ಮತದಾರರ ನಿಯಂತ್ರಣ ತಪ್ಪಿದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ಜಾಗೃತಗೊಂಡ ಮತದಾರರೇ ಪ್ರಜಾಪ್ರಭುತ್ವದ ಆಧಾರಸ್ತಂಭಗಳಿದ್ದಂತೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ. ಉಮೇಶಪ್ಪ ಎಚ್. ಹೇಳಿದರು.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಇಂದು ಯುವಕರ ದೇಶವಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಯುವಕರು ಮತದಾರರ ಪಟ್ಟಿಗೆ ನೋಂದಣಿಯಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದು. ನಿಮ್ಮ ಮತ್ತು ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಆಮಿಷಗಳಿಗೆ ಬಲಿಯಾಗದೇ ಅತ್ಯುತ್ತಮ ಜನಪ್ರತಿನಿಧಿಯನ್ನ ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಮತದಾನದ ಮಹತ್ವ ಮತ್ತು ಚುನಾವಣಾ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಉಂಟುಮಾಡಲೆಂದೆ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಇಎಲ್‌ಸಿ ಸಂಘಗಳು ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತ ಚುನಾವಣಾ ಆಯೋಗದ ಆಶಯದಂತೆ ನಾವೆಲ್ಲ ಕಡ್ಡಾಯವಾಗಿ ಮತದಾನ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಇಎಲ್‌ಸಿ ಸಂಚಾಲಕ ಉಪನ್ಯಾಸಕ ರವಿ ಸಾದರ, ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾರರ ಸಹಭಾಗಿತ್ವ ಬಹಳ ಅಗತ್ಯವಾಗಿದೆ. ಯಾವೊಬ್ಬ ಮತದಾರರೂ ಮತದಾನದಿಂದ ದೂರ ಉಳಿಯಬಾರದು. ಅದಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಮತದಾರರ ಸಾಕ್ಷರತಾ ಸಂಘವನ್ನು ಸ್ಥಾಪಿಸಿದೆ. ನಮ್ಮ ಕಾಲೇಜಿನಲ್ಲಿ 18 ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅಗತ್ಯ ಮಾಹಿತಿಯನ್ನು ತಿಳಿಸಿ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ವ್ಯವಸ್ಥೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದೆ. ಈ ಮಾಹಿತಿಯನ್ನ ತಮ್ಮ ನೆರೆಹೊರೆಯವರಿಗೂ ತಿಳಿಸಲು ಕರೆ ನೀಡಲಾಗುತ್ತಿದೆ. ತರಕಾರಿ ಆಯ್ಕೆಯಲ್ಲಿ ಇರುವ ಮುತುವರ್ಜಿ ಪ್ರತಿನಿಧಿಗಳ ಆಯ್ಕೆಯಲ್ಲಿ ಇಲ್ಲದಾದರೆ ನಮ್ಮ ಪ್ರಜಾಪ್ರಭುತ್ವ ಮತ್ತು ದೇಶಕ್ಕೆ ಅಪಾಯಕಾರಿ ಎಂದು ನುಡಿದರು.ಪ್ರಭಾರಿ ಪ್ರಾಚಾರ್ಯ ನಾಗರಾಜ ಹಕ್ಕೇರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಸ್. ಸಿ. ಮರಡಿ, ಸಿ.ಎಂ.ಕಮ್ಮಾರ, ಪುಷ್ಪಲತಾ ಡಿ.ಎಲ್., ಮಂಜುನಾಥ ಹತ್ತಿಯವರ, ಸುನಂದ ಶೀಲಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಆರಂಭದಲ್ಲಿ ಬೇಬಿ ಮತ್ತಿಹಳ್ಳಿ ಪ್ರಾರ್ಥಿಸಿದರೆ, ಜ್ಯೋತಿ ಭಜಂತ್ರಿ ಸ್ವಾಗತಿಸಿದರು. ಸುಶ್ಮಿತಾ ತಳ್ಳಳ್ಳಿ ನಿರೂಪಿಸಿ, ಲಕ್ಷ್ಮಿ ರಾಹುತ ವಂದಿಸಿದಳು.