ನರಸಿಂಹರಾಜಪುರಕನ್ನಡ ಹಾಗೂ ಸಂಸ್ಕೃತ ಭಾಷೆಗೂ ಅವಿನಾಭಾವ ಸಂಬಂಧವಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ತಿಳಿಸಿದರು.

ಕ.ಸಾ.ಪ ದಿಂದ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಪರಿಷತ್ ನಡಿಗೆ- ಶಾಲಾ ಕಾಲೇಜುಗಳ ಕಡೆಗೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕನ್ನಡ ಹಾಗೂ ಸಂಸ್ಕೃತ ಭಾಷೆಗೂ ಅವಿನಾಭಾವ ಸಂಬಂಧವಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ತಿಳಿಸಿದರು.

ಶನಿವಾರ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಸಾಹಿತ್ಯ ಪರಿಷತ್ತಿನ ನಡಿಗೆ - ಶಾಲಾ ಕಾಲೇಜುಗಳ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಸಾಹಿತ್ಯಕ್ಕೆ ಅನ್ಯ ಭಾಷೆಗಳ ಕೊಡುಗೆ ಎಂಬ ವಿಷಯದ ಬಗ್ಗೆ ಮಾತನಾಡಿದರು. ಸಂಸ್ಕೃತ ಭಾಷೆ ಇಲ್ಲದಿದ್ದರೆ ಅನೇಕ ಮಹಾ ಕಾವ್ಯಗಳು ರಚನೆಯಾಗುತ್ತಿರಲಿಲ್ಲ. ಕನ್ನಡ ಭಾಷೆಗೆ ಸಂಸ್ಕೃತವೇ ತಾಯಿ ಬೇರಾಗಿದೆ. ರಾಮಾಯಣ, ಮಹಾ ಭಾರತ , ಗದುಗಿನ ಭಾರತ, ಛಂದಸ್ಸು, ತತ್ಸಮ, ತದ್ಬವ ಎಲ್ಲವೂ ಸಂಸ್ಕೃತ ಭಾಷೆಯಲ್ಲಿ ಬರೆದಿದ್ದಾರೆ.ವಚನ ಸಾಹಿತ್ಯದಲ್ಲಿ ತಮಿಳು ಪ್ರಭಾವ ಕಾಣಬಹುದು.

ವಿಜಯ ನಗರ ಸಾಮ್ರಾಜ್ಯರ ಕಾಲದಲ್ಲಿ ತೆಲುಗು ಭಾಷೆ ಹೆಚ್ಚು ಪ್ರಾಮುಖ್ಯತೆ ವಹಿಸಿತ್ತು. ಹರಿದಾಸರ ಸಾಹಿತ್ಯದ ಕೀರ್ತನೆಯಲ್ಲಿ ಮರಾಠಿ ಸೊಗಡನ್ನು ಕಾಣಬಹುದು. ಈಗಿನ ಜಮೀನು ವ್ಯವಹಾರ, ಅರ್ಜಿಗಳಲ್ಲಿ ಉರ್ದು ಭಾಷೆಯ ಪದ ಗಳಿವೆ. ಇಂಗ್ಲೀಷ್ ಭಾಷೆ ಮಾತ್ರ ಈಗಿನ ಕನ್ನಡ ಭಾಷೆಯಲ್ಲಿ ನುಸುಳಿಕೊಂಡಿದ್ದು ನಮಗೆ ಅರಿವಿಲ್ಲದಂತೆ ಇಂಗ್ಲೀಷ್ ಭಾಷೆ ಯನ್ನು ಕನ್ನಡಕ್ಕೆ ಸೇರಿಸುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕಾರ್ಯಕ್ರಮ ನಡೆಸುತ್ತಿದೆ. ಕನ್ನಡ ದಿನ ಪತ್ರಿಕೆಯನ್ನು ಪ್ರತಿ ದಿನ ಓದುವುದರಿಂದ ಕನ್ನಡ ಭಾಷಾ ಜ್ಞಾನ ಹೆಚ್ಚಾಗಲಿದೆ.ಪ್ರ ತಿಯೊಬ್ಬ ವಿದ್ಯಾರ್ಥಿಗಳು ಕನ್ನಡ ದಿನಪತ್ರಿಕೆಗಳನ್ನು ಓದಬೇಕು. 2 ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಸುಂದರವಾದ ಭಾಷೆಯಾಗಿದೆ. ರನ್ನ, ಪಂಪ, ಕುವೆಂಪು, ಶಿವರಾಮ ಕಾರಂತ ಸೇರಿದಂತೆ ಅನೇಕ ಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಇಂಗ್ಲೀಷ್ ಸೇರಿದಂತೆ ಎಲ್ಲಾ ಭಾಷೆ ಕಲಿಯೋಣ. ಆದರೆ, ಕನ್ನಡ ಭಾಷೆ ಪ್ರೀತಿಸೋಣ. ವಿದ್ಯಾರ್ಥಿಗಳು ಪುಸ್ತಕಗಳನ್ನು ಹೆಚ್ಚಾಗಿ ಓದುವ ಅಭ್ಯಾಸ ಮಾಡಬೇಕು. ಪುಸ್ತಕಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಉದಯ ಕನ್ನಡಿಗ ಪ್ರಶಸ್ತಿ ಪುರಸ್ಕೃತೆ ಜುಬೇದ ಮಾತನಾಡಿ ವಿದ್ಯಾರ್ಥಿಗಳು ಪಠ್ಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕನ್ನಡ ಎಂಬುದು ಕೇವಲ ಭಾಷೆಯಲ್ಲ. ಕನ್ನಡ ನಮ್ಮ ಸ್ವಾಭಿಮಾನ, ನಮ್ಮ ಸಂಸ್ಕೃತಿ. ವಿದ್ಯಾರ್ಥಿಗಳು ಮುಂದೆ ನಿಮ್ಮ ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಿ ನೀವು ಓದಿದ ಶಾಲೆಗೆ, ಪೋಷಕರಿಗೆ ಕೀರ್ತಿ ತನ್ನಿ ಎಂದು ಸಲಹೆ ನೀಡಿದರು.

ಉತ್ತಮ ಜಿಲ್ಲಾ ರೈತ ಮಹಿಳಾ ಪ್ರಶಸ್ತಿ ಪುರಸ್ಕೃತೆ ಕರುಗುಂದ ವಾಣಿ ನರೇಂದ್ರ, ಪಿಯುಸಿಯಲ್ಲಿ ಕನ್ನಡದಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿ ಕು.ಪ್ರಗತಿ ಅವರನ್ನು ಕ.ಸಾ.ಪದಿಂದ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಶುಭಾ ವಹಿಸಿದ್ದರು. ಅತಿಥಿಗಳಾಗಿ ಕ.ಸಾ.ಪ ಹಿರಿಯ ಸದಸ್ಯ ಪಿ.ಸಿ. ಮ್ಯಾಥ್ಯೂ, ಕ.ಸಾ.ಪ ಯುವ ಘಟಕದ ಅಧ್ಯಕ್ಷೆ ಸುಷ್ಮಾ ಯುಗಾಂದರ್, ಕ.ಸಾ.ಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು ಇದ್ದರು.

ನಂತರ ತಾಲೂಕು ಕ.ಸಾ.ಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ನಡೆಸಿಕೊಟ್ಟರು.ನಂದಿನಿ ಆಲಂದೂರು ಕಾರ್ಯಕ್ರಮ ನಿರೂಪಿಸಿದರು.