ಹರಿಯಾಣ ಹಿನ್ನಡೆಗೆ ಆತ್ಮಾವಲೋಕನ: ಡಿಕೆಶಿ

| Published : Oct 09 2024, 01:40 AM IST

ಸಾರಾಂಶ

ಹರಿಯಾಣದಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿತ್ತು. ಆದರೆ ಹುಸಿಯಾಗಿದೆ. ಹರಿಯಾಣ ದೆಹಲಿಗೆ ಸಮೀಪವಾದ ರಾಜ್ಯ. ರಾಜಕೀಯವಾಗಿ ಸಾಕಷ್ಟು ಮಹತ್ವ ಇದೆ. ನಮಗೆ ಅಧಿಕಾರ ಸಿಗುತ್ತದೆ ಎಂಬ ಭಾವನೆ ಇತ್ತು.

ಹುಬ್ಬಳ್ಳಿ:

ಹರಿಯಾಣದಲ್ಲಿ ನಮಗೆ ಹಿನ್ನಡೆಯಾಗಿದೆ. ಏಕೆ ಹೀಗಾಯಿತು ಎಂಬುದನ್ನು ವರಿಷ್ಠರು ಪರಿಶೀಲಿಸುತ್ತಾರೆ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ, ಜಮ್ಮು ಕಾಶ್ಮೀರ ಮತದಾರರು ಪ್ರಜಾಪ್ರಭುತ್ವ ಉಳಿಸಿದ್ದಾರೆ ಎಂದು ಹೇಳಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿತ್ತು. ಆದರೆ ಹುಸಿಯಾಗಿದೆ. ಹರಿಯಾಣ ದೆಹಲಿಗೆ ಸಮೀಪವಾದ ರಾಜ್ಯ. ರಾಜಕೀಯವಾಗಿ ಸಾಕಷ್ಟು ಮಹತ್ವ ಇದೆ. ನಮಗೆ ಅಧಿಕಾರ ಸಿಗುತ್ತದೆ ಎಂಬ ಭಾವನೆ ಇತ್ತು. ಆದರೆ ನಮ್ಮ ವಿರುದ್ಧ ಮತದಾರರು ಮತ ಚಲಾಯಿಸಿದ್ದಾರೆ. ಏಕೆ ಹೀಗಾಯಿತು. ಎಲ್ಲಿ ತಪ್ಪಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ನಡೆಸಲಾಗುತ್ತಿದೆ ಎಂದರು. ಜಮ್ಮು ಕಾಶ್ಮೀರದಲ್ಲಿ ಬಹಳ ವರ್ಷದ ನಂತರ ಚುನಾವಣೆ ನಡೆದಿತ್ತು. ಅಲ್ಲಿ ನಿರೀಕ್ಷೆಯಂತೆ ಪಕ್ಷ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಜನ ಪ್ರಜಾಪ್ರಭುತ್ವವನ್ನು ಉಳಿಸಿದ್ದಾರೆ ಎಂದರು.

ಎಕ್ಸಿಟ್‌ ಪೋಲ್‌ ಬಗ್ಗೆ ನನಗೆ ನಂಬಿಕೆ ಇಲ್ಲ. ಕರ್ನಾಟಕದಲ್ಲೂ ಎಕ್ಸಿಟ್‌ ಪೋಲ್‌ ಸುಳ್ಳಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಪಕ್ಷದಲ್ಲಿ ಯಾವುದೇ ಚರ್ಚೆಯೂ ಆಗುತ್ತಿಲ್ಲ. ಯಾರು ಲಾಬಿಯನ್ನೂ ನಡೆಸುತ್ತಿಲ್ಲ. ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ. ಅವರ ಕೆಳಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ನಿಮಗೇನಾದರೂ ಮುಖ್ಯಮಮಂತ್ರಿಯಾಗುವ ಅವಕಾಶವಿದೆಯಾ ಎಂಬ ಪ್ರಶ್ನೆಗೆ ನಮ್ಮ ಸಿದ್ದರಾಮಯ್ಯ ಅದಾರ್‌ ಅಲ್ಲರ್ರಿ.. ಎಂದು ಉತ್ತರಿಸಿ ಅಲ್ಲಿಂದ ತೆರಳಿದರು.