ತಿಪಟೂರು ಪುಟ್‌ಪಾತ್‌ನಲ್ಲಿ ವ್ಯಾಪಾರ ಅಪಘಾತಕ್ಕೆ ಆಹ್ವಾನ

| Published : Dec 29 2024, 01:20 AM IST

ಸಾರಾಂಶ

ಇಲ್ಲಿನ ಎಪಿಎಂಸಿ ವತಿಯಿಂದ ಕೋಟ್ಯಂತರ ರು. ವೆಚ್ಚ ಮಾಡಿ ಸುವ್ಯವಸ್ಥಿತ ತರಕಾರಿ-ಹಣ್ಣು ಮಾರುಕಟ್ಟೆ ನಿರ್ಮಿಸಿದ್ದರೂ ಬೀದಿಬದಿ ವ್ಯಾಪಾರಸ್ಥರು ನಗರದ ಬಿ.ಎಚ್. ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಸಾಯಿಬಾಬಾ ರಸ್ತೆ, ಬಸ್ ನಿಲ್ದಾಣ ಸುತ್ತಮುತ್ತ, ಅರಳಿಕಟ್ಟೆ, ದೊಡ್ಡಪೇಟೆ, ಕೋಡಿಸರ್ಕಲ್ ರಸ್ತೆಯಲ್ಲಿ ಪಾದಚಾರಿಗಳು ಓಡಾಡುವ ಹಾಗೂ ಪಾರ್ಕಿಂಗ್ ಮಾಡಬೇಕಾದ ಸ್ಥಳಗಳಲ್ಲಿ ತರಕಾರಿ, ಹಣ್ಣು, ಹೂ ಮಾರಾಟ ಮಾಡುತ್ತಿರುವುದರಿಂದ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ಇಲ್ಲಿನ ನಗರಸಭೆ ಹಾಗೂ ಪೊಲೀಸ್ ಇಲಾಖೆಯವರು ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ನಿತ್ಯವೂ ಅಪಘಾತ, ಗಲಾಟೆಗಳಿಗೆ ಕಾರಣವಾಗಿ ಅಮಾಯಕರಿಗೆ ತೊಂದರೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ನಗರ ಉಪವಿಭಾಗ ಕೇಂದ್ರವಾಗಿರುವುದಲ್ಲದೆ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿದ್ದು, ಕೊಬ್ಬರಿ ಮಾರುಕಟ್ಟೆ ಜೊತೆಗೆ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕೇಂದ್ರವಾಗಿದೆ. ಜನ ಹಾಗೂ ವಾಹನಗಳ ಸಂಚಾರ ವಿಪರೀತವಾಗಿರುತ್ತದೆ. ಹಾಗಾಗಿ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲೇ ವಹಿವಾಟುಗಳು ನಡೆಯುತ್ತಿದ್ದು ಜನರೂ ಸಹ ವ್ಯಾಪಾರ ಮಾಡಲು ರಸ್ತೆಯ ಎರಡೂ ಕಡೆಗಳಲ್ಲಿ ನಿಲ್ಲುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ನಗರಾಡಳಿತ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ಬಗ್ಗೆ ಗಮನಹರಿಸಿ ಬೀದಿಬದಿ ಮಾರಾಟಗಾರರನ್ನು ಮಾರುಕಟ್ಟೆಯತ್ತ ಸ್ಥಳಾಂತರಿಸುವರೋ ಕಾಯ್ದು ನೋಡಬೇಕು.ಎಪಿಎಂಸಿ ಕಾರ್ಯದರ್ಶಿ ನ್ಯಾಮನಗೌಡ ಮಾತನಾಡಿ, ರೈತರು ಹಾಗೂ ವ್ಯಾಪಾರಸ್ಥರು ನಾವು ನಿರ್ಮಿಸಿರುವ ತರಕಾರಿ ಮಾರುಕಟ್ಟೆಯಲ್ಲಿಯೇ ಕಡ್ಡಾಯವಾಗಿ ಹೂ, ಹಣ್ಣು, ತರಕಾರಿ ಮಾರಾಟ ಮಾಡಬೇಕೆಂದು ತಿಳಿಸಿದ್ದರೂ ಸಹ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ವ್ಯಾಪಾರಿಗಳು ನಗರದ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಅವರೇ ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಬೀದಿಬದಿ ವ್ಯಾಪಾರ ಮಾಡುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲು ನಗರಸಭೆಗೆ ಮನವಿ ಮಾಡಿದ್ದು, ಕೂಡಲೇ ಸಮಸ್ಯೆಗೆ ಪರಿಹಾರ ನೀಡಬೇಕು.

- ನರೇಂದ್ರಬಾಬು, ಸಾರ್ವಜನಿಕರು. ಯಾರಿಗೂ ತೊಂದರೆಯಾಗದಂತೆ ವ್ಯಾಪಾರ ಮಾಡುವಂತೆ ಬೀದಿಬದಿಯ ವ್ಯಾಪಾರಿಗಳಿಗೆ ತಿಳಿಸಲಾಗಿದೆ. ಸದ್ಯದಲ್ಲಿಯೇ ಪೊಲೀಸ್ ಇಲಾಖೆಯೊಂದಿಗೆ ಜೊತೆಗೂಡಿ ಜನರಿಗಾಗುತ್ತಿರುವ ತೊಂದರೆ ತಪ್ಪಿಸುತ್ತೇವೆ.

- ವಿಶ್ವೇಶ್ವರ ಬದರಗಡೆ, ಪೌರಾಯುಕ್ತರು, ನಗರಸಭೆ ತಿಪಟೂರು