ಮುರ್ಡೇಶ್ವರದ ಸೇರಿದಂತೆ ತಾಲೂಕಿನ ಶಿವದೇವಸ್ಥಾನಗಳಲ್ಲಿ ಭಾನುವಾರ ವಿಜೃಂಭಣೆಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.
ಭಟ್ಕಳದಾದ್ಯಂತ ಅದ್ಧೂರಿ ಮಹಾಶಿವರಾತ್ರಿ ಆಚರಣೆಕನ್ನಡಪ್ರಭ ವಾರ್ತೆ ಭಟ್ಕಳ
ಮುರ್ಡೇಶ್ವರದ ಸೇರಿದಂತೆ ತಾಲೂಕಿನ ಶಿವದೇವಸ್ಥಾನಗಳಲ್ಲಿ ಭಾನುವಾರ ವಿಜೃಂಭಣೆಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.ಮುರುಡೇಶ್ವರ ದೇವಸ್ಥಾನಕ್ಕೆ ಶಿವರಾತ್ರಿಯ ಪ್ರಯುಕ್ತ ಭಾನುವಾರ ಬೆಳಗಿನ ಜಾವದಿಂದ ರಾತ್ರಿವರೆಗೂ ಭಕ್ತಸಾಗರವೇ ಹರಿದು ಬಂದಿತ್ತು. ಶಿವರಾತ್ರಿಯ ಅಂಗವಾಗಿ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಸರ್ವ ದೇವರ ಪೂಜೆ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ಸಂಜೆ ಶ್ರೀ ದೇವರ ಸ್ವರ್ಣ ರಥೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯವರು ಭಕ್ತರಿಗೆ ನೂಕುನುಗ್ಗಲು ಆಗದಂತೆ ಮತ್ತು ತ್ವರಿತವಾಗಿ ದೇವರ ದರ್ಶನ ಮತ್ತು ಪೂಜೆ ಸಲ್ಲಿಸಲು ಸಕಲ ವ್ಯವಸ್ಥೆ ಮಾಡಿದ್ದರು. ಶಿವರಾತ್ರಿ ಅಂಗವಾಗಿ ಮುರುಡೇಶ್ವರ ದೇವಸ್ಥಾನದ ವತಿಯಿಂದ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಮುರ್ಡೇಶ್ವರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ನೇತೃತ್ವದಲ್ಲಿ ಜಿಲ್ಲಾಡಳಿತದ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ನಡೆದ ಜಾಗರಣೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಮತ್ತು ಸ್ಥಳೀಯ ಕಲಾವಿದರು ವಿವಿಧ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮನರಂಜಿಸಿದರು.
ಭಟ್ಕಳ ಮಾವಿನಕುರ್ವೆ ಬಂದರದ ಗುಡ್ಡದ ಮೇಲಿರುವ ಪುರಾಣ ಪ್ರಸಿದ್ಧ ಶ್ರೀ ಕುಟುಮೇಶ್ವರ ದೇವಸ್ಥಾನದಲ್ಲೂ ಕೂಡ ಶಿವರಾತ್ರಿ ಪ್ರಯುಕ್ತ ಸಹಸ್ರ ಬಿಲ್ವಾರ್ಚನೆ ಮುಂತಾದವು ನಡೆದವು. ಪಟ್ಟಣದ ಪುರಾತನ ಚೋಳೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀನಾರಾಯಣ ರಾಮನಾಥ ಶಾಂತೇರಿ ಕಾಮಾಕ್ಷಿ ಬೇತಾಳ ದೇವಸ್ಥಾನ, ಆಸರಕೇರಿಯ ವಿರೂಪಾಕ್ಷ ದೇವಸ್ಥಾನ, ಪಶುಪತಿ ದೇವಸ್ಥಾನ, ಮೂಡಭಟ್ಕಳದ ಈಶ್ವರ ದೇವಸ್ಥಾನ, ಬೈಲೂರಿನ ಮಾರ್ಕಾಂಡೇಶ್ವರ, ಮಾರುಕೇರಿಯ ಕೊಡಕಿಯ ಶಂಭುಲಿಂಗೇಶ್ವರ ದೇವಸ್ಥಾನ, ಪಟ್ಟಣದ ರಘುನಾಥ ದೇವಸ್ಥಾನ ಸೇರಿದಂತೆ ತಾಲೂಕಿನ ಎಲ್ಲ ಶಿವಾಲಯಕ್ಕೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರಿಗೆ ಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ, ಅರ್ಚನೆ ಮಾಡಿಸಿದರು.ಶಿವರಾತ್ರಿಯ ಪ್ರಯುಕ್ತ ತಾಲೂಕಿನ ಶಿವತಾಣವಷ್ಟೇ ಅಲ್ಲದೇ ಬೇರೆ ಬೇರೆ ದೇವಸ್ಥಾನಗಳಿಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ-ಭಾವದಿಂದ ಪೂಜೆ ಸಲ್ಲಿಸಿದರು. ಮಹಾಶಿವರಾತ್ರಿ ಪ್ರಯುಕ್ತ ಶಿವನ ದೇವಸ್ಥಾನಗಳಲ್ಲಿ ಆಹೋರಾತ್ರಿ ಭಜನೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.