ಕನ್ನಡಪ್ರಭ ವಾರ್ತೆ ದಾಂಡೇಲಿ
ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಭಾನುವಾರ ಆಚರಿಸಲಾಯಿತು. ವಿಶೇಷವಾಗಿ ವರ್ಷಕ್ಕೊಮ್ಮೆ ದರ್ಶನ ಭಾಗ್ಯವನ್ನು ನೀಡುವ ದಟ್ಟ ಕಾನನದ ನಡುವೆ ಇರುವ ಶ್ರೀ ಕವಳೇಶ್ವರನ ಸನ್ನಿಧಿಗೆ ಭಕ್ತ ಸಾಗರವೇ ಹರಿದು ಬಂತು.ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕು ಮಾತ್ರವಲ್ಲದೇ ಜಿಲ್ಲೆ ಹಾಗೂ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಭಕ್ತ ಜನರ ಪವಿತ್ರ ಯಾತ್ರಸ್ಥಳವಾದ ಕವಳೇಶ್ವರನ ಸನ್ನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಿತ್ತು. ಎಲ್ಲಿ ನೋಡಿದರೂ ಜನವೇ ಜನ, ಅತ್ತ ಇತ್ತ ಎಲ್ಲಿ ನೋಡಿದರೂ ಶಿವನಾಮವನ್ನು ಜಪಿಸಿ ಕವಳೇಶ್ವರನ ದರ್ಶನ ಪಡೆದು ಪುಣ್ಯ ಕೃತಾರ್ಥರಾದ ಸದ್ಭಾವನೆ ಭಕ್ತರದ್ದಾಗಿತ್ತು.
ಕವಳೇಶ್ವರನ ದರ್ಶನಕ್ಕಾಗಿ ಭಾನುವಾರ ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲು ಭರ್ತಿಯಾಗಿರುವುದು ವಿಶೇಷವಾಗಿತ್ತು. ದಾಂಡೇಲಿ ಬಸ್ ನಿಲ್ದಾಣದಿಂದ 26 ಕಿಮೀ ವರೆಗೆ ವಾಹನಗಳಲ್ಲಿ ಪ್ರಯಾಣಿಸಿ ಆನಂತರ ಅಲ್ಲಿಂದ ಕನಿಷ್ಠವೆಂದರೂ 3 ಕಿಮೀನಷ್ಟು ಪಾದಯಾತ್ರೆಯ ಮೂಲಕ ಬೆಟ್ಟ ಗುಡ್ಡ ಹತ್ತಿಳಿದು, ಕಡಿದಾದ ಕಣಿವೆಯಲ್ಲಿ ಸಾಗಿ, ಐನೂರಕ್ಕೂ ಅಧಿಕ ಮೆಟ್ಟಲುಗಳನ್ನು ಹತ್ತಿಳಿದು ಕವಳೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿ ಬಂದ ಭಕ್ತ ಸಮೂಹದಲ್ಲಿ ಪುನೀತ ಭಾವನೆ ವ್ಯಕ್ತವಾಗಿತ್ತು.ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಒದಗಿಸುವ ಕವಳೇಶ್ವರನ ದರ್ಶನ ಪಡೆಯಲು ಹರ ಸಾಹಸ ಮಾಡಬೇಕಾದರೂ, ಅದೊಂದು ಅಪೂರ್ವ ಮತ್ತು ಮಹತ್ವದ ಸುಸಂದರ್ಭ ಎಂದರೆ ಅತಿಶಯೋಕ್ತಿ ಎನಿಸದು.
ಸೇವೆಗೈದ ಸಂಸ್ಥೆಗಳು:
ಕಾಡಿನ ಮಧ್ಯೆ ಕವಳೇಶ್ವರನ ಸನ್ನಿಧಿಗೆ ಸಾಗುವ ಭಕ್ತ ಜನರಿಗೆ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ -ಭಕ್ತ ಜನರ ಮನತಣಿಸಲು ಬೆಲ್ಲ, ಪಾನೀಯ ಮತ್ತು ನೀರಿನ ವ್ಯವಸ್ಥೆಯನ್ನು ಸ್ವಯಂ ಸೇವಾ ಸಂಸ್ಥೆಗಳು ಕೈಗೊಂಡವು. ಸಾರಿಗೆ ವ್ಯವಸ್ಥೆಯನ್ನೊದಗಿಸಿದ ಸಾರಿಗೆ ಸಂಸ್ಥೆ;
ದಾಂಡೇಲಿಯಿಂದ ಕವಳೇಶ್ವರಕ್ಕೆ ಹೋಗಲು ನಗರದ ಸಾರಿಗೆ ಸಂಸ್ಥೆಯವರು ಬಸ್‌ಗಳ ವ್ಯವಸ್ಥೆ ಕೈಗೊಂಡು ಕವಳೇಶ್ವರ ದರ್ಶನ ಪಡೆಯಲು ಸಹಕರಿಸಿದರು. ವನ್ಯಜೀವಿ ಇಲಾಖೆಯವರು ಕವಳೇಶ್ವರ ಸನ್ನಿಧಿಗೆ ಭಕ್ತರಿಗೆ ತೆರಳಲು ಸಹಕಾರ ನೀಡಿದರು.ವ್ಯವಸ್ಥಿತ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆ:
ದಾಂಡೇಲಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಸಿಪಿಐ ಚಂದ್ರಶೇಖರ್ ಹರಿಹರ ಮತ್ತು ಶಿವಾನಂದ ಅಂಬಿಗೇರ ನೇತೃತ್ವದಲ್ಲಿ ದಾಂಡೇಲಿ ಉಪ ವಿಭಾಗದ ಪಿಎಸ್ಐ ಗಳಾದ ಮಹೇಶ ಮೇಲಗೇರಿ, ಮಹೇಶ ಮಾಳಿ, ಮಹಾದೇವಿ ನಾಯ್ಕೋಡಿ, ಕಿರಣ್ ಪಾಟೀಲ್, ಅಮೀನ್ ಅತ್ತಾರ, ಶಿವಾನಂದ ನಾವದಗಿ, ಜಗದೀಶ ನಾಯ್ಕ ಅವರ ಸಾರಥ್ಯದಲ್ಲಿ ಪೊಲೀಸ್ ಇಲಾಖೆ ವ್ಯವಸ್ಥಿತವಾಗಿ ಬಂದೋಬಸ್ತನ್ನು ಒದಗಿಸಿ ಭಕ್ತ ಜನರ ಶ್ಲಾಘನೆಗೆ ಪಾತ್ರವಾಗಿದೆ.