ಸಾರಾಂಶ
ಉಡುಪಿ : ದೇಶದ ವಿವಿಧ ಪಂಚತಾರಾ ಹೊಟೇಲ್ ಗಳಲ್ಲಿ ವಿಲಾಸೀ ಜೀವನ ನಡೆಸಿ ವಂಚಿಸುತ್ತಿದ್ದ ವೃದ್ಧನನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ತಮಿಳುನಾಡಿನ ತೂತುಕುಡಿ ನಿವಾಸಿ ಬಿಮ್ಸೆಂಟ್ ಜಾನ್ (67) ಎಂದು ಗುರುತಿಸಲಾಗಿದೆ. ಈತನ ಮೇಲೆ 49ಕ್ಕೂ ಹೆಚ್ಚು ವಂಚನೆಯ ಪ್ರಕರಣಗಳಿವೆ.
ಈತ ಒಬ್ಬಂಟಿಯಾಗಿ ಕೈಬ್ಯಾಗೊಂದನ್ನು ಹಿಡಿದುಕೊಂಡು ಠಾಕುಠೀಕಾಗಿ ಪ್ರತಿಷ್ಠಿತ ಹೊಟೇಲುಗಳಿಗೆ ತೆರಳಿ ಇಂಗ್ಲೀಷ್ ನಲ್ಲಿ ಮಾತನಾಡಿ ತಾನೊಬ್ಬ ಪ್ರತಿಷ್ಠಿತ ವ್ಯಕ್ತಿ ಎಂಬಂತೆ ದುಬಾರಿ ರೂಮ್ ಗಳನ್ನು ಪಡೆದು ತಂಗುತ್ತಿದ್ದು, ಒಂದೆರಡು ದಿನ ಚೆನ್ನಾಗಿ ತಿಂದುಂಡು ಮಲಗಿ ಬಿಲ್ ಪಾವತಿಸದೇ ಹೊರಟು ಹೋಗುತ್ತಿದ್ದ.
ಈಗಾಗಲೇ ಈತ ದೆಹಲಿ, ಮಹಾರಾಷ್ಟ್ರದ ಥಾಣೆ, ಕೇರಳದ ಕೊಲ್ಲಂ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಫೈವ್ ಸ್ಟಾರ್, ತ್ರಿ ಸ್ಟಾರ್ ಸೇರಿದಂತೆ ದುಬಾರಿ ಹೊಟೇಲುಗಳಿಗೆ ಲಕ್ಷಾಂತರ ರು. ಪಂಗ ನಾಮ ಹಾಕಿದ್ದಾನೆ.
ಬಿಮ್ಸೆಂಟ್ ಜಾನ್ ಡಿ. 7 ರಂದು ಮಣಿಪಾಲ ಕಂಟ್ರಿ ಇನ್ ಹೊಟೇಲ್‌ಗೂ ಬಂದು ರೂಮ್ ಪಡೆದುಕೊಂಡಿದ್ದ, ಹೊಟೇಲ್ ಮ್ಯಾನೇಜರ್ ಮುಂಗಡ ಹಣ ಕೇಳಿದಾಗ ಡಿ. 9ರಂದು ಕೊಡುವುದಾಗಿ ಹೇಳಿದ್ದ, ಈ ಮಾತಿಗೆ ಯಾಮಾರಿದ ಹೊಟೇಲ್ ಮ್ಯಾನೇಜರ್ ರೂಮ್ ನೀಡಿದ್ದರು.
ನಂತರ ಎರಡು ದಿನಗಳ ಕಾಲ ಹೊಟೇಲಿನಲ್ಲಿ ಹೊಟ್ಟೆತುಂಬಾ ಊಟ ತಿಂಡಿ ಮಾಡಿ ಒಟ್ಟು 39,298 ರು. ಬಿಲ್ ಮಾಡಿದ್ದ. ಡಿ 12ರಂದು ರೂಮ್ ಚೆಕ್‌ಔಟ್ ಮಾಡುತ್ತೇನೆ, ಆಗ ಎಲ್ಲಾ ಬಿಲ್ ಚುಕ್ತಾ ಮಾಡುತ್ತೇನೆ ಎಂದಿದ್ದ. ಅದಕ್ಕೆ ಮೊದಲೇ ಡಿ.9 ರಂದು ಹೊಟೇಲ್ ನಿಂದ ಹೊರಗೆ ಹೋಗಿ ಬರುವ ನೆಪದಲ್ಲಿ ಹೊಟೇಲ್‌ನಿಂದ ಪರಾರಿಯಾಗಿದ್ದ. ಆತ ಹಿಂದಕ್ಕೆ ಬಾರದಿದ್ದಾಗ ಹೊಟೇಲ್‌ನವರಿಗೆ ತಾವು ಪಂಗನಾಮ ಹಾಕಿಸಿಕೊಂಡಿರುವುದು ಪತ್ತೆಯಾಗಿದೆ. ನಂತರ ಮಣಿಪಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ಹೊಟೇಲಿನ ಸಿಸಿಕ್ಯಾಮರದ ದೃಶ್ಯಗಳನ್ನು ಸಂಗ್ರಹಿಸಿದ ಮಣಿಪಾಲ ಪೊಲೀಸರು ಆತನನ್ನು ಮಣಿಪಾಲದಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ಈತ ಪದವೀಧರನಾಗಿದ್ದು, 1996ರಲ್ಲಿ ಇಂತಹದ್ದೇ ಕೃತ್ಯಕ್ಕಾಗಿ ದೆಹಲಿಯಲ್ಲಿ 5 ವರ್ಷ ಜೈಲಿನಲ್ಲಿದ್ದ. ಆದರೂ ಈ ಚಟ ಬಿಟ್ಟಿಲ್ಲ, ಪ್ರಸ್ತುತ ದೇಶದಾದ್ಯಂತ 49 ಠಾಣೆಗಳ ಪೊಲೀಸರಿಗೆ ಈತ ಬೇಕಾಗಿದ್ದಾನೆ ಎಂಬುದು ಪತ್ತೆಯಾಗಿದೆ.