ಕದಂಬೋತ್ಸವದಲ್ಲಿ ಪ್ರತಿಭೆ ಅನಾವರಣಕ್ಕೆ ಅವಕಾಶ

| Published : Mar 04 2024, 01:19 AM IST

ಸಾರಾಂಶ

ನನ್ನ ಮಾತೃಭಾಷೆ ಕನ್ನಡ. ಆದರೆ ಹುಟ್ಟಿ ಬೆಳೆದು ಓದಿರುವುದು ಹೊರ ರಾಜ್ಯದಲ್ಲಿ.ಈಗ ಕನ್ನಡದ ನೆಲದಲ್ಲಿ ಸೇವೆ ಮಾಡಲು ಅವಕಾಶ ಲಭಿಸಿರುವುದು ನನ್ನ ಪುಣ್ಯ. ಅಲ್ಲದೇ ಕದಂಬೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತೋಷ ತಂದಿದೆ

ಶಿರಸಿ: ಕದಂಬೋತ್ಸವದ ಪ್ರಚಾರಾರ್ಥ ನಡೆಯುವ ಕದಂಬ ಜ್ಯೋತಿಗೆ ಹಾಗೂ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಾಲೂಕಿನ ಗುಡ್ನಾಪುರದಲ್ಲಿ ಭಾನುವಾರ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡಿದರು.

ಗುಡ್ನಾಪುರ ಬಂಗಾರೇಶ್ವರ ದೇವರಿಗೆ ಹಾಗೂ ಗುಡ್ನಾಪುರದ ರಾಣಿ ನಿವಾಸದ ವೀರಭದ್ರ ದೇವರಿಗೆ ಪೂಜೆ ಸಲ್ಲಿಸಿ, ಕದಂಬ ಜ್ಯೋತಿ ಸಂಚಾರದ ಸಭಾ ಕಾರ್ಯಕ್ರಮ ಉದ್ಘಾಟಿಸಲಾಯಿತು.

ನಂತರ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ, ಕದಂಬ ಜ್ಯೋತಿಯಲ್ಲಿ ಕದಂಬೋತ್ಸವ ಕಾರ್ಯಕ್ರಮ ಉದ್ಘಾಟಿಸುತ್ತ ಬಂದಿರುವುದು ಅನೇಕ ವರ್ಷದ ಸಂಪ್ರದಾಯ. ಇದು ಅತ್ಯಂತ ಹೆಮ್ಮೆಯ ಉತ್ಸವ. ಆದ್ದರಿಂದ ಮೆರಗಿನಿಂದ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ೩ ಬಾರಿ ಕದಂಬೋತ್ಸವ ಉದ್ಘಾಟಿಸಲಿದ್ದಾರೆ. ಚಿತ್ರನಟರು, ಪ್ರಸಿದ್ಧ ಗಾಯಕರು ಸೇರಿದಂತೆ ಸ್ಥಳೀಯ ಕಲಾವಿದರಿಗೂ ವೇದಿಕೆಯಲ್ಲಿ ತಮ್ಮ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡಲಾಗಿದೆ. ಹಿಂದೆ ಗುಡ್ನಾಪುರದಲ್ಲಿ ಸಾಂಸ್ಕೃತಿಕ ಉತ್ಸವ ಇಲ್ಲವಾಗಿತ್ತು. ಸ್ವತಃ ಆಸಕ್ತಿ ವಹಿಸಿ ಕಳೆದ ೪ ವರ್ಷಗಳಿಂದ ಗುಡ್ನಾಪುರದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುವಂತೆ ಮಾಡಿದ್ದೇನೆ. ಜಿಲ್ಲೆ, ಹೊರ ಜಿಲ್ಲೆಯ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

ಸಭಾ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕನ್ನಡ ಉಳಿಸಿ, ಬೆಳೆಸಿದ ರಾಜವಂಶ ಕದಂಬ ರಾಜ ವಂಶವಾಗಿದ್ದು, ಆದ್ದರಿಂದ ಕನ್ನಡದ ಮೊಟ್ಟ ಮೊದಲ ರಾಜಧಾನಿಯ ನೆಲದಲ್ಲಿಯೇ ಕದಂಬೋತ್ಸವ ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಕದಂಬೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಕ್ರಿಶ ೪ ನೆಯ ಶತಮಾನದಲ್ಲಿ ಕದಂಬ ಸಾಮ್ರಾಜ್ಯ ಕಟ್ಟಿದ ಶ್ರೇಯಸ್ಸು ಮಯೂರ ವರ್ಮನಿಗೆ ಸಲ್ಲುತ್ತದೆ. ಮಾ. ೫ ಮತ್ತು ೬ರಂದು ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು.

ಸಹಾಯಕ ಆಯುಕ್ತೆ ಅಪರ್ಣ ರಮೇಶ ಮಾತನಾಡಿ, ನನ್ನ ಮಾತೃಭಾಷೆ ಕನ್ನಡ. ಆದರೆ ಹುಟ್ಟಿ ಬೆಳೆದು ಓದಿರುವುದು ಹೊರ ರಾಜ್ಯದಲ್ಲಿ.ಈಗ ಕನ್ನಡದ ನೆಲದಲ್ಲಿ ಸೇವೆ ಮಾಡಲು ಅವಕಾಶ ಲಭಿಸಿರುವುದು ನನ್ನ ಪುಣ್ಯ. ಅಲ್ಲದೇ ಕದಂಬೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.

ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಅಂಡಗಿ ಗ್ರಾಪಂ ಅಧ್ಯಕ್ಷ ಸುದರ್ಶನ ನಾಯ್ಕ, ಸದಸ್ಯರಾದ ಪ್ರಕಾಶ, ರಘು ನಾಯ್ಕ, ಜ್ಯೋತಿ ನಾಯ್ಕ,ಅಶೋಕ ನಾಯ್ಕ, ಸತೀಶ ಗೌಡ, ಚೆನ್ನಮ್ಮ ಚೆನ್ನಯ್ಯ, ರವಿ ಗಾಣಿಗ, ಶಿಲ್ಪಾ ಚೆನ್ನಯ್ಯ, ಗುತ್ತಮ್ಮ ವಾಲ್ಮೀಖಿ, ಭೂ ನ್ಯಾಯಮಂಡಳಿ ಸದಸ್ಯ ರವಿ ನಾಯ್ಕ, ಮುಖಂಡ ಸಿ.ಎಫ್. ನಾಯ್ಕ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಕುಮಾರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಹಸೀಲ್ದಾರ ಶ್ರೀಧರ ಮುಂದಲಮನಿ ಸ್ವಾಗತಿಸಿದರು. ನಾಗಶ್ರೀ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿ, ನಾಡಗೀತೆ ಮತ್ತು ರೈತಗೀತೆ ಹಾಡಿದರು. ಉದಯಕುಮಾರ ಕಾನಳ್ಳಿ ನಿರೂಪಿಸಿ ವಂದಿಸಿದರು.

ಕಳೆ ಗುಂದಿದ ಉತ್ಸವ: ಪ್ರತಿ ವರ್ಷವೂ ಅತ್ಯಂತ ವೈಭವೋಪೇರಿತ ಕದಂಬೋತ್ಸವ ಆಚರಣೆ ಮಾಡಲಾಗುತ್ತಿತ್ತು. ಈ ವರ್ಷ ಬರಗಾಲದ ನೆಪವೊಡ್ಡಿ ಕಾಟಾಚಾರಕ್ಕೆ ಕದಂಬೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು. ಕದಂಬ ಜ್ಯೋತಿಯ ಉದ್ಘಾಟನೆಯ ವೇಳೆ ಗುಡ್ನಾಪುರ ಗ್ರಾಮವನ್ನು ಹಬ್ಬದಂತೆ ಶೃಂಗಾರ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಬೆರಳಣಿಕೆಯ ಸಾರ್ವಜನಿಕರು ಮಾತ್ರ ಪಾಲ್ಗೊಂಡಿದ್ದರು.

ಸಿಂಗರಿಸಿದ ವಾಹನದಲ್ಲಿ ಕದಂಬ ಜ್ಯೋತಿ ತೆರಳಲಿದೆ. ಮಾ. ೩ ರಂದು ಮೊದಲ ಜ್ಯೋತಿ ಗುಡ್ನಾಪುರ-ಅಂಡಗಿ-ದಾಸನಕೊಪ್ಪ-ಮಳಗಿ- ಕಾತೂರ ಮೂಲಕ ಮುಂಡಗೋಡು-ಕಲಘಟಗಿಗೆ ತೆರಳಿ ತಂಗಲಿದೆ. ಎರಡನೇ ದಿನ ಕಲಘಟಗಿ, ಹಳಿಯಾಳ, ದಾಂಡೇಲಿ, ಜೋಯಿಡಾ, ಕಾರವಾರ, ಅಂಕೋಲಾ, ಗೋಕರ್ಣ ಸಂಚರಿಸಿ ಯಲ್ಲಾಪುರದಲ್ಲಿ ತಂಗಲಿದೆ. ಮಾ. ೫ ರಂದು ಸ್ವರ್ಣವಲ್ಲಿ ಮಠ, ಹುಲೇಕಲ್, ಶಿರಸಿ ಮಾರಿಕಾಂಬಾ ದೇವಸ್ಥಾನದ ಮೂಲಕ ಬನವಾಸಿ ತಲುಪಲಿದೆ. ಎರಡನೇ ಜ್ಯೋತಿ ಮೊದಲ ದಿನ ಜಡೆ, ಹಾನಗಲ್, ಆನವಟ್ಟಿ- ಕುಪ್ಪಗಡ್ಡೆ-ತವನಂದಿ ಮೂಲಕ ಸೊರಬ ತಲುಪಿ ಅಲ್ಲಿ ತಂಗಲಿದೆ. ಎರಡನೇ ದಿನ ಸೊರಬ-ಶಿರಾಳಕೊಪ್ಪ-ಶಿಕಾರಿಪುರ-ತಯಾಗರ್ತಿ-ಸಾಗರ-ಭಟ್ಕಳ- ಮುರ್ಡೇಶ್ವರ-ಇಡಗುಂಜಿ-ಹೊನ್ನಾವರ-ಕುಮಟಾಕ್ಕೆ ಆಗಮಿಸಿ ತಂಗಲಿದೆ. ಮಾ. ೫ ರಂದು ಕುಮಟಾ-ಸಿದ್ದಾಪುರ-ಚಂದ್ರಗುತ್ತಿ-ಹರೀಶಿ-ಭಾಶಿ-ಅಜ್ಜರಣಿ-ಕಂತ್ರಾಜಿ-ಗುಡ್ನಾಪುರ ಮೂಲಕ ಬನವಾಸಿಗೆ ಬರಲಿದೆ.