ಉದ್ಘಾಟನೆ ಭಾಗ್ಯವಿಲ್ಲದೆ ಅನಾಥವಾದ ಅನಿಲ ಚಿತಾಗಾರ

| Published : Jul 10 2024, 12:39 AM IST

ಸಾರಾಂಶ

ನಗರದ ಹೊರ ವಲಯದ ಕೈಗಾರಿಕಾ ಎಸ್ಟೇಟ್ ಬಳಿ (ಸಿವಿವಿ ಕ್ಯಾಂಪಾಸ್) ನಗರಸಭೆ ಬರೋಬರಿ ₹1.80 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲೇ ಮೊದಲ ಅನಿಲ ಚಿತಾಗಾರವನ್ನು ಮೂರು ವರ್ಷಗಳ ಹಿಂದೆಯೇ ನಿರ್ಮಿಸಿದೆ. ಆದರೆ ಉದ್ಘಾಟನೆ ಭಾಗ್ಯ ಇಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಸ್ಮಶಾನ ಜಾಗದ ಕೊರತೆ ಹಿನ್ನೆಲೆಯಲ್ಲಿ ಮೃತರ ಅಂತ್ಯಕ್ರಿಯೆಗೆ ಕೋಟ್ಯಂತರ ರು.ಗಳ ವೆಚ್ಚದಲ್ಲಿ ಅನಿಲ ಚಿತಾಗಾರ ನಿರ್ಮಿಸಿದ್ದರೂ ಉದ್ಘಾಟನೆ ಭಾಗ್ಯವಿಲ್ಲದೇ ಅನಾಥವಾಗಿದೆ.

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ ಸ್ಮಶಾನ ಭೂಮಿಯ ಸಮಸ್ಯೆಗೆ ಪರಿಹಾರ ಸಿಗದೇ ಜನ ಹೈರಾಣಗಿದ್ದಾರೆ. ಮೃತರ ಅಂತ್ಯ ಸಂಸ್ಕಾರಕ್ಕೆ ಇಂಚು ಜಾಗ ಸಿಗದೇ ಮೃತರನ್ನು ಹೂತ ಶವಗಳ ಸ್ಥಳದಲ್ಲೇ ಅಂತ್ಯ ಸಂಸ್ಕಾರ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಕೆಲ ಸಮುದಾಯಗಳಿಗೆ ಸ್ಮಶಾನಕ್ಕಾಗಿ ಪ್ರತ್ಯೇಕ ಜಾಗ ಇದ್ದರೂ ಮತ್ತೆ ಕೆಲವು ಸಮುದಾಯಗಳಿಗೆ ಸ್ಮಶಾನಕ್ಕಾಗಿ ಜಾಗದ ಸಮಸ್ಯೆ ಇಂದಿಗೂ ಕಾಡುತ್ತಿದೆ.

3 ವರ್ಷದ ಹಿಂದೆ ನಿರ್ಮಾಣ

ಇಂತಹವರಿಗೆ ಅನುಕೂಲವಾಗಲೆಂದು ನಗರದ ಹೊರ ವಲಯದ ಕೈಗಾರಿಕಾ ಎಸ್ಟೇಟ್ ಬಳಿ (ಸಿವಿವಿ ಕ್ಯಾಂಪಾಸ್) ನಗರಸಭೆ ಬರೋಬರಿ ₹1.80 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲೇ ಮೊದಲ ಅನಿಲ ಚಿತಾಗಾರವನ್ನು ಮೂರು ವರ್ಷಗಳ ಹಿಂದೆಯೇ ನಿರ್ಮಿಸಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇದುವರೆಗೂ ಉದ್ಘಾಟನೆಗೊಳ್ಳದೇ ಕಟ್ಟಡ ಶಿಥಿಲಗೊಳ್ಳುತ್ತಿದೆ. 2018ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಚಿಕ್ಕಬಳ್ಳಾಪುರ ನಗರಸಭೆಗೆ ಬಜೆಟ್‌ನಲ್ಲಿ ವಿಶೇಷ ಅನುದಾನ 50 ಕೋಟಿ ರು.ಗಳನ್ನು ಘೋಷಿಸಿದ್ದರು. ಅದೇ ಅನುದಾನ ಬಳಸಿಕೊಂಡೇ ನಗರದಲ್ಲಿನ ಸ್ಮಶಾನ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ಮೃತರ ಅಂತ್ಯ ಸಂಸ್ಕಾರಕ್ಕೆ ಆಧುನಿಕ ಸ್ಪರ್ಶ ನೀಡಲು ನಗರಸಭೆ ಎಲ್ಲ ವರ್ಗದ ಸಮುದಾಯಗಳಿಗೆ ಅನುಕೂಲವಾಗಲೆಂದು ಅತ್ಯಾಧುನಿಕ ಅನಿಲ ಚಿತಗಾರ ನಿರ್ಮಾಣಕ್ಕೆ ನಿರ್ಧರಿಸಿ ಆಸಕ್ತಿಯಿಂದ ಕಾಮಗಾರಿಗೆ 2019ರಲ್ಲಿಯೆ ಚಾಲನೆ ನೀಡಿತು. ಆದರೆ ಕಾಮಗಾರಿ ಮುಗಿದು ಮೂರು ವರ್ಷ ಕಳೆದರೂ ಅದನ್ನು ಸಾರ್ವಜನಿಕರ ಬಳಕೆಗೆ ನೀಡಿಲ್ಲ.

ಸಾಂಪ್ರದಾಯಿಕ ಸಂಸ್ಕಾರ

ಪ್ರಸ್ತುತ ವಾಪಸಂದ್ರ ಮತ್ತು ಬಿಬಿ ರಸ್ತೆಗಳಲ್ಲಿ ಕಟ್ಟಿಗೆಯನ್ನು ಜೋಡಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಶವಗಳ ಸಂಸ್ಕಾರ ಮಾಡ ಲಾಗುತ್ತಿದೆ. ಇದರಲ್ಲಿ ಒಂದು ಶವ ಸಂಪೂರ್ಣವಾಗಿ ಸುಡಲು ಸುಮಾರು 3ರಿಂದ 4 ಗಂಟೆಗಳು ಬೇಕು. ಆದರೆ ಈ ಅನಿಲ ಆಧಾರಿತ ಚಿತಾಗಾರ ಬೇಗನೆ ಶವವನ್ನು ಸಂಪೂರ್ಣವಾಗಿ ಭಸ್ಮಗೊಳಿಸುತ್ತದೆ. ಜತೆಗೆ ಯಾವುದೇ ವಾಸನೆ ಬರುವುದಿಲ್ಲ. ಶವ ದಹನದ ವೇಳೆ ಹೊರಹೊಮ್ಮುವ ವಿಷಾನಿಲ, ಬೂದಿ ಮತ್ತಿತರ ವಸ್ತುಗಳು ನೇರವಾಗಿ ವಾತಾವರಣ ಸೇರುವುದನ್ನು ತಪ್ಪಿಸಲು ನೀರಿನ ಬಳಕೆ ಮಾಡಲಾಗುತ್ತದೆ. ನೀರಿನಲ್ಲಿ ಕಲ್ಮಶಗಳು ಸಂಗ್ರಹಿಸ ಲ್ಪಟ್ಟು ಸಂಸ್ಕರಿತಗೊಂಡ ಶುದ್ಧಗಾಳಿ ಉದ್ದದ ಚಿಮಣಿ ಮೂಲಕ ಹೊರ ಹೋಗಲಿದೆ. ಶವ ದಹನದ ವೇಳೆ ಶಾಖ ಕಾಯ್ದುಕೊಳ್ಳಲು ಯಂತ್ರವನ್ನು ವಿಶೇಷ ಇಟ್ಟಿಗೆ ಬಳಸಿ ಚೇಂಬರ್‌ ನಿರ್ಮಿಸಲಾಗಿದೆ. ಇದರಲ್ಲಿ ವ್ಯಕ್ತಿಯ ಮೃತದೇಹ 600 ಡಿಗ್ರಿ ಶಾಖದಲ್ಲಿ 45 ನಿಮಿಷದಲ್ಲಿ ದನಹನ ಮಾಡಲಾಗುತ್ತದೆ. ಈಶಾ ಫೌಢೇಶನ್ ಸಹಾಯ ಹಸ್ತ

ಅನಿಲ ಚಿತಾಗಾರದ ನಿರ್ವಹಣೆ ವೆಚ್ಚವೂ ಅಧಿಕ. ಆದರೆ ಚಿಕ್ಕಬಳ್ಳಾಪುರದ ಆವಲಗುರ್ಕಿ ಬಳಿಯ ಈಶಾ ಫೌಢೇಶನ್ ಸ್ವಯಂ ಸೇವಕರು ಉಚಿತವಾಗಿ ಚಿತಾಗಾರದ ನಿರ್ವಹಣೆ ವಹಿಸಿಕೊಳ್ಳಲು ಮುಂದೆ ಬಂದಿದ್ದರು. ಈ ಸಂಬಂಧ ಒಂದು ಹಂತದಲ್ಲಿ ಜಿಲ್ಲಾಡಳಿತದೊಂದಿಗೆ ಮಾತುಕತೆ ಸಹ ನಡೆದಿತ್ತು. ಆದರೆ ಮುಂದೆ ಯಾವುದೂ ಕಾರ್ಯಗತವಾಗಲಿಲ್ಲ.ಈಗಲಾದರೂ ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ, ಚಿತಾಗಾರವನ್ನು ಸಾರ್ವಜನಿಕ ಬಳಕೆಗೆ ನೀಡುವ ಮೂಲಕ ಮೃತರ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡಬೇಕು. ಕ್ಷೇತ್ರದ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚಿತಾಗಾರ ಆರಂಭಕ್ಕೆ ಮುಂದಾಗಬೇಕು ಎಂದು ಬಿಜೆಪಿ ನಗರ ಮಂಡಲಾಧ್ಯಕ್ಷ ಅನು ಆನಂದ್ ಆಗ್ರಹಿಸಿದ್ದಾರೆ.