ಸಾರಾಂಶ
ಗಜೇಂದ್ರಗಡ: ಪಟ್ಟಣದ ೨೨ನೇ ವಾರ್ಡ್ ಬಡಾವಣೆಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ. ಹೀಗಾಗಿ ಬಡಾವಣೆಯ ನಿವಾಸಿಗಳು ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ ಎಂದು ಲೋಕಾಯುಕ್ತರಿಗೆ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಡಿವೈಎಸ್‌ಪಿ ಶುಕ್ರವಾರ ಭೇಟಿ ನೀಡಿ ಪುರಸಭೆ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ ಎನ್ನಲಾಗಿದೆ.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಜಿಲ್ಲಾ ಘಟಕದಿಂದ ನಡೆದ ತಾಲೂಕು ಮಟ್ಟದ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಬಳಿಕ ಸ್ಥಳೀಯ ೨೨ನೇ ವಾರ್ಡಿನಲ್ಲಿನ ಬಳಿಗೇರ ಅವರ ಬಡಾವಣೆಗೆ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ಭೇಟಿ ನೀಡಿದರು. ೭ ವರ್ಷಗಳಿಂದ ಬಡಾವಣೆಯ ನಿವಾಸಿಗಳು ಮನವಿ ನೀಡುತ್ತಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬಡಾವಣೆ ನಿವಾಸಿಗಳು ಲೋಕಾಯುಕ್ತರಿಗೆ ದೂರು ನೀಡಿದ್ದರು.ಲೋಕಾಯುಕ್ತ ಡಿವೈಎಸ್‌ಪಿ ಅವರು ಮುಖ್ಯಾಧಿಕಾರಿ, ಕೇಸ್ ವರ್ಕರ್ ಸೇರಿ ಇತರ ಅಧಿಕಾರಿಗಳ ಕಾರ್ಯ ವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಅಪೂರ್ಣವಾಗಿ ಅಭಿವೃದ್ಧಿ ಹೊಂದದ ಬಡಾವಣೆಗಳನ್ನು ಅಭಿವೃದ್ಧಿ ಮಾಡದ ಮಾಲೀಕರಿಗೆ ಬಡಾವಣೆ ಅಭಿವೃದ್ಧಿ ಪಡಿಸಲು ನೋಟಿಸ್ ನೀಡಿ, ಬಡಾವಣೆ ಅಭಿವೃದ್ಧಿ ಪಡಿಸಲು ಮುಂದಾಗದಿದ್ದರೆ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿ. ಇಲ್ಲದಿದ್ದರೆ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಂಡರೆ ವಾರದಲ್ಲಿ ಎರಡು ದಿನ ಬೆಂಗಳೂರಿಗೆ ಅಲೆಯುವಂತಾಗುತ್ತದೆ ಎಂಬ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ನಿವಾಸಿಯೊಬ್ಬರು ತಿಳಿಸಿದರು.
ಜಿಲ್ಲೆಯಲ್ಲಿ ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿರುವುದರಿಂದ ಖಾಲಿ ಜಾಗ ಹಾಗೂ ಜಮೀನುಗಳಿಗೆ ಭಾರಿ ಬೇಡಿಕೆಯಿದೆ. ಗಜೇಂದ್ರಗಡ ಬಸ್ ನಿಲ್ದಾಣದಿಂದ ಹಿಡಿದು ರೋಣ ಹಾಗೂ ಕುಷ್ಟಗಿ ರಸ್ತೆಗಳಲ್ಲಿ ಅಂಗಡಿಗಳ ಬಾಡಿಗೆ ತಿಂಗಳಿಗೆ ₹೪೦ರಿಂದ ₹೫೦ ಸಾವಿರ ಇದ್ದರೆ ಊರಿನ ಮಧ್ಯದಲ್ಲಿ ₹೧೫ ಸಾವಿರದಿಂದ ೨೦ ಸಾವಿರ ವರೆಗೆ ಚದರ ಮೀಟರ್‌ಗೆ ದರವಿದೆ. ಪಟ್ಟಣದ ಹೊರ ವಲಯದಲ್ಲಿ ಚದರ ಮೀಟರ್‌ಗೆ ₹೩ ಸಾವಿರದಿಂದ ₹೪ ಸಾವಿರವಿದೆ. ಬಡಾವಣೆಯ ನಿರ್ಮಿಸುವವರು ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಲಕ್ಷಾಂತರ ರು. ನೀಡಿ ಸೈಟ್ ಖರೀದಿಸಿದ ಜನರು, ಬಡಾವಣೆಯಲ್ಲಿ ಸಂಚರಿಸಲು ಸಾಹಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ಬಡಾವಣೆಗಳಲಿ ಚರಂಡಿ ನಿರ್ಮಾಣ ಹಾಗೂ ರಸ್ತೆಗಳೇ ಕಾಣವುದಿಲ್ಲ. ಇತ್ತ ಕೆಲವು ಬಡಾವಣೆಗಳಲ್ಲಿ ಕಾಟಾಚಾರಕ್ಕೆ ಎಂಬಂತೆ ಚರಂಡಿ ಹಾಗೂ ರಸ್ತೆಗಳನ್ನು ನಿರ್ಮಿಸಲಾಗಿದೆ. ಇಷ್ಟೆಲ್ಲ ಅವಾಂತರಗಳಿದ್ದರೂ ಬಡಾವಣೆಗಳಲ್ಲಿ ಸೈಟ್‌ಗಳ ಮಾರಾಟ ನಿಲ್ಲಿಸಬೇಕಾಗಿದ್ದು ಅಧಿಕಾರಿಗಳ ಕರ್ತವ್ಯ. ಆದರೆ ಅಭಿವೃದ್ಧಿ ಹೊಂದದ ೧೦ರಿಂದ ೧೧ ಬಡಾವಣೆಗಳಲ್ಲಿ ಸೈಟ್‌ಗಳ ಮಾರಾಟ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ.ಅಧಿಕಾರಿಗಳು ಬಡಾವಣೆ ಅಭಿವೃದ್ಧಿಪಡಿಸದ ಮಾಲೀಕರಿಗೆ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾರಾ ಎಂದು ಕಾದು ನೋಡಬೇಕಿದೆ.