ಸಾರಾಂಶ
ಅವರು ಮೈಸೂರು ಗರಡಿಯಲ್ಲಿ ಬೆಳೆದಿದ್ದರೆ, ನಾನು ಕೂಡ ಮೈಸೂರು ಗರಡಿಯಲ್ಲಿಯೇ ಪಳಗಿದ್ದೇನೆ. ಅದೇ ಗರಡಿಯಲ್ಲಿಯೇ ನಾನೂ ಕುಸ್ತಿ ಆಡಿದ್ದೇನೆ. ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದರೆ ನಾನೇನು ಮಾಡಲಿ?’ ಎಂದು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರು ಸಿದ್ದು ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
‘ಅವರು ಮೈಸೂರು ಗರಡಿಯಲ್ಲಿ ಬೆಳೆದಿದ್ದರೆ, ನಾನು ಕೂಡ ಮೈಸೂರು ಗರಡಿಯಲ್ಲಿಯೇ ಪಳಗಿದ್ದೇನೆ. ಅದೇ ಗರಡಿಯಲ್ಲಿಯೇ ನಾನೂ ಕುಸ್ತಿ ಆಡಿದ್ದೇನೆ. ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದರೆ ನಾನೇನು ಮಾಡಲಿ?’ ಎಂದು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು ‘ನನ್ನಮ್ಮ ನನಗೆ ಬಾಟಲಿ ಹಾಲು ಕುಡಿಸಿಲ್ಲ. ತಾಯಿಯ ಎದೆ ಹಾಲು ಕುಡಿದು ಬೆಳೆದಿದ್ದೇನೆ.
ನನ್ನ ತಾಯಿ ಬಗ್ಗೆ ಹಾಗೂ ದೇಶದ ಬಗ್ಗೆ ನನಗೆ ಅಪಾರ ಗೌರವವಿದೆ. ತಾಯಿ ಹಾಗೂ ನನ್ನ ದೇಶದ ಬಗ್ಗೆ ಯಾರಾದರೂ ಏನೇನೋ ಮಾತನಾಡಿದರೆ ನಾನು ಸುಮ್ಮನಿರಲು ಸಾಧ್ಯವೇ?’ ಎಂದು ಕಿಡಿ ಕಾರಿದರು.
‘ನನಗೆ ಮತ ಹಾಕಿದವರು ದುಡ್ಡು ತೆಗೆದುಕೊಂಡಿಲ್ಲ. ಸ್ವಾಭಿಮಾನದಿಂದ ಮತ ಹಾಕಿದ್ದಾರೆ. ನನ್ನ ಮತದಾರರು ಸ್ವಾಭಿಮಾನದಿಂದ ಮತ ನೀಡಿದ್ದು ನಿಜವಾದರೆ, ನಾನು ಹೇಳಿದ್ದೂ ಸರಿಯೇ. ಯುದ್ಧಭೂಮಿಯಲ್ಲಿ ಹೇಗೆ ಮಾತಾಡಬೇಕೋ ಹಾಗೆಯೇ ಮಾತಾಡಬೇಕು. ಅಲ್ಲಿ ಹೋಗಿ ಭರತನಾಟ್ಯ ಮಾಡ್ತಾ ಕುಳಿತುಕೊಳ್ಳಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.
ಇಲ್ಲಿ ನಿಮ್ಮ ಮುಂದೆ ಭಾಷಣ ಮಾಡಿ ಹೋಗಿ, ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳೋದು ಈ ನನ್ನ ರಕ್ತದಲ್ಲಿ ಇಲ್ಲ. ಮಹಾಸಂಗ್ರಾಮ ಶುರುವಾಗಿದೆ. ನಾವು ಗೆಲ್ಲುತ್ತೇವೆ ಎನ್ನೋದಿಲ್ಲ. ‘ಗೆದ್ದಿದ್ದೇವೆ’ ಎಂದೇ ಗಟ್ಟಿಯಾಗಿ ಹೇಳುತ್ತೇವೆ.
ಗಂಡು ದನಿಯ ನೆಲವಿದು. ಗಟ್ಟಿಯಾಗಿ ಮಾತಾಡಬೇಕು. ಅಭ್ಯರ್ಥಿ ಯಾರೇ ಆಗಿರಲಿ, ಈ ಕ್ಷೇತ್ರದಲ್ಲಿ ರಾಷ್ಟ್ರೀಯ ದಾಖಲೆಯಾಗಬೇಕು ಎಂದರು.
ಆರೋಗ್ಯದ ವ್ಯತ್ಯಾಸದಿಂದಾಗಿ ನನ್ನ ಹಾಗೂ ನನ್ನ ಕ್ಷೇತ್ರದ ಜನರ ನಡುವೆ ಸಂಪರ್ಕ ಕಡಿಮೆಯಾಗಿತ್ತು. ಇದರಿಂದಾಗಿಯೇ ಚುನಾವಣೆಯಿಂದ ದೂರ ಉಳಿಯುವ ನನ್ನ ಸ್ಪಷ್ಟ ನಿಲುವನ್ನು ಮುಖಂಡರಿಗೆ ತಲುಪಿಸಿದ್ದೇನೆ. ಸೂಕ್ತ ವ್ಯಕ್ತಿಯನ್ನು ಪಕ್ಷ ಆಯ್ಕೆ ಮಾಡಲಿದೆ ಎಂದರು.
ಅಯೋಧ್ಯೆ ರಾಮಮಂದಿರ ದೇವರ ಸಂಕಲ್ಪ: ಅಯೋಧ್ಯೆ ರಾಮಮಂದಿರದ ಬಗ್ಗೆ ಪ್ರತಿಕ್ರಿಯಿಸಿ, ರಾಮಮಂದಿರ ನಿರ್ಮಾಣದ ಕನಸನ್ನು ಎಲ್ಲ ಹಿಂದೂಗಳು ಹೊಂದಿದ್ದರು.
ದೇವರ ಸಂಕಲ್ಪದಿಂದ ಇಂದು ದೇವಾಲಯ ನಿರ್ಮಾಣವಾಗಿದೆ. ಇಲ್ಲಿ ದೇಶದ ಎಲ್ಲ ಹಿಂದೂಗಳಿಗೂ ಮುಕ್ತ ಅವಕಾಶವಿದೆ.
ಆಮಂತ್ರಣ ನನಗೆ ದೊರೆತಿಲ್ಲ ಎಂದು ಕ್ಯಾತೆ ತೆಗೆಯುವ ಬದಲು ಮುಕ್ತ ಮನಸ್ಸಿನಿಂದ ದೇವಾಲಯಕ್ಕೆ ಬರಬಹುದಲ್ಲವೇ ಎಂದು ಕಾಂಗ್ರೆಸಿಗರನ್ನು ಪ್ರಶ್ನಿಸಿದರು.
ಅಯೋಧ್ಯೆ ಆಯಿತು, ಕಾಶಿ, ಮಥುರಾ ಬಾಕಿ ಇದೆ. ಎಲ್ಲ ಕಡೆಗೂ ಬದಲಾವಣೆ ಆಗುತ್ತಿದೆ. ರಣಭೈರವ ಎದ್ದು ನಿಂತಾಗಿದೆ.
ಇನ್ನೇನಿದ್ದರೂ ಮೊಘಲರು ಸೇರಿದಂತೆ ಇತರರು ಈ ಹಿಂದೆ ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡಬೇಕಿದೆ. ಧ್ವಂಸಗೊಂಡ ಹಿಂದೂ ದೇವಾಲಯಗಳು ಮತ್ತೆ ತಲೆ ಎತ್ತಲಿವೆ ಎಂದು ಹೇಳಿದರು.