ಅನಂತಕೃಷ್ಣಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್‌ ಪದವಿ

| Published : Mar 21 2025, 12:31 AM IST

ಅನಂತಕೃಷ್ಣಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್‌ ಪದವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅನಂತ ಕೃಷ್ಣ ಬಿ.ಎಸ್. ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅನಂತ ಕೃಷ್ಣ ಬಿ.ಎಸ್. ಮಂಡಿಸಿದ ‘ಸ್ಥೂಲ ವ್ಯಕ್ತಿಗಳಲ್ಲಿ ಯೋಗವು ಕರುಳಿನ ಸೂಕ್ಷ್ಮ ಜೀವರಾಶಿಗಳ ಸಮೂಹದ (ಗಟ್ ಮೈಕ್ರೋಬೈಓಟಾ) ಮೂಲಕ ರೋಗ ನಿರೋಧನಾ ಶಕ್ತಿಯ ಮೇಲೆ ಬೀರುವ ಪ್ರಭಾವ’ ಶೀರ್ಷಿಕೆಯ ಡಾಕ್ಟರೇಟ್ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ.

ಇವರು ಐಸಿಎಸ್‌ಎಸ್‌ಆರ್‌ ಡಾಕ್ಟೊರಲ್ ಫೆಲೋಶಿಪ್, ನವದೆಹಲಿಯ ಅನುದಾನದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ಕೃಷ್ಣ ಶರ್ಮ ಮಾರ್ಗದರ್ಶನದೊಂದಿಗೆ, ನಿಟ್ಟೆ ವಿಶ್ವವಿದ್ಯಾನಿಲಯದ ವೈಜ್ಞಾನಿಕ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಪ್ರೊ. ಇಂದ್ರಾಣಿ ಕರುಣಾ ಸಾಗರ್ ಮತ್ತು ಡಾ. ಕೃಷ್ಣ ಕುಮಾರ್ ಬಳ್ಳಮೂಲೆ ಬಾಹ್ಯ ಮಾರ್ಗದರ್ಶನದೊಂದಿಗೆ ಸಂಶೋಧನಾ ಕಾರ್ಯ ಕೈಗೊಂಡಿದ್ದರು.

ಮೂಲತಃ ಪುತ್ತೂರು ತಾಲೂಕಿನ ಸವಣೂರಿನ ಅವರು ಶಿವರಾಮ ಭಟ್ ಬೆಟ್ಟುಕಜೆ-ದುರ್ಗಾಪರಮೇಶ್ವರಿ ದಂಪತಿ ಪುತ್ರ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು, ಪ್ರತಿಷ್ಠಿತ ಸೋಲಿಸ್ ಹೆಲ್ತ್ ಸಂಸ್ಥೆಯಲ್ಲಿ ‘ಯೋಗ ಮತ್ತು ಸ್ವಾಸ್ಥ್ಯ ವಿಭಾಗದ ತಜ್ಞ’ರಾಗಿದ್ದಾರೆ.

ಈ ಸಂಶೋಧನೆ ಯೋಗವು ಕರುಳಿನ ಸೂಕ್ಷ್ಮ ಜೀವರಾಶಿಗಳ ಸಮೂಹವನ್ನು ಹೇಗೆ ನಿಯಂತ್ರಿಸುತ್ತದೆ ಹಾಗೂ ಅದರ ಪರಿಣಾಮ ರೋಗನಿರೋಧಕ ಶಕ್ತಿಯ ಮೇಲೆ ಹೇಗಿರುತ್ತದೆ ಎಂಬುದನ್ನು ವಿಶ್ಲೇಷಿಸುತ್ತದೆ. ಯೋಗವು ಸ್ಥೂಲ ವ್ಯಕ್ತಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ದೈಹಿಕ ಆರೋಗ್ಯ ಸುಧಾರಣೆಗೆ ಸಹಾಯ ಮಾಡಬಹುದೆಂಬುದನ್ನು ಈ ಅಧ್ಯಯನ ಸಾಬೀತುಪಡಿಸಿದೆ.

ಅವರ ಈ ಸಂಶೋಧನೆ ಯೋಗದ ಶಾಸ್ತ್ರೀಯ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಲಿದೆ.