ಸಾರಾಂಶ
ಆನವಟ್ಟಿ ಪಟ್ಟಣ ಪಂಚಾಯಿತಿಯ ಹಲವು ಬೀದಿಗಳ ರಸ್ತೆಗಳಲ್ಲಿ ನೀರು ಹರಿದು ಹೋಗದೆ. ರಸ್ತೆಗಳೇ ಹೊಂಡಗಳಾಗಿವೆ, ರಸ್ತೆಗಳು ಕೆಸರು ಗದ್ದೆಯಂತೆ ಆಗಿದ್ದು, ನಿವಾಸಿಗಳು ನಡೆದುಕೊಂಡು ಹೋಗಲು ಹರಸಹಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಆನವಟ್ಟಿ
ಬೆಂಬಿಡ ಮಳೆ, ಧಾರಾಕಾರವಾಗಿ ಸುರಿಯುತ್ತೀರುವ ಮಳೆಯಿಂದಾಗಿ, ಆನವಟ್ಟಿ ಪಟ್ಟಣ ಪಂಚಾಯಿತಿಯ ಹಲವು ಬೀದಿಗಳ ರಸ್ತೆಗಳಲ್ಲಿ ನೀರು ಹರಿದು ಹೋಗದೆ. ರಸ್ತೆಗಳೇ ಹೊಂಡಗಳಾಗಿವೆ, ರಸ್ತೆಗಳು ಕೆಸರು ಗದ್ದೆಯಂತೆ ಆಗಿದ್ದು, ನಿವಾಸಿಗಳು ನಡೆದುಕೊಂಡು ಹೋಗಲು ಹರಸಹಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಹೆಣ್ಣು ಮಕ್ಕಳ ಸರ್ಕಾರಿ ಹಾಸ್ಟೆಲ್‌ನ ಸುತ್ತಲ ರಸ್ತೆಗಳು ಹಾಳಾಗಿವೆ. ಈ ಹಾಸ್ಟೆಲ್‌ನ ಹಿಂಬದಿಯ ರಸ್ತೆಯಂತೂ ನಡೆದಾಡಲೂ ಹರಸಹಾಸ ಪಡಬೇಕಾದಷ್ಟು ಕೆಸರು ಗದ್ದೆ ಯಾಗಿದೆ. ಕಡೆಗೆ ರಸ್ತೆ ಮಧ್ಯೆ ಬಿದ್ದಿರುವ ಹೊಂಡಗಳನ್ನು ಮುಚ್ಚುವ ಕೆಲಸವನ್ನೂ ಪಟ್ಟಣ ಪಂಚಾಯಿತಿ ಮಾಡಿಲ್ಲ.
ಶಿರಾಳಕೊಪ್ಪ ಮಾರ್ಗದ ರಾಘವೇಂದ್ರ ಬಡಾವಣೆ, ಬಸವೇಶ್ವರ ಬಡಾವಣೆ, ನೆಹರು ನಗರ, ಸೊರಬ ಮಾರ್ಗದ ಮಹಾಲಕ್ಮೀ ಬಡಾವಣೆ, ದಾನಮ್ಮ ಬಡಾವಣೆ, ಸಂತೆ ಮಾರುಕಟ್ಟೆ, ದುರ್ಗಮ್ಮ ಬೀದಿಯ ರಸ್ತೆಗಳು 30-35 ವರ್ಷದಿಂದ ಡಾಂಬರು ರಸ್ತೆಯನ್ನೇ ಕಂಡಿಲ್ಲ.ಆನವಟ್ಟಿ ಪಟ್ಟಣ ಪಂಚಾಯಿತಿ ದರ್ಜೆಗೇರಿದ ನಂತರ ಅಭಿವೃದ್ಧಿ ಹೊಂದುತ್ತದೆ ಎಂಬ ಜನರ ನಂಬಿಕೆ ಸುಳ್ಳಾಗಿದೆ. ಚೌಟಿ ರಸ್ತೆಗೆ ಹೊಂದಿಕೊಂಡಿರುವ ರಾಜ್‌ಕಾಲುವೆ ಎಂದು ಕರೆಯುವ ಕಾಲುವೆ ಹೊಳು ತುಂಬಿ ಮುಚ್ಚಿ ಹೋಗಿದೆ. ಮಳೆ ನೀರು ಹರಿದು ಹೋಗುತ್ತಿಲ್ಲ. ಸ್ವಚ್ಛತೆಗೆ ಆಧ್ಯತೆ ಸಿಗುತ್ತಿಲ್ಲ. ಮತ್ತು ಕಾಂಕ್ರೀಟ್ ರಸ್ತೆ ಮಂಜೂರಾದ ಚೌಟಿರಸ್ತೆ ಯಿಂದ 2ನೇ ಒಳರಸ್ತೆ ನಿರ್ಮಾಣವಾಗಲಿಲ್ಲ. ಈಗ ನಿವಾಸಿಗಳು ಅಧಿಕಾರಿಗಳನ್ನು ವಿಚಾರಿಸಿದರೇ ಕಾಮಗಾರಿ ಹಿಂದಕ್ಕೆ ಹೋಗಿದೆ ಎಂದು ಉತ್ತರ ನೀಡುತ್ತಿದ್ದಾರೆ ಎನ್ನುತ್ತಾರೆ ನಿವಾಸಿ ರೇಖಾ ಪಾಟೀಲ್.
ಕಾಂಕ್ರೀಟ್ ಅಥವಾ ಡಾಂಬರು ರಸ್ತೆ ಮಾಡದಿದ್ದರೂ ಪರವಾಗಿಲ್ಲ, ಕನಿಷ್ಟ ಜನರು ನಡೆದಾಡಲು ಆಗುವಂತೆ ಜಲ್ಲಿಕಲ್ಲು ರಸ್ತೆಯನ್ನಾದರೂ ನಿರ್ಮಾಣ ಮಾಡಿಕೊಡಿ ಮತ್ತು ಮಳೆ ನೀರು ಹರಿದು ಹೋಗುವಂತೆ ಚರಂಡಿಗಳನ್ನು ನಿರ್ಮಾಣ ಮಾಡಿ ಎಂದು ಆನವಟ್ಟಿ ಪಟ್ಟಣ ಪಂಚಾಯಿತಿ ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.