ಪ್ರಕೃತಿಯೊಂದಿಗೆ ನೇರವಾಗಿ ಬೆಸೆದುಕೊಂಡಿದ್ದ ಹಿಂದಿನ ಕಾಲದ ಜನರ ದೈಹಿಕ ಶ್ರಮ ಮತ್ತು ಕಾಲೋಚಿತ ಆಹಾರ ಪದ್ಧತಿಯು ಅವರ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕೆ ಮುಖ್ಯ ಕಾರಣವಾಗಿತ್ತು.

ಅಳ್ನಾವರ:

ಮಾನವನ ದುರಾಸೆಯಿಂದ ಪ್ರಾಚೀನ ಆಹಾರ ಪದ್ಧತಿ ಬದಲಾಗಿದೆ. ರಾಸಾಯನಿಕಯುಕ್ತ ಆಹಾರ ಬಳಕೆ ಅಧಿಕಗೊಂಡು ಆರೋಗ್ಯಕರ ಬದುಕು ನಾಶವಾಗುತ್ತಿದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಲ್ಲಪ್ಪ ಬಡಿಗೇರ ಹೇಳಿದರು.

ಪಟ್ಟಣದಲ್ಲಿ ಒಂಬತ್ತನೇ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಪೋಷಣ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿಯೊಂದಿಗೆ ನೇರವಾಗಿ ಬೆಸೆದುಕೊಂಡಿದ್ದ ಹಿಂದಿನ ಕಾಲದ ಜನರ ದೈಹಿಕ ಶ್ರಮ ಮತ್ತು ಕಾಲೋಚಿತ ಆಹಾರ ಪದ್ಧತಿಯು ಅವರ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕೆ ಮುಖ್ಯ ಕಾರಣವಾಗಿತ್ತು. ಇಂದಿನ ಒತ್ತಡ ಮತ್ತು ಧಾವಂತದ ಜೀವನದಲ್ಲಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದು ಬದಲಾವಣೆಯತ್ತ ಸಾಗುವುದು ಅತಿ ಅವಶ್ಯವಿದೆ ಎಂದರು.

ಇಂದಿಗೂ ಅನೇಕ ಮಕ್ಕಳು ಕಡಿಮೆ ತೂಕ, ಬೆಳವಣಿಗೆ ಕುಂಠಿತ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದನ್ನು ತಡೆಯಲು ಈ ಯೋಜನೆ ಅಗತ್ಯವಾಗಿದ್ದು ಸ್ಥಳೀಯವಾಗಿ ದೊರೆಯುವ ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಲು ಜಾಗೃತಿ ಮೂಡಿಸಬೇಕೆಂದು ಹೇಳಿದರು.

ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ ಮಾತನಾಡಿ, ಆರೋಗ್ಯಯುತ ಮಕ್ಕಳಿಂದ ಸದೃಢ ಭಾರತ ನಿರ್ಮಾಣದ ಗುರಿ ಮುಟ್ಟಲು ಸಾಧ್ಯವಾಗಲಿದೆ. ಬಾಲ್ಯದಲ್ಲಿ ಕಂಡು ಬರುವ ಸಮಸ್ಯೆ ಹೋಗಲಾಡಿಸಲು ಈ ಕಾರ್ಯಕ್ರಮ ಪೂರಕವಾಗಲಿದೆ. ಗರ್ಭಾವಸ್ಥೆಯಿಂದಲೆ ತಾಯಿ-ಮಗುವಿಗೆ ಉತ್ತಮ ಆರೋಗ್ಯ ಅವಶ್ಯವಾಗಿದೆ, ಪ್ರಾಚೀನ ಆಹಾರ ಪದ್ಧತಿಯು ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಮಾರ್ಗವಾಗಿರದೆ, ಒಂದು ಜೀವನ ಧರ್ಮ ಹಾಗೂ ಔಷಧಿಯ ಭಾಗವಾಗಿತ್ತು ಎಂದರು.

ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೀರನಗೌಡ ಪಾಟೀಲ ಮಾತನಾಡಿ, ಈ ಯೋಜನೆಯು ಕೇವಲ ಆಹಾರ ವಿತರಣೆಗೆ ಸೀಮಿತವಾಗಿರದೆ ಸ್ವಚ್ಛತೆ, ಸುರಕ್ಷಿತ ಕುಡಿಯುವ ನೀರು ಮತ್ತು ಸರಿಯಾದ ಶಿಶು ಆಹಾರ ಪದ್ಧತಿ ಒಳಗೊಂಡಿದ್ದು ಸಮಗ್ರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೀಮಂತ ಕಾರ್ಯಕ್ರಮ ಮತ್ತು ಮಕ್ಕಳಿಗೆ ಅಕ್ಷರಭ್ಯಾಸ ಹಾಗೂ ಅನ್ನಪ್ರಾಶನ ಮಾಡಿಸಲಾಯಿತು. ಆರೋಗ್ಯಯುತ ಜೀವನಕ್ಕೆ ಪೌಷ್ಟಿಕ ಆಹಾರದ ತಯಾರಿಕೆ ಮತ್ತು ಮಹತ್ವದ ಬಗ್ಗೆ ತಿಳಿಸಲಾಯಿತು,

ತಾಪಂ ಇಒ ಪ್ರಶಾಂತ ತುರಕಾಣಿ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ಸಿಡಿಪಿಇ ಮಂಜುನಾಥ ಕುಂಬಾರ, ಕಮಲವ್ವ ಬೈಲೂರ, ಸುಮಾ ಸುಳ್ಳದ, ರಮಾದೇವಿ ಕತಕನಹಳ್ಳಿ, ಶಿಲ್ಪಾ ತರಗಾರ, ಸುಧಾ ಶಿರೋಡಕರ, ಆರೋಗ್ಯ ಶಿಕ್ಷಣಾಧಿಕಾರಿ ಶೋಭಾ ಕುಲಕರ್ಣಿ, ಎಂ.ಎ. ಕುಂಬಾರ ಮತ್ತಿತರರು ಇದ್ದರು.