ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ತೂಗು ತೊಟ್ಟಿಲು

| Published : Mar 11 2024, 01:17 AM IST

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಮಾತೃಸ್ಥಾನವಾಗಿರುವ ಆನೆಗೊಂದಿಯನ್ನು ವಿಜಯನಗರ ಸಾಮ್ರಾಜ್ಯದ ತೂಗುತೊಟ್ಟಿಲು ಎಂದು ಸಹ ಕರೆಯಲಾಗುತ್ತದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ವಿಜಯನಗರ ಸಾಮ್ರಾಜ್ಯದ ಮಾತೃಸ್ಥಾನವಾಗಿರುವ ಆನೆಗೊಂದಿಯನ್ನು ವಿಜಯನಗರ ಸಾಮ್ರಾಜ್ಯದ ತೂಗುತೊಟ್ಟಿಲು ಎಂದು ಸಹ ಕರೆಯಲಾಗುತ್ತದೆ. ಇಂಥ ಆನೆಗೊಂದಿಯ ಇತಿಹಾಸ ಕೇವಲ ವಿಜಯನಗರ ಸಾಮ್ರಾಜ್ಯಕ್ಕೆ ಅಷ್ಟೇ ಸೀಮಿತವಾಗಿಲ್ಲ. ಅದಕ್ಕೂ ಪೂರ್ವದಲ್ಲಿಯೂ ಆನೆಗೊಂದಿಯ ಇತಿಹಾಸವಿದೆ.

ಪ್ರಾಗೈತಿಕ ಇತಿಹಾಸ, ಪೌರಾಣಿಕ ಐತಿಹ್ಯಗಳನ್ನು ಒಳಗೊಂಡ ಮಹಾನ್ ಸ್ಥಳ ಆನೆಗೊಂದಿ. ಇಂದಿಗೂ ರಾಮಾಯಣ ಮತ್ತು ಮಹಾಭಾರತದ ಕುರುಹುಗಳನ್ನು ಇಲ್ಲಿ ಕಾಣಬಹುದಾಗಿದೆ.

ಹೌದು, ಆನೆಗೊಂದಿ ಪೌರಾಣಿಕ ಇತಿಹಾಸ ದೊಡ್ಡದಿದೆ. ಇಲ್ಲಿ ವಾಲಿ-ಸುಗ್ರೀವ ಕಿಲ್ಲಾ, ರಾಮನಿಗಾಗಿ ಶಬರಿ ಕಾದ ಸ್ಥಳ, ಋಷಿ-ಮುನಿಗಳು ವಾಸಿಸಿದ ತಾಣ, ಶಾಪವಿತ್ತ ಸ್ಥಳ ಎಲ್ಲವನ್ನೂ ನಾವು ನೋಡಬಹುದಾಗಿದೆ. ಇದಕ್ಕಿಂತ ಮಿಗಿಲಾಗಿ ಆಂಜನೇಯ ಜನಿಸಿದ ನಾಡು ಅಂಜನಾದ್ರಿಯೂ ಇದೇ ಕಿಷ್ಕಿಂಧೆಯ ಪ್ರದೇಶದಲ್ಲಿದೆ ಎನ್ನುವುದು ಗಮನಾರ್ಹ ಸಂಗತಿ.

ಅಂಜನಾದ್ರಿ ಈಗ ವಿಶ್ವ ಪ್ರಸಿದ್ಧಿಯಾಗುತ್ತಿದೆ. ಹಂಪಿಯನ್ನು ಮೀರಿಸುವಂತೆ ಭಕ್ತರು ಆಗಮಿಸುತ್ತಿರುವುದರಿಂದ ಉತ್ತರ ಕರ್ನಾಟಕ ಪ್ರಸಿದ್ಧ ಸ್ಥಳಗಳಲ್ಲೊಂದಾಗಿದೆ. ದೇಶಿಯ ಪ್ರವಾಸಿಗರು ಅಷ್ಟೇ ಅಲ್ಲ, ನಾನಾ ದೇಶದ ಪ್ರವಾಸಿಗರನ್ನು ಸೆಳೆಯುತ್ತಿದೆ. ಆಂಜನೇಯನ ಜನ್ಮದಿನ ಸಂದರ್ಭದಲ್ಲಿ ಹಾಗೂ ಹನುಮಾಮಾಲಾ ವಿಸರ್ಜನಾ ಕಾರ್ಯಕ್ರಮದ ವೇಳೆಯಲ್ಲಿ ಲಕ್ಷ ಲಕ್ಷ ಭಕ್ತರು ಸೇರುವ ತಾಣವಾಗಿ ಮಾರ್ಪಟ್ಟಿದೆ.

ಅದರಲ್ಲೂ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾದ ಮೇಲೆ ಅಂಜನಾದ್ರಿಯಿಂದ ಅಯೋಧ್ಯೆ, ಅಯೋಧ್ಯೆಯಿಂದ ಅಂಜನಾದ್ರಿಗೆ ಎನ್ನುವ ಪ್ರತೀತಿ ಬೆಳೆದಿದೆ. ಇದರಿಂದ ಅಂಜನಾದ್ರಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಗುಣಕಾರ ಲೆಕ್ಕಾಚಾರದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಭಕ್ತರು ನೀಡಿದ್ದ ಕಾಣಿಕೆ ವರ್ಷದಿಂದ ವರ್ಷಕ್ಕೆ ಕೋಟಿಗಟ್ಟಲೇ ಏರುತ್ತಿದೆ.

ತೂಗುತೊಟ್ಟಿಲು: ವಿಜಯನಗರದಲ್ಲಿ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸುತ್ತಾರೆ. ಹರಿಹರನ ಕಾಲದಲ್ಲಿ ಆನೆಗೊಂದಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಳ್ಳುತ್ತಾರೆ. ಹೀಗಾಗಿ, ವಿಜಯನಗರ ಸಾಮ್ರಾಜ್ಯದ ತೂಗುತೊಟ್ಟಿಲು ಎಂದು ಕರೆಯಲಾಗುತ್ತದೆ. ನಂತರ ವಿಜಯನಗರ ಸಾಮ್ರಾಜ್ಯದ ರಾಜಧಾನಿಯನ್ನು ಒಂದನೇ ಬುಕ್ಕರಾಯ ಕ್ರಿ.ಶ. 1356ರಲ್ಲಿ ಹಂಪಿಗೆ ಸ್ಥಳಾಂತರ ಮಾಡುತ್ತಾನೆ. ಆದರೂ ವಿಜಯನಗರ ಸಾಮ್ರಾಜ್ಯದುದ್ದಕ್ಕೂ ಆನೆಗೊಂದಿಗೆ ವಿಜಯನಗರ ದೊರೆಗಳು ಹಂಪಿಯಷ್ಟೇ ಆದ್ಯತೆ ನೀಡುತ್ತಿರುತ್ತಾರೆ. ವಿಜಯನಗರ ಕಾಲದಲ್ಲಿ ಹಂಪಿಯೇ ರಾಜಧಾನಿಯಾಗಿದ್ದರೂ ವಿಜಯನಗರದ ದೊರೆಗಳು ಮಾತ್ರ ಆನೆಗೊಂದಿ ಮತ್ತು ಹಂಪಿಯನ್ನು ಬೇರೆ ಬೇರೆ ಎಂದು ಬೇರ್ಪಡಿಸುವುದೇ ಇಲ್ಲ. ಒಗ್ಗೂಡಿಯೇ ಅವರು ಕಾಣುತ್ತಿರುತ್ತಾರೆ. ಕಾಲಾಂತರದಲ್ಲಿ ದೇಶ ಸ್ವತಂತ್ರವಾದಾಗ ಮತ್ತು ರಾಜ್ಯದಲ್ಲಿ ಜಿಲ್ಲಾವಾರು ರಚನೆಯಾದಾಗಲೇ ಆನೆಗೊಂದಿ ಮತ್ತು ಹಂಪಿಯನ್ನು ಬೇರ್ಪಡಿಸಿ ನೋಡಲಾಗುತ್ತಿದೆ.

ಹಂಪಿಗಿರುವ ಆದ್ಯತೆ ಆನೆಗೊಂದಿಗೆ ಇಲ್ಲ: ಈಗ ಹಂಪಿಗೆ ಇರುವ ಆದ್ಯತೆಯನ್ನು ಆನೆಗೊಂದಿಗೆ ನೀಡುವುದೇ ಇಲ್ಲ. ಹಂಪಿ ಮತ್ತು ಆನೆಗೊಂದಿ ಉತ್ಸವವನ್ನು ಪ್ರತ್ಯೇಕವಾಗಿ ಮಾಡುವುದು ಸರಿಯಲ್ಲ ಎಂದು ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಎರಡು ಉತ್ಸವಗಳನ್ನು ಜತೆಯಾಗಿಯೇ ಮಾಡಬೇಕು ಎಂದು ಹೇಳಿ, ಏಕಕಾಲಕ್ಕೆ ಮಾಡಿದ್ದರು. ಆಗಲೂ ಆನೆಗೊಂದಿಗೆ ಸಿಗಬೇಕಾದ ಪ್ರಾತಿನಿಧ್ಯ ಸಿಗಲಿಲ್ಲ. ಹೀಗಾಗಿ ನಂತರ ಆನೆಗೊಂದಿ ಉತ್ಸವವನ್ನು ಪ್ರತ್ಯೇಕವಾಗಿ ಮಾಡಲಾಗುತ್ತಿದೆ. ಆದರೆ, ಹಂಪಿಯಷ್ಟು ಆದ್ಯತೆಯನ್ನು ನಮ್ಮ ಆನೆಗೊಂದಿಗೆ ಕೊಡುವುದಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶ.

ನಾಲ್ಕಾರು ವರ್ಷಗಳಿಂದ ಆನೆಗೊಂದಿ ಉತ್ಸವವನ್ನು ಮಾಡಲು ಆಗಿರಲಿಲ್ಲ. ಈಗ ಮತ್ತೆ ಆನೆಗೊಂದಿ ಉತ್ಸವ ಆಚರಣೆಗೆ ಮುಂದಾಗಿರುವುದು ಸ್ಥಳೀಯರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಆದರೆ, ಕನಕಗಿರಿಯ ಉತ್ಸವಕ್ಕೆ ಸಿಕ್ಕ ಆದ್ಯತೆಯೂ ಆನೆಗೊಂದಿ ಉತ್ಸವಕ್ಕೆ ದೊರೆಯಲಿಲ್ಲ ಎನ್ನುವ ಕೊರಗು ಈ ಬಾರಿಯದ್ದಾಗಿದೆ.

ಕನ್ನಡ-ಸಂಸ್ಸೃತಿ ಇಲಾಖೆಯ ಸಚಿವರೇ ಕನಕಗಿರಿ ಕ್ಷೇತ್ರದ ಶಾಸಕರೂ ಆಗಿರುವುದರಿಂದ ಕನಕಗಿರಿ ಉತ್ಸವಕ್ಕೆ ವಿಶೇಷ ಆದ್ಯತೆ ನೀಡಿ ಆಚರಿಸಿದರು. ಅದೇ ಉತ್ಸಾಹವನ್ನು ಆನೆಗೊಂದಿ ಉತ್ಸವಕ್ಕೂ ನೀಡಬೇಕಿತ್ತು. ಆದರೆ ನೀಡಿಲ್ಲ. ಅನುದಾನವೂ ನಿರೀಕ್ಷೆಯಷ್ಟು ಬಂದಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೂ ಸ್ಥಳೀಯ ಶಾಸಕ ಜನಾರ್ದನ ರೆಡ್ಡಿ ವಿಶೇಷ ಆಸಕ್ತಿ ವಹಿಸಿ ಆನೆಗೊಂದಿ ಉತ್ಸವವನ್ನು ವಿಜೃಂಭಣೆಯಿಂದ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ರಮಣೀಯ ತಾಣ: ಆನೆಗೊಂದಿ ಅಥವಾ ಕಿಷ್ಕಿಂಧೆ ಬಿಸಿಲುನಾಡಿನ ರಮಣೀಯ ತಾಣ. ಇಲ್ಲಿ ತುಂಗಭದ್ರೆ ಹರಿಯುವುದರಿಂದ ನದಿಯ ಇಕ್ಕೆಲದಲ್ಲಿ ಮಲೆನಾಡಿನಂತೆ ಹಸಿರು ಕಂಗೊಳಿಸುತ್ತಲೇ ಇರುತ್ತದೆ. ಇನ್ನು ಅಚ್ಚರಿ ಎಂದರೆ ಇಲ್ಲಿ ಜಗತ್ತಿನ ನಾಲ್ಕು ಪ್ರಮುಖ ಸರೋವರಗಳಲ್ಲಿ ಒಂದಾದ ಪಂಪಾಸರೋವರ ಇದೆ. ಈ ಸರೋವರಕ್ಕೆ ಹೊಂದಿಕೊಂಡಿರುವ ಮಹಾಲಕ್ಷ್ಮಿ ಗುಡಿಯಲ್ಲಿ ತಾಪಮಾನ ವಿಪರೀತ ಕಡಿಮೆ ಇರುತ್ತದೆ. ಬಿಸಿಲುನಾಡಿಗೆ ಹೋಲಿಕೆ ಮಾಡಿದರೆ ಇಲ್ಲಿ ಉಷ್ಣಾಂಶ ತೀರಾ ಕಮ್ಮಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿಯೇ ಇದನ್ನು ಬಿಸಿಲುನಾಡಿನ ರಮಣೀಯ ತಾಣ ಎಂದು ಕರೆಯಲಾಗುತ್ತದೆ.