ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು/ದೇವದುರ್ಗ
ಕೇಂದ್ರ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಐಸಿಡಿಎಸ್ ಯೋಜನೆಗೆ ಬಜೆಟ್ ಕಡಿತ ಮಾಡಿರುವುದು ಹಾಗೂ ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಿಸದೆ ವಂಚನೆ ಮಾಡಿರುವುದನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.ರಾಯಚೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ದೇವದುರ್ಗ ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಿಂದ ಮಿವಿ ವಿಧಾನಸೌಧದವರೆಗೆ ಸಿಐಟಿಯು ತಾಲೂಕು ಸಮಿತಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮುಖಾಂತರ ಕೇಂದ್ರಕ್ಕೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರ ದೇಶದ ಹಸಿವಿನ ಸೂಚ್ಯಾಂಕ ಮೇಲೆತ್ತುವ ಪ್ರಯತ್ನಗಳು ಮಾಡಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಘೋಷಣೆ ಅಪಹ್ಯಾಸಕ್ಕೀಡು ಮಾಡಿದೆ.ಮಹತ್ವಾಕಾಂಕ್ಷಿ ಐಸಿಡಿಸಿ ಯೋಜನೆಗೆ 300 ಕೋಟಿಗಿಂತ ಹೆಚ್ಚು ಬಜೆಟ್‌ನಲ್ಲಿ ಕಡಿತಗೊಳಿಸಲಾಗಿದೆ. ದೇಶದ 8 ಕೋಟಿ ತಾಯಂದಿರ, ಮಕ್ಕಳ ಆರೋಗ್ಯ, ಆಹಾರ, ಶಿಕ್ಷಣದ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ. ಕೇಂದ್ರ ಸರ್ಕಾರದ ನೀತಿ ಖಂಡಿಸಿ ಇದೇ ಫೆ.16ರಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಸಿದರು.
ರಾಯಚೂರಿನ ಹೋರಾಟದಲ್ಲಿ ಸಂಘಟನೆ ಮುಖಂಡರಾದ ಎಚ್.ಪದ್ಮಾ, ವರಲಕ್ಷ್ಮೀ, ಇಂದಿರಾ, ಕೆ.ಜಿ.ಗೋಕಾರಮ್ಮ, ಗಂಗಮ್ಮ, ರಹಿಮತ್ ಬೇಂಗಮ್, ಆಸ್ಮಾ, ಶಿವಶರಣಮ್ಮ, ನಾಗರತ್ನ, ಸೂಲೋಚಾನಾ, ಮಹಾದೇವಿ, ಲಕ್ಷ್ಮೀ, ಗೌರಮ್ಮ, ಡಿ.ಎಸ್.ಶರಣಬಸವ, ಕೆ.ಜಿ.ವಿರೇಶ ಇನ್ನಿತರರು ಭಾಗವಹಿಸಿದ್ದರು.ದೇವದುರ್ಗದ ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಗಿರಿಯಪ್ಪ ಪೂಜಾರಿ, ನರಸಣ್ಣ ನಾಯಕ, ರಂಗಮ್ಮ ಅನ್ವರ, ರಮಾದೇವಿ, ಈಶಮ್ಮ ಊಟಿ, ಕಾಂತಮ್ಮ, ಅನ್ನಪೂರ್ಣ, ಶಾಂತಾ ಪ್ಯಾಟಿಮಠ ಹಾಗೂ ಇತರರು ಇದ್ದರು.