ಸಾರಾಂಶ
ಹುಣಸನಹಳ್ಳಿ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ನೂತನ ಅಂಗನವಾಡಿ ಕೇಂದ್ರ ಬಳಕೆಗೆ ಸಿದ್ದವಾಗಿದ್ದರೂ ಸಹ ಉದ್ಘಾಟಿಸಿಲ್ಲ. ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಅಂಗನವಾಡಿ ನೂತನ ಕಟ್ಟಡ ದುಸ್ತಿತಿಯಲ್ಲಿದೆ. ಹುಲಿಬೆಲೆ ಗ್ರಾಪಂನ ಹುಣಸನಹಳ್ಳಿ ಗ್ರಾಮ ದೊಡ್ಡ ಗ್ರಾಮವಾಗಿರುವುದರಿಂದ ಈಗಾಗಲೇ ಒಂದು ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ,
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸಮಗ್ರ ಮಕ್ಕಳ ಅಭಿವೃದ್ದಿ ಸೇವೆಗಳ ಯೋಜನೆಯಡಿ ಕಾರ್ಯನಿರ್ವಹಿಸಬೇಕಾದ ಅಂಗನವಾಡಿ ಕೇಂದ್ರ ನಿರ್ಮಾಣವಾಗಿ ಮೂರು ವರ್ಷಗಳಾದರೂ ಉದ್ಘಾಟನೆಯಾಗದ ಕಾರಣ, ಕಟ್ಟಡ ಬಳಕೆಯಾಗುತ್ತಿಲ್ಲ. ಸಾರ್ವಜನಿಕರ ಹಣ ಹೇಗೆ ಪೋಲಾಗುತ್ತದೆ ಎಂಬುದಕ್ಕೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡವೇ ಸಾಕ್ಷಿ.ಅಂಗನವಾಡಿ ಕೇಂದ್ರಗಳು ಪೂರಕ ಪೌಷ್ಟಿಕ ಆಹಾರ ಶಾಲಾಪೂರ್ವ ಶಿಕ್ಷಣ ಆರೋಗ್ಯ ತಪಾಸಣೆ ಲಸಿಕೆ ಪೌಷ್ಟಿಕಾಂಶ ಮತ್ತು ಆರೋಗ್ಯ ಶಿಕ್ಷಣ ಮುಂತಾದ ಸೇವೆಗಳನ್ನು ಒದಗಿಸುತ್ತವೆ, ಇಂತಹ ಕೇಂದ್ರಗಳನ್ನು ಪ್ರತಿ ಗ್ರಾಮದಲ್ಲಿಯೂ ಆರಂಭಿಸಲಾಗಿದೆ.ನೂತನ ಕಟ್ಟಡದ ದುಸ್ಥಿತಿ
ಅದರಂತೆ ಪಟ್ಟಣಕ್ಕೆ ಹೊಂದಿಕೊಂಡಿರುವ ಹುಣಸನಹಳ್ಳಿ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ನೂತನ ಅಂಗನವಾಡಿ ಕೇಂದ್ರ ಬಳಕೆಗೆ ಸಿದ್ದವಾಗಿದ್ದರೂ ಸಹ ಉದ್ಘಾಟಿಸಿಲ್ಲ. ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಅಂಗನವಾಡಿ ನೂತನ ಕಟ್ಟಡ ದುಸ್ತಿತಿಯಲ್ಲಿದೆ. ಹುಲಿಬೆಲೆ ಗ್ರಾಮ ಪಂಚಾಯ್ತಿಯ ಹುಣಸನಹಳ್ಳಿ ಗ್ರಾಮ ದೊಡ್ಡ ಗ್ರಾಮವಾಗಿರುವುದರಿಂದ ಈಗಾಗಲೇ ಒಂದು ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ,₹೧೨ ಲಕ್ಷ ವೆಚ್ಚದಲ್ಲಿ ನಿರ್ಮಾಣ
ಅಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಮತ್ತೊಂದು ಕೇಂದ್ರಕ್ಕೆ ಬೇಡಿಕೆ ಬಂದ ಹಿನ್ನೆಲೆ ೮ಲಕ್ಷ ರೂ ಉದ್ಯೋಗ ಖಾತರಿ ಯೋಜನೆಯಲ್ಲಿ ಹಾಗೂ ತಾಪಂ ಅನುದಾನದಲ್ಲಿ ೪ ಲಕ್ಷ ರೂಗಳ ಬಳಸಿಕೊಂಡು ಒಟ್ಟು ೧೨ ಲಕ್ಷ ವೆಚ್ಚದಲ್ಲಿ ನೆಹರು ನಗರದಲ್ಲಿ ರಾಜಕಾಲುವೆ ಮೇಲೆ ಮೂರು ವರ್ಷಗಳ ಹಿಂದೆ ಅಂಗನವಾಡಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ.ಈ ಕೇಂದ್ರಕ್ಕೆ ಕಾರ್ಯಕರ್ತೆ,ಸಹಾಯಕಿಯನ್ನೂ ಸಹ ನೇಮಿಸಲಾಗಿದೆ, ಆದರೆ ಕೇಂದ್ರ ಮಾತ್ರ ಉದ್ಘಾಟನೆಯಾಗಿಲ್ಲ. ಕಟ್ಟಡ ನಿರ್ಮಾಣದಲ್ಲಿಯೂ ಸಹ ಹಣ ದುರ್ಬಳಕೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೆಹರು ನಗರದಿಂದ ಗ್ರಾಮದ ಒಳಗಿರುವ ಕೇಂದ್ರಕ್ಕೆ ನಿತ್ಯ ಮಕ್ಕಳು ಹೋಗಿ ಬರಲು ಕಷ್ಟವಾಗುತ್ತಿದೆ, ನೂತನ ಕೇಂದ್ರವನ್ನು ಉದ್ಘಾಟಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಿ ಎಂದು ಪೋಷಕರು ಒತ್ತಾಯಿಸಿದ್ದಾರೆ.ಅಧಿಕಾರಿಗಳ ಅಸಡ್ಡೆ ಕಾರಣ
ಅಂಗನವಾಡಿಗಳು ಮಕ್ಕಳಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಒದಗಿಸುತ್ತದೆ. ಇದು ಮಕ್ಕಳ ಬೆಳವಣಿಗೆಗೆ ಹಾಗೂ ಅಭಿವೃದ್ದಿಗೆ ಪೂರಕವಾಗಿದೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಬಡ ಮಕ್ಕಳ ಬೆಳವಣಿಗೆಗೆ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಿದ್ದರೂ ಅಧಿಕಾರಿಗಳ ಅಸೆಡ್ಡೆಯಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಕೂಡಲೇ ಅಂಗನವಾಡಿ ಕೇಂದ್ರವನ್ನು ಮಕ್ಕಳ ಬಳಕೆಗೆ ಅವಕಾಶ ನೀಡಬೇಕು ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ದಲಿತ ರೈತ ಸೇನೆ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಎಚ್ಚರಿಸಿದ್ದಾರೆ.