ಅಂಗನವಾಡಿ ಕೇಂದ್ರದ ಚಾವಣಿ ಕುಸಿತ

| Published : Aug 08 2025, 01:06 AM IST

ಸಾರಾಂಶ

ಇಲ್ಲಿನ 6ನೇ ವಾರ್ಡಿನ 4ನೇ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಚಾವಣಿಯ ಸಿಮೆಂಟ್ ಕಾಂಕ್ರೀಟ್‌ನ ಪದರುಗಳು ಸೋಮವಾರ ಸಂಜೆ ಕಳಚಿ ಕಳಗೆ ಬಿದ್ದಿದೆ. ಶಾಲೆ ಬಿಟ್ಟ ಬಳಿಕ ಘಟನೆ ನಡೆದಿದ್ದರಿಂದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಅಂಗನವಾಡಿಗೆ ಮಕ್ಕಳ ಕಳುಹಿಸಲು ಪಾಲಕರ ಹಿಂದೇಟು, ಅಧಿಕಾರಿಗಳ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಇಲ್ಲಿನ 6ನೇ ವಾರ್ಡಿನ 4ನೇ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಚಾವಣಿಯ ಸಿಮೆಂಟ್ ಕಾಂಕ್ರೀಟ್‌ನ ಪದರುಗಳು ಸೋಮವಾರ ಸಂಜೆ ಕಳಚಿ ಕಳಗೆ ಬಿದ್ದಿದೆ. ಶಾಲೆ ಬಿಟ್ಟ ಬಳಿಕ ಘಟನೆ ನಡೆದಿದ್ದರಿಂದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಕಟ್ಟಡ ಕೆಲವು ವರ್ಷಗಳಿಂದ ಸಂಪೂರ್ಣ ಶಿಥಿಲಗೊಂಡಿದ್ದು, ಚಾವಣಿಯ ಕಾಂಕ್ರೀಟ್‌ನ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಹೊರ ಚಾಚಿಕೊಂಡಿವೆ. ಗೋಡೆಗಳು ಸಹ ಬಿರುಕು ಬಿಟ್ಟಿದೆ. ಚಾವಣಿಯ ಬೀಮ್‌ಗಳೂ ಬಿರುಕುಬಿಟ್ಟಿವೆ. ಅದರಿಂದ ಕಟ್ಟಡದ ಚಾವಣಿ ಶಿಥಿಲಗೊಂಡು, ಸಿಮೆಂಟ್ ಕಾಂಕ್ರೀಟ್‌ನ ಪದರುಗಳು ಕಳಚಿ ಬಿದ್ದಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2004ರಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಲಾಗಿತ್ತು. ಮಳೆಗಾಲದಲ್ಲಿ ಸೋರುತ್ತಿತ್ತು. ಆರ್‌ಸಿಸಿಯೂ ಸತ್ವ ಕಳೆದುಕೊಂಡು, ಕಟ್ಟಡ ಶಿಥಿಲಗೊಂಡಿದೆ. ಎರಡು ವರ್ಷಗಳಿಂದ ಕಟ್ಟಡದ ಸಿಮೆಂಟ್ ಕಾಂಕ್ರೀಟ್‌ನ ಪದರುಗಳು ಕಳಚಿ ಬೀಳುತ್ತಿವೆ.

ಈ ಕೇಂದ್ರದಲ್ಲಿ ಪ್ರಸ್ತುತ 12 ಗಂಡು ಹುಡುಗರು, 8 ಹೆಣ್ಣುಮಕ್ಕಳು ಸೇರಿ ಒಟ್ಟು 20 ಮಕ್ಕಳು ಇದ್ದಾರೆ. ಕಟ್ಟಡದ ದುಸ್ಥಿತಿ ಕಂಡ ಪಾಲಕರು, ತಮ್ಮ ಮಕ್ಕಳನ್ನು ಈ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಕೇಂದ್ರದಲ್ಲಿ ಮಕ್ಕಳ ಸಂಖ್ಯೆಯೂ ಇಳಿಕೆಯಾಗಿದೆ.

ಅಂಗನವಾಡಿ ಕೇಂದ್ರ ಶಿಥಿಲಗೊಂಡ ಕಟ್ಟಡದಲ್ಲೇ ನಡೆಯುತ್ತಿದ್ದರೂ ಮಕ್ಕಳ ಬಗ್ಗೆ ಕಾಳಜಿ ವಹಿಸದೇ ಮೌನವಹಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ವಾರ್ಡಿನ ಸಾರ್ವಜನಿಕರು, ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.