ಅಂಗನವಾಡಿ ಹಬ್ಬ ಮಕ್ಕಳಿಂದ ಮಕ್ಕಳಿಗಾಗಿ ಏರ್ಪಡಿಸಿರುವುದು ಹಾಗೂ ಈ ಕಾರ್ಯಕ್ರಮಕ್ಕೆ ಪಾಲಕರು ಉತ್ಸಾಹದಿಂದ ಬಂದು ಪಾಲ್ಗೊಂಡಿರುವುದು ತುಂಬಾ ಖುಷಿ ಕೊಡುತ್ತದೆ.

ಲಕ್ಷ್ಮೇಶ್ವರ: ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರಗಳು ಮೂಲ ಅಡಿಪಾಯ. ಇದುವೇ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬುನಾದಿ. ಅಂಗನವಾಡಿ ಹಬ್ಬ ಎನ್ನುವ ವಿನೂತನ ಕಾರ್ಯಕ್ರಮ ಪ್ರತಿ ಗ್ರಾಮದಲ್ಲಿ ನಡೆಯುವುದರಿಂದ ಪಾಲಕರಿಗೆ ಮತ್ತು ಸಮುದಾಯದ ಎಲ್ಲರಿಗೂ ಅಂಗನವಾಡಿಯ ಮಹತ್ವ ತಿಳಿಯಲಿದೆ ಎಂದು ಬಿಇಒ ನಾಣಕಿ ನಾಯಕ್ ಹೇಳಿದರು.

ಬುಧವಾರ ಸಮೀಪದ ಯಳವತ್ತಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ಜಾಗೃತಿ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ನಡೆದ ಅಂಗನವಾಡಿ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ವೇರಿ ಅವರು ಮಾತನಾಡಿ, ಅಂಗನವಾಡಿ ಹಬ್ಬ ಮಕ್ಕಳಿಂದ ಮಕ್ಕಳಿಗಾಗಿ ಏರ್ಪಡಿಸಿರುವುದು ಹಾಗೂ ಈ ಕಾರ್ಯಕ್ರಮಕ್ಕೆ ಪಾಲಕರು ಉತ್ಸಾಹದಿಂದ ಬಂದು ಪಾಲ್ಗೊಂಡಿರುವುದು ತುಂಬಾ ಖುಷಿ ಕೊಡುತ್ತದೆ. ಮಕ್ಕಳ ಸಮಗ್ರ ಬೆಳವಣಿಗೆ ಬಗ್ಗೆ ಚಿತ್ರ ಮತ್ತು ವಸ್ತುಗಳ ಮೂಲಕ ತಿಳಿಸಲಾಗಿದೆ. ಅಂಗನವಾಡಿಯ ಎಲ್ಲ ಶಿಕ್ಷಕಿಯರು ಎಲ್ಲ ಮಕ್ಕಳ ಪ್ರಗತಿಯ ಮಾಹಿತಿ ವಿವರಿಸುವ ರೀತಿ ನಿಜಕ್ಕೂ ಶ್ಲಾಘನೀಯ.

ಮಕ್ಕಳ ಜಾಗೃತಿ ಸಂಸ್ಥೆ ಕಾರ್ಯ ಪ್ರಾರಂಭವಾದಾಗಿನಿಂದ ನಮ್ಮ ಅಂಗನವಾಡಿ ಕೇಂದ್ರಗಳಲ್ಲಿ ತುಂಬಾ ಬದಲಾವಣೆ ಗಮನಿಸಿದ್ದೇವೆ, ಇದು ಸ್ವಾಗತಾರ್ಹ ಎಂದು ಹೇಳಿದರು.ಮಕ್ಕಳ ಬೆಳವಣಿಗೆಯ ಕ್ಷೇತ್ರಗಳಾದ ದೈಹಿಕ, ಬೌದ್ಧಿಕ, ಮಾತು ಮತ್ತು ಭಾಷೆ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗಳ ಮಾಹಿತಿಯನ್ನು ಅಂಗನವಾಡಿ ಶಿಕ್ಷಕಿಯರು ಸ್ಟಾಲ್‌ಗಳನ್ನು ಮಾಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಪೋಷಕರಿಗೆ ಸಮಗ್ರ ಮಾಹಿತಿ ನೀಡಿದರು. ಯಳವತ್ತಿ ವಲಯದ ೨೬ ಅಂಗನವಾಡಿ ಕೇಂದ್ರಗಳಿಂದ ೩೫೦ಕ್ಕೂ ಹೆಚ್ಚು ಪಾಲಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಈ ವೇಳೆ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ, ಯಳವತ್ತಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಬಾನು, ಮಾಗಡಿ ಗ್ರಾಪಂ ಅಧ್ಯಕ್ಷ ವೀರಯ್ಯ ಮಠಪತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ

ಮುಖ್ಯ ಶಿಕ್ಷಕ ಬಿ.ಎಸ್. ಮುಗಳಿ, ಶಿಕ್ಷಕ ಪ್ರಭು ಕಣವಿ, ಸೂರಣಗಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಗೀತಾ ಮುಳಗುಂದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ರಶ್ಮಿ ಪಾಟೀಲ ಇದ್ದರು.

ಮಕ್ಕಳ ಜಾಗೃತಿ ಸಂಸ್ಥೆಯ ಉಪನಿರ್ದೇಶಕಿ ಅಮೃತಾ ಮುರಳಿ, ಧೀರಜ ಹಾಗೂ ಮಕ್ಕಳ ಜಾಗೃತಿಯ ಸಿಬ್ಬಂದಿ ಹಾಜರಿದ್ದರು.