ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಮಟ್ಟದ ಸರ್ವಾಂಗೀಣ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳು ಪ್ರಮುಖ ಘಟ್ಟವಾಗಿವೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ತಾಲೂಕಿನ ಗೋತಗಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಹಾಗೂ ಎನ್ಆರ್‌ಎಲ್‌ಎಮ್ ಸಂಜೀವಿನಿಯ ಕೊಠಡಿ ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಪ್ರಥಮ ಪಾಠಶಾಲೆ ಅಂಗನವಾಡಿಗಳು ಆಗಿರುವುದರಿಂದ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸಹಕಾರಿಯಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಾರ್ವಜನಿಕರು ಆಕ್ರೋಶ:ಈ ಅಂಗನವಾಡಿ ಕೇಂದ್ರದ ನಿರ್ಮಾಣ ಸಮರ್ಪಕವಾಗಿಲ್ಲ. ನೀರಿನ ಸರಬರಾಜು ಇಲ್ಲ. ಶೌಚಾಲಯ, ನೆಲಹಾಸು ಸರಿಯಾಗಿಲ್ಲ. ಇನ್ನೂ ಕೆಲವು ಕಾಮಗಾರಿಗಳು ಬಾಕಿ ಇದ್ದು, ಕೂಡಲೆ ಅವುಗಳನ್ನು ಪೂರ್ಣಗೊಳಿಸಬೇಕು ಎಂದು ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದರು. ನಂತರ ಪಿಡಿಒ ಶ್ರೀಶೈಲ ಪೋಲೇಸಿಗೆ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.
ಗೋತಗಿ ಗ್ರಾಮದ ಅಗಸಿಕಟ್ಟೆ ಬಾಗಿಲು ಹಾಗೂ ಸಿಸಿ ರಸ್ತೆಯ ಕಾಮಗಾರಿಗೆ ಚಾಲನೆ ನೀಡಲಾಯಿತು.ಈ ಸಂದರ್ಭ ತಾಲೂಕು ಪಂಚಾಯಿತಿ ಇಒ ಪಂಪಾಪತಿ ಹಿರೇಮಠ, ಸಿಡಿಪಿಒ ಯಲ್ಲಮ್ಮ ಹಂಡಿ, ಗ್ರಾಪಂ ಅಧ್ಯಕ್ಷೆ ದುರಗವ್ವ ಹರಿಜನ, ಉಪಾಧ್ಯಕ್ಷ ಮುತ್ತಪ್ಪ ಬೂದಿಹಾಳ ಸೇರಿದಂತೆ ಗ್ರಾಪಂ ಸದಸ್ಯರು, ಅಂಗನವಾಡಿ ಸೂಪರ್‌ವೈಸರ್ ಅನ್ನಪೂರ್ಣಾ ಪಾಟೀಲ, ಕಾರ್ಯದರ್ಶಿ ಪಂಪಣ್ಣ ಗಂಗನಾಳ ಸೇರಿದಂತೆ ಗ್ರಾಪಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
24ಕೆಎಸಟಿ1: ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಹಾಗೂ ಎನ್ಆರ್‌ಎಲ್‌ಎಮ್ ಕೊಠಡಿಗಳನ್ನು ಉದ್ಘಾಟಿಸಲಾಯಿತು.