ಸಾರಾಂಶ
ದೇವಗಾನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ಶಿಥಿಲಗೊಂಡಿತ್ತು. ಈ ಬಗ್ಗೆ ಸಂಕ್ಷೀಪ್ತವಾಗಿ ಗುರುವಾರ ಕನ್ನಡಪ್ರಭದಲ್ಲಿ ವರದಿ ಪ್ರಕಟಿಸಲಾಗಿತ್ತು.ವರದಿಗೆ ಎಚ್ಚತ್ತೆ ಸಿಡಿಪಿಒ ಮುನಿರಾಜಪ್ಪ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿ, ಗ್ರಾಮದಲ್ಲಿರುವ ಮತ್ತೊಂದು ಬಳಕೆಯಾಗದ ಸರ್ಕಾರಿ ಶಾಲಾ ಕಟ್ಟಡಕ್ಕೆ ಅಂಗನವಾಡಿಯನ್ನು ಸ್ಥಳಾಂತರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಶಿಥಿಲಗೊಂಡ ಅಂಗನವಾಡಿ ಕಟ್ಟಡದಲ್ಲೆ ಮಕ್ಕಳಿಗೆ ಪಾಠ ಎಂಬ ಶೀರ್ಷಿಕೆಯಡಿಯಲ್ಲಿ ಗುರುವಾರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕರಟಗೊಂಡ ವರದಿಗೆ ಎಚ್ಚತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಕ್ಕಳ ಹಿತದೃಷ್ಟಿಯಿಂದ ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರವನ್ನು ಸರ್ಕಾರಿ ಶಾಲೆಗೆ ಸ್ಥಳಾಂತರಗೊಳಿಸಿದರು.ತಾಲೂಕಿನ ಚಿನ್ನಕೋಟೆ ಗ್ರಾಮ ಪಂಃಯ ದೇವಗಾನಹಳ್ಳಿ ಗ್ರಾಮದಲ್ಲಿ ಬಳಕೆಗೆ ಯೋಗ್ಯವಲ್ಲದ ಹಳೇ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸಲಾಗುತ್ತಿತ್ತು. ಅಲ್ಲದೆ ಈ ಕಟ್ಟಡ ಯಾವಾಗ ನೆಲಕ್ಕೆ ಬೀಳುವುದೋ ಎಂಬ ಆತಂಕದಲ್ಲೆ ಪುಟ್ಟ ಮಕ್ಕಳು ಕಾಲಕಳೆಯುವಂತಾಗಿತ್ತು.ಶಾಲಾ ಕಟ್ಟಡದ ಅವ್ಯವಸ್ಥೆ
ಮಳೆ ಬಂದರೆ ಸೋರುತ್ತಿತ್ತು, ಅಲ್ಲಲ್ಲಿ ಸಿಮೆಂಟ್ ಕಳಚಿ ಬೀಳುತ್ತಿತ್ತು,ಅವ್ಯವಸ್ಥೆಯಲ್ಲಿರುವ ಈ ಕಟ್ಟಡವನ್ನು ಬೇರೆಡೆ ಸ್ಥಳಾಂತರಿಸುವಂತೆ ಹಲವು ಬಾರಿ ಕಾರ್ಯಕರ್ತೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಉಪಯೋಗವಾಗಿರಲಿಲ್ಲ.ಇದರಿಂದ ಕೇಂದ್ರಕ್ಕೆ ಗ್ರಾಮಸ್ಥರು ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದರು. ಅಂಗನವಾಡಿ ಕಾರ್ಯಕರ್ತೆ ಕಟ್ಟಡದಲ್ಲಿ ಮಕ್ಕಳನ್ನು ಕೂರಿಸಲು ಹೆದರಿ ಪುಟ್ಟ ಮಕ್ಕಳನ್ನು ಹೊರಗೆ ಕೂರಿಸಿ ಪಾಠ ಮಾಡುತ್ತಿದ್ದರು.ಈ ಬಗ್ಗೆ ಸಂಕ್ಷೀಪ್ತವಾಗಿ ಗುರುವಾರ ಕನ್ನಡಪ್ರಭದಲ್ಲಿ ವರದಿ ಪ್ರಕಟಿಸಲಾಗಿತ್ತು.ವರದಿಗೆ ಎಚ್ಚತ್ತೆ ಸಿಡಿಪಿಒ ಮುನಿರಾಜಪ್ಪ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿ ಬಳಕೆಗೆ ಯೋಗ್ಯವಾಗಿಲ್ಲ ಎಂದು ತಿಳಿದು ಗ್ರಾಮದಲ್ಲಿರುವ ಮತ್ತೊಂದು ಬಳಕೆಯಾಗದ ಸರ್ಕಾರಿ ಶಾಲಾ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಿದರು.ಹೊಸ ಕಟ್ಟಡ ನಿರ್ಮಾಣ
ದೇವಗಾನಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ಬಳಕೆಗೆ ಯೋಗ್ಯವಾಗಿಲ್ಲದ ಕಾರಣ ಹೊಸ ಕಟ್ಟಡ ನಿರ್ಮಾಣವಾಗುವ ತನಕ ಮಕ್ಕಳ ದೃಷ್ಟಿಯಿಂದ ಸರ್ಕಾರಿ ಶಾಲೆಗೆ ಸ್ಥಾಳಾಂತರಿಸಲಾಗಿದೆ, ಶಾಸಕರ ಗಮನಕ್ಕೆ ತಂದು ಹೊಸ ಕಟ್ಟಡ ನಿರ್ಮಾಣಕ್ಕೆ ಮನವಿ ಮಾಡಲಾಗುವುದು ಎಂದು ಸಿಡಿಪಿಒ ಮುನಿರಾಜಪ್ಪ ತಿಳಿಸಿದರು.ತಾಲೂಕಿನಲ್ಲಿ ಯಾವ ಗ್ರಾಮದಲ್ಲಿ ಇಂತಹ ಅವ್ಯವಸ್ಥೆಯಿಂದಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.