ಎರಡು-ಮೂರು ತಿಂಗಳಿಂದ ಬಾಕಿ ಇರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಸ್‌ಐಆರ್ ಸಮೀಕ್ಷೆ, ಜಾತಿ ಪ್ರಮಾಣ ಪತ್ರಗಳನ್ನು ಮನೆ-ಮನೆಗೆ ವಿತರಿಸುವುದು, ಗೃಹಲಕ್ಷ್ಮೀ ಸಮೀಕ್ಷೆ ಸೇರಿದಂತೆ ಅಂಗನವಾಡಿ ಕೆಲಸಕ್ಕೆ ಸಂಬಂಧಿಸದ ಹೆಚ್ಚುವರಿ ಕರ್ತವ್ಯಗಳಿಂದ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಅಲ್ಲದೆ, ೧೧ನೇ ವೇತನ ಆಯೋಗದ ಶಿಫಾರಸುಗಳು, ಗ್ರಾಚ್ಯುಟಿ ಸೇರಿದಂತೆ ಬಾಕಿ ಇರುವ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಪ್ರಭಾರ ಭತ್ಯೆ ಹಾಗೂ ತುಟ್ಟಿ ಭತ್ಯೆಯನ್ನು ಹೆಚ್ಚಿಸಬೇಕು. ಮಹಿಳಾ ಕಾರ್ಯಕರ್ತೆಯರಿಗೆ ಋತುಚಕ್ರದ ರಜೆ ಹಾಗೂ ಸಂಬಳ ಸಹಿತ ವೈದ್ಯಕೀಯ ರಜೆ ನೀಡಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಬಾಕಿ ಇರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ಹಲವು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟದ (ಎಐಟಿಯುಸಿ) ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಇದೇ ವೇಳೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟದ (ಎಐಟಿಯುಸಿ) ಉಪಾಧ್ಯಕ್ಷೆ ಸಿ.ಆರ್. ನಾಗರತ್ನ ಮಾತನಾಡಿ, ಹೊಸ ಸರ್ಕಾರ ರಚನೆಯಾಗಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಎರಡು-ಮೂರು ತಿಂಗಳಿಂದ ಬಾಕಿ ಇರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಸ್‌ಐಆರ್ ಸಮೀಕ್ಷೆ, ಜಾತಿ ಪ್ರಮಾಣ ಪತ್ರಗಳನ್ನು ಮನೆ-ಮನೆಗೆ ವಿತರಿಸುವುದು, ಗೃಹಲಕ್ಷ್ಮೀ ಸಮೀಕ್ಷೆ ಸೇರಿದಂತೆ ಅಂಗನವಾಡಿ ಕೆಲಸಕ್ಕೆ ಸಂಬಂಧಿಸದ ಹೆಚ್ಚುವರಿ ಕರ್ತವ್ಯಗಳಿಂದ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಅಲ್ಲದೆ, ೧೧ನೇ ವೇತನ ಆಯೋಗದ ಶಿಫಾರಸುಗಳು, ಗ್ರಾಚ್ಯುಟಿ ಸೇರಿದಂತೆ ಬಾಕಿ ಇರುವ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಪ್ರಭಾರ ಭತ್ಯೆ ಹಾಗೂ ತುಟ್ಟಿ ಭತ್ಯೆಯನ್ನು ಹೆಚ್ಚಿಸಬೇಕು. ಮಹಿಳಾ ಕಾರ್ಯಕರ್ತೆಯರಿಗೆ ಋತುಚಕ್ರದ ರಜೆ ಹಾಗೂ ಸಂಬಳ ಸಹಿತ ವೈದ್ಯಕೀಯ ರಜೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಿ ನಾಲ್ಕು ವರ್ಷದೊಳಗಿನ ಮಕ್ಕಳನ್ನು ದಾಖಲಿಸಿಕೊಳ್ಳುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಈ ಸಮಸ್ಯೆಗೆ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು. ಇದರ ಜೊತೆಗೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಎದುರಿಸುತ್ತಿರುವ ಸ್ಥಳೀಯ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನೂ ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟ (ಎಐಟಿಯುಸಿ) ಹಾಸನ ಜಿಲ್ಲಾ ಸಮಿತಿ ಅಧ್ಯಕ್ಷೆ ಎಸ್.ಎನ್. ಜಯಲಕ್ಷ್ಮಿ, ಕಾರ್ಯಾಧ್ಯಕ್ಷೆ ಲೀನಾ ಡಯಾಸ್, ಜಿಲ್ಲಾ ಖಜಾಂಚಿ ಪಿ.ಡಿ. ನಾಗರತ್ನ, ಪ್ರಧಾನ ಕಾರ್ಯದರ್ಶಿ ಕೆ. ವೇದಾವತಿ, ಅಂಬಿಕ, ಜಯಲಕ್ಷ್ಮೀ ಇತರರು ಉಪಸ್ಥಿತರಿದ್ದರು.