ವೇತನ ಕಡಿಮೆಯಿದ್ದರೂ ಶ್ರದ್ದೆಯಿಂದ ಕಾಯಕ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಹಸೀಲ್ದಾರ್‌ ತಿಳಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ವೇತನ ಕಡಿಮೆ ಇದ್ದರೂ ಶ್ರದ್ಧೆಯಿಂದ ಕಾಯಕ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಾಲೂಕು ತಹಸೀಲ್ದಾರ್ ಕೃಷ್ಣಮೂರ್ತಿ ಶ್ಲಾಘಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಐಸಿಡಿಎಸ್ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಚಾಚೂ ತಪ್ಪದೆ ಮನೆಮನೆಗೆ ಪ್ರಾಮಾಣಿಕವಾಗಿ ತಲುಪಿಸುವ ಮಹತ್ತರ ಜವಾಬ್ಧಾರಿಯೊಂದಿಗೆ ಮಕ್ಕಳ ಪೋಷಣೆಯಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಎಂದಿಗೂ ಸಂಭಾವನೆ ವಿಚಾರದಲ್ಲಿ ಕೆಲಸವನ್ನು ಬಿಟ್ಟಿಲ್ಲ. ಇಂದಿಗೂ ತಮಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಇದು ಇತರರಿಗೆ ಮಾದರಿಯಾಗಬೇಕು ಎಂದರು. 2006ರಲ್ಲಿ ಮತದಾನ ಪಟ್ಟಿಯ ಪರಿಷ್ಕರಣೆ ಸಂದರ್ಭ ಚುನಾವಣಾ ಆಯೋಗದವರು ಸೂಚಿಸಿದ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರೇ ಶೇ. 75ರಷ್ಟು ಪೂರ್ಣಗೊಳಿಸಿದ್ದಾರೆ ಎಂದರು. ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕೊನೆಯ ಹಂತದ ಆರ್ಥಿಕ, ಸಾಮಾಜಿಕ ಸಮೀಕ್ಷೆಯಲ್ಲಿಯೂ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಅಂಗನವಾಡಿ ಮಕ್ಕಳ ಆರೈಕೆಯೊಂದಿಗೆ ಅನ್ಯ ಇಲಾಖೆಯ ಕೆಲಸ ಕಾರ್ಯಗಳನ್ನು ಯಾವುದೇ ಲೋಪದೋಷವಿಲ್ಲದೆ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಜೀವನ ಭದ್ರತೆಗೆ ಮೇಲಧಿಕಾರಿಗಳು ಮತ್ತು ಇಲಾಖೆಯ ಮೂಲಕ ಮನವಿ ಮಾಡಲಾಗುವುದು ಎಂದರು.ವೇದಿಕೆಯಲ್ಲಿ ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಕಲ್ಯಾಣಾಧಿಕಾರಿ ವಿಮಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುಧೋಳ್, ಅಂಗನವಾಡಿಯ ಹಿರಿಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಚಂದ್ರಿಕಾ ಕಾರ್ಯಕ್ರಮ ನಿರ್ವಹಿಸಿದರು.ಅಂಗನಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಕಚೇರಿ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.