ಅಂಗನವಾಡಿ ಕಾರ್ಯಕರ್ತೆಯರದು ದೇಶ ಕಟ್ಟುವ ಕೆಲಸ: ನ್ಯಾ.ಸಂತೋಷ್

| Published : Sep 20 2024, 01:38 AM IST

ಸಾರಾಂಶ

ಶಿವಮೊಗ್ಗದ ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಗುರುವಾರ ಅನೀಮಿಯ ಮುಕ್ತ ಭಾರತ ಕಾರ್ಯಕ್ರಮ, ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಕ್ಕಳಿಗೆ ಶಿಕ್ಷಣ, ಪೋಷಣೆ ನೀಡುವ ಅಂಗನವಾಡಿ ಕಾರ್ಯಕರ್ತೆಯರು ಒಂದು ರೀತಿಯಲ್ಲಿ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಅಭಿಪ್ರಾಯಪಟ್ಟರು.

ಇಲ್ಲಿನ ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ದಿ.ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಸಹಯೋಗದಲ್ಲಿ ಪೋಷಣ್ ಮಾಸಾಚರಣೆ ಆಯೋಜಿಸಿದ್ದ ಅನೀಮಿಯ ಮುಕ್ತ ಭಾರತ ಕಾರ್ಯಕ್ರಮ ಹಾಗೂ ಪೌಷ್ಟಿಕ ಆಹಾರ ಮತ್ತು ಗ್ರೋಥ್ ಮಾನಿಟರಿಂಗ್ ಕುರಿತು ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಕಲಿಸುವ, ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸೂಪರ್‌ವೈಸರ್‌ ಗಳು ಒಂದು ರೀತಿಯಲ್ಲಿ ತಳಮಟ್ಟದಲ್ಲಿ ದೇಶ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದು, ತಮಗೆ ನೀಡಿದ ಯಾವುದೇ ಕೆಲಸವನ್ನು ಸಮರ್ಪಕವಾಗಿ ಯೋಜನೆ ರೂಪಿಸಿ ಕೊಂಡು ಮಾಡಬೇಕು ಎಂದರು.

ಜಿಲ್ಲೆಯಲ್ಲಿ 2563 ಅಂಗನವಾಡಿಗಳು ಇದ್ದು ಹಲವಾರು ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಅವುಗಳ ಅಪ್‌ಡೇಟ್ ಸಹ ಸಮರ್ಪಕವಾಗಿ ಆಗಬೇಕು. ‘ಸುಪೋಷಿತ್ ಕಿಶೋರಿ ಮತ್ತು ಸಶಕ್ತ ನಾರಿ’ ನಿರ್ಮಾಣ ಈ ಎಲ್ಲ ಕಾರ್ಯಕ್ರಮಗಳ ಉದ್ದೇಶವಾಗಿದ್ದು, ಜಿಲ್ಲೆಯಲ್ಲಿ ಯಶಸ್ವಿಯಾಗಿ ಇಂತಹ ತರಬೇತಿಗಳು ನಡೆಯಬೇಕು. ಭವಿಷ್ಯದಲ್ಲಿ ಅಪೌಷ್ಟಿಕತೆಯಿಂದ ಯಾವುದೇ ಜನತೆ ಬಳಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲ ಶ್ರಮಿಸಬೇಕು. ಆದ್ದರಿಂದ ಅವರು ಚಿಕ್ಕವರಾಗಿದ್ದಾಗಿ ನಿಂದ ಉತ್ತಮ ಅಡಿಪಾಯ ಅವರಲ್ಲಿ ಹಾಕಬೇಕು. 3 ರಿಂದ 6 ವರ್ಷದ ಮಕ್ಕಳನ್ನು ಸದೃಢವಾಗಿ ತಯಾರು ಮಾಡಬೇಕು. ಮಕ್ಕಳಲ್ಲಿ ಎಸ್‌ಕ್ಯು3ಆರ್ ಸೂತ್ರವನ್ನು ಅಳವಡಿಸಬೇಕು. ಎಸ್ ಎಂದರೆ ಸ್ಕ್ರಿಸಿಂಗ್‌ ಮಕ್ಕಳು ಎಲ್ಲವನ್ನೂ ಪರಿಶೀಲಿಸುವ, ಕ್ಯು ಎಂದರೆ ಕ್ವೆಷನಿಂಗ್ ಪ್ರಶ್ನಿಸುವ ಮತ್ತು 3 ಆರ್ ಎಂದರೆ ರೀಡ್, ರಿಸೈಟ್, ರಿವೈಸ್ ಮಾಡುವುದನ್ನು ಕಲಿಸಬೇಕು. ಇದರಿಂದ ಅವರಲ್ಲಿ ಓದುವ, ಓದಿದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

ಮಕ್ಕಳಲ್ಲಿ ನಾವು ಮುಖ್ಯವಾಗಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಎದ್ದು ನಿಂತು ಪ್ರಶ್ನಿಸುವುದನ್ನು ಉತ್ತೇಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಬೇಕು. ಧನಾತ್ಮಕ ಸಲಹೆಗಳನ್ನು ನೀಡಬೇಕು ಎಂದರು.

ಜಿಪಂ ಸಿಇಒ ಎನ್‌.ಹೇಮಂತ್ ಮಾತನಾಡಿ, ಇಂದು ಇಲ್ಲಿ ತರಬೇತಿ ಪಡೆದ ತರಬೇತುದಾರರು ತಮ್ಮ ಅಧೀನದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಧನಾತ್ಮಕ ಸಲಹೆಗಳನ್ನು ನೀಡಬೇಕು. ಗುಂಪಿನಲ್ಲಿರುವ ಮಕ್ಕಳಿಗೆ ಸ್ಪಂದಿಸುವ ಬಗೆಯನ್ನು ಅರಿತು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬಿತ್ತಬೇಕು. ಮುಂದಿನ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಲಾಗುವುದು. ತಾವು ಸಹ ವಾರದಲ್ಲಿ ಮೂರು ದಿನ ಕ್ಷೇತ್ರ ಭೇಟಿ ನೀಡುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಕೃಷ್ಣಪ್ಪ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಸ್.ನಟರಾಜ್, ಯುನಿಸೆಫ್ ಕನ್ಸಲ್ಟೆಂಟ್‌ಗಳಾದ ಮನೋಜ್ ಸೆಬಾಸ್ಟಿನ್, ಕೆ.ವಿಶ್ವನಾಥ್ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಓ.ಮಲ್ಲಪ್ಪ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಅಧಿಕಾರಿ ಶಶಿರೇಖಾ, ಸಿಡಿಪಿಒ, ಅಂಗನವಾಡಿ ಸೂಪರ್‌ವೈಸರ್‌, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.