ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ ಅಂತ್ಯ

| Published : Dec 19 2024, 12:31 AM IST

ಸಾರಾಂಶ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕೋಲಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿಗೆ ಮನವಿ ಸಲ್ಲಿಸಿ ಧರಣಿಯನ್ನು ಬುಧವಾರ ಮುಕ್ತಾಯಗೊಳಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿಗೆ ಮನವಿ ಸಲ್ಲಿಸಿ ಧರಣಿಯನ್ನು ಬುಧವಾರ ಮುಕ್ತಾಯಗೊಳಿಸಿದರು.ಸಿಐಟಿಯು ಜಿಲ್ಲಾ ಅಧ್ಯಕ್ಷ ಅಂಜಲಮ್ಮ ಮಾತನಾಡಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ ೫೦ ವರ್ಷ ಸಮೀಪಿಸುತ್ತಿದೆ. ಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನ ಬದ್ಧ ಕರ್ತವ್ಯಗಳಿವೆ. ೨೦೧೩ರ ಆಹಾರ ಭದ್ರತಾ ಕಾಯ್ದೆ, ೨೦೦೯ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ಕಾರ್ಯಕರ್ತೆಯರನ್ನು ೩ ಮತ್ತು ೪ ಗ್ರೇಡ್‌ನ ನೌಕರರನ್ನಾಗಿ ಪರಿಗಣಿಸಲು ಜಂಟಿ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕೆಂದು ನಿಯಮ ಇದ್ದರೂ ಜಾರಿ ಮಾಡಿಲ್ಲ ಎಂದು ಆರೋಪಿಸಿದರು.ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಲ್ಪನಾ ಮಾತನಾಡಿ, ಕೇಂದ್ರ ಸರ್ಕಾರವು ತನ್ನ ಮೂಲ ಜವಾಬ್ದಾರಿಯಿಂದ ನುಣಿಚಿಕೊಂಡು ಬಜೆಟ್ ಅನುದಾನಗಳನ್ನು ನಿರಂತರವಾಗಿ ಕಡತ ಮಾಡುತ್ತಿದೆ. ಅಂಗನವಾಡಿ ಮಕ್ಕಳಿಗೆ ಕೊಡುವ ಪೌಷ್ಠಿಕ ಆಹಾರದ ಘಟಕ ವೆಚ್ಚ ೨೦೧೮ರಿಂದ ಹೆಚ್ಚಳ ಮಾಡಿಲ್ಲ. ಅದರಿಂದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕೊಡುವುದರಲ್ಲಿ ವೈಫಲ್ಯತೆ ಎದ್ದು ಕಾಣುತ್ತಿದೆ. ಅಂಗನವಾಡಿ ನೌಕರರ ವೇತನವನ್ನು ಕೂಡಾ ಹೆಚ್ಚಳ ಮಾಡದೇ ಹೊಸ ಆಕರ್ಷಕ ಘೋಷಣೆಗಳಿಗೆ ಮಾತ್ರವೇ ಸೀಮಿತವಾಗುತ್ತಿದೆ ಎಂದರು.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲಹೀನಗೊಳಿಸಲು ಶಿಕ್ಷಣ ಇಲಾಖೆ ೪ ವರ್ಷದ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸಲು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ತಡೆ ಹಾಕಿ ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾರ್ಥಮಿಕ ಶಿಕ್ಷಣ ಕೇಂದ್ರಗಳಾಗಿ ಪರಿವರ್ತಿಸಲು ತೀರ್ಮಾನಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ತನ್ನ ಪ್ರಚಾರದಲ್ಲಿ ಹೇಳಿದಂತೆ ೩೫೦೦ ರು., ೧೭೫೦ ರು. ವೇತನ ಹೆಚ್ಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರುಗಾಂಧಿನಗರ ನಾರಾಯಣಸ್ವಾಮಿ, ವಿ.ಗೀತಾ, ಸಂಘಟನೆಯ ಜಿಲ್ಲಾ ಖಜಾಂಚಿ ಸುಜಾತ, ತಾಲೂಕು ಕಾರ್ಯದರ್ಶಿ ಗಾಂಧಿನಗರ ಮಂಜುಳಾ, ಖಜಾಂಚಿ ಲಕ್ಷ್ಮೀದೇವಿ, ಮುಖಂಡರಾದ ಮಮತ, ಪುಷ್ಪಾವತಿ, ವಸಂತ, ಇಂದ್ರಾಣಿ, ಶಶಿಕಲಾ, ಅಮುದಾ, ರತ್ನಮ್ಮ ಇದ್ದರು.