ರಾಜ್ಯ ಸರ್ಕಾರದ ವಿರುದ್ಧ ತೀರ್ಥಹಳ್ಳಿಯಲ್ಲಿ ಬಿಸಿಯೂಟ ತಯಾರಕರ ಆಕ್ರೋಶ

| Published : Jan 14 2025, 01:02 AM IST

ರಾಜ್ಯ ಸರ್ಕಾರದ ವಿರುದ್ಧ ತೀರ್ಥಹಳ್ಳಿಯಲ್ಲಿ ಬಿಸಿಯೂಟ ತಯಾರಕರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಮುಂಗಡಪತ್ರದಲ್ಲಿ ಸಬೂಬು ಹೇಳದೆ ಎಲ್ಲ ಬೇಡಿಕೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಷನ್ ವತಿಯಿಂದ ಸೋಮವಾರ ತೀರ್ಥಹಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ವೇತನ 6 ಸಾವಿರ ರು. ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ । ಆಡಳಿತಾರೂಢ ಕಾಂಗ್ರೆಸ್‌ಗೆ ಮನವಿ । ಮುಖ್ಯ ಬೀದಿಗಳಲ್ಲಿ ಮೆರವಣಿಗೆ

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರ ವೇತನವನ್ನು 6 ಸಾವಿರ ರು.ಗಳಿಗೆ ಹೆಚ್ಚಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ನಮ್ಮನ್ನು ವಂಚಿಸಿದೆ. ಮುಂಬರುವ ರಾಜ್ಯದ ಮುಂಗಡಪತ್ರದಲ್ಲಿ ಸಬೂಬು ಹೇಳದೆ ಎಲ್ಲ ಬೇಡಿಕೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಷನ್ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆ ಕೂಗುತ್ತ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಎದುರು ಸಭೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೇ ನಮ್ಮನ್ನು ಬೀದಿಗಿಳಿಯುವಂತೆ ಮಾಡಿವೆ. ರಾಜ್ಯ ಸರ್ಕಾರ ನೀಡಿರುವ ಭರವಸೆಯಂತೆ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಡಶಾಲೆಗಳಲ್ಲಿ ಉಪಾಹಾರ ಯೋಜನೆ ಅಡಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರ ಬೇಡಿಕೆಗಳನ್ನು 2024-25 ನೇ ಸಾಲಿನ ಮುಂಗಡಪತ್ರದಲ್ಲಿ ಸೇರಿಸುವ ಮೂಲಕ ಈಡೇರಿಸಬೇಕು ಎಂದು ಆಗ್ರಹಿಸಿದರು.

ಕಳೆದ 23 ವರ್ಷಗಳಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಡಶಾಲೆಗಳಲ್ಲಿ ಅತ್ಯಂತ ಕನಿಷ್ಠ ವೇತನದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು ವೇತನವನ್ನು ಮಾಸಿಕ 6 ಸಾವಿರ ರು.ಗಳಿಗೆ ಏರಿಸಬೇಕು. ನಿವೃತ್ತರಾದ ನಂತರದ ಇಡುಗಂಟನ್ನು 2 ಲಕ್ಷ ರು.ಗಳಿಗೆ ಹೆಚ್ಚಿಸಬೇಕು. ಅನಾರೋಗ್ಯ ಮತ್ತು ಇತರೆ ಕಾರಣಗಳಿಂದ ಬಿಡುಗಡೆಗೊಳ್ಳುವ ಸಿಬ್ಬಂದಿಗೂ ಇದು ಅನ್ವಯವಾಗಬೇಕು ಎಂದೂ ಒತ್ತಾಯಿಸಿದರು.

ಆಸ್ಪತ್ರೆ ಚಿಕಿತ್ಸೆ ವೆಚ್ಚವನ್ನು 50 ಸಾವಿರ ರು.ಗಳಿಗೂ, ಮರಣ ಪರಿಹಾರವಾಗಿ 10 ಲಕ್ಷ ರೂಗಳನ್ನು ನಿಗದಿಗೊಳಿಸಬೇಕು. 1972 ರ ಕಾಯ್ದೆಯಂತೆ ಉಪಧನ ಜಾರಿ, ಮೊಟ್ಟೆ ಸುಲಿಯುವುದಕ್ಕೆ ಪ್ರತಿ ಮೊಟ್ಟೆಗೆ 60 ಪೈಸೆಗೆ ಏರಿಸಬೇಕು. ಪ್ರತಿ ತಿಂಗಳ 5 ತಾರೀಖಿಗೆ ವೇತನ ಬಿಡುಗಡೆ ಮಾಡಬೇಕು. ಏಕ ಪಕ್ಷೀಯವಾಗಿ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬಾರದು. ಬರಗಾಲ ಕಾರ್ಯಕ್ರಮದ ಎರಡು ತಿಂಗಳ ವೇತನವನ್ನೂ ಕೇಂದ್ರ ಸರ್ಕಾರದ ಬಗ್ಗೆ ಸಬೂಬು ಹೇಳದೇ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಶನ್ ಅಧ್ಯಕ್ಷೆ ಅಕ್ಕಮ್ಮ, ಪದಾಧಿಕಾರಿಗಳಾದ ಪರಮೇಶ್, ಕಲಾವತಿ, ವಿನಂತಿ, ಶೋಭಾ, ಪದ್ಮಾವತಿ ಜಯಶ್ರೀ, ಮಂಜುಳಾ, ರೂಪಾ ಮುಂತಾದವರು ಇದ್ದರು.