ಬೆಳೆ ಸಮೀಕ್ಷಾ ವರದಿ ಲೋಪಕ್ಕೆ ಅನ್ನದಾತರ ಆಕ್ರೋಶ

| Published : Jul 25 2024, 01:23 AM IST

ಸಾರಾಂಶ

ಬೆಳೆ ಸಮೀಕ್ಷಾ ವರದಿ ತಯಾರಿಸುವಲ್ಲಿ ನೀರಾವರಿ ಪ್ರದೇಶ ಆಯ್ಕೆ ಮಾಡಿ ವಿಮೆ ಬಾರದಂತೆ ಕರ್ತವ್ಯ ಲೋಪ ಎಸಗಿರುವ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ । ಲೋಪ ಎಸಗಿದ ಪಿಡಿಒಗಳ ಮೇಲೆ ಕ್ರಮಕ್ಕೆ ಆಗ್ರಹಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆಳೆ ಸಮೀಕ್ಷಾ ವರದಿ ತಯಾರಿಸುವಲ್ಲಿ ನೀರಾವರಿ ಪ್ರದೇಶ ಆಯ್ಕೆ ಮಾಡಿ ವಿಮೆ ಬಾರದಂತೆ ಕರ್ತವ್ಯ ಲೋಪ ಎಸಗಿರುವ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಗ್ರಾಪಂಯಲ್ಲಿ ಬರುವ ಅಭಿವೃದ್ಧಿ ಅಧಿಕಾರಿಗಳು ನೀರಾವರಿ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ತಪ್ಪು ವರದಿ ಕೊಟ್ಟಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ಹಾನಿ ಎಂಬ ವರದಿ ಕೊಟ್ಟಿದ್ದರೆ ವಿಮೆ ಬರುತ್ತಿತ್ತು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳೊಂದಿಗೆ ವಿಮಾ ಕಂಪನಿ ಅಧಿಕಾರಿಗಳು ಕೈ ಜೋಡಿಸಿದ್ದು, ಬೆಳೆ ನಷ್ಟ ಪ್ರಮಾಣ ಪರಿಗಣನೆ ಆಗದೆ ರೈತರು ವಿಮಾ ಮೊತ್ತ ಪಡೆಯಲು ಸಾಧ್ಯವಾಗಿಲ್ಲ. ಈ ಬಗ್ಗೆ ಹಲವು ಬಾರಿ ಕೃಷಿ ಇಲಾಖೆಯ ಗಮನಕ್ಕೆ ತಂದರೂ ಪರಿಸ್ಥಿತಿಯ ಗಂಭೀರವಾಗಿ ಸ್ವೀಕರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ದವೀರಪ್ಪ ಅವರು, ದೊಡ್ಡ ಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆ ವಿಮೆ ಬಗ್ಗೆ ಜಿಲ್ಲಾಧಿಕಾರಿಗಳು ಪುನರ್ ಪರಿಶೀಲನೆ ನಡೆಸಿ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿದರು. ಬೆಲೆ ಭದ್ರತೆ ಕಾಯ್ದೆ ಜಾರಿಗೊಳಿಸುವವರೆಗೂ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಯಂ ವೆಚ್ಚ ಯೋಜನೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಹಾಗೂ ಆರ್‌.ಆರ್.ನಂಬರ್‌ಗಳಿಗೆ ಆಧಾರ್ ನಂಬರ್ ಜೋಡಣೆ ಮಾಡುವಂತೆ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.

ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಮಾಡಿದವರಿಗೆ 3 ವರ್ಷ ಜೈಲು, 50 ಸಾವಿರ ದಂಡ ವಿಧಿಸುವುದಾಗಿ ಶಾಸಕಾಂಗ ಸಭೆಯಲ್ಲಿ ಸಚಿವ ಸಂಪುಟ ತೀರ್ಮಾನಿಸಿದ್ದು, ಸದ್ಯದಲ್ಲಿಯೇ ಕಾಯ್ದೆ ಜಾರಿಯಾಗಲಿದೆ. ಆರೋಗ್ಯ ಸಿಬ್ಬಂದಿಗಳು ಎಷ್ಟು ಪರಿಣಿತರು ಎನ್ನುವುದನ್ನು ಪ್ರತಿ ವರ್ಷವೂ ತಪಾಸಣೆ ನಡೆಸಬೇಕು. ನುರಿತ ವೈದ್ಯರಿಲ್ಲದೆ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ಈಗಲೂ ಜೀವ ಉಳಿಸಿಕೊಳ್ಳಲು ಆಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೇಳಿದಷ್ಟು ಹಣ ಕೊಟ್ಟು ಬರೆದ ಔಷಧಿಗಳನ್ನೆಲ್ಲಾ ತಂದರೂ ಕೊನೆಗೆ ಹೆಣ ಹಾಕಿಕೊಂಡು ಮನೆಗೆ ಹೋಗುವ ಹೀನ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ಸಂದರ್ಭಗಳಲ್ಲಿ ಜನರ ಆಕ್ರೋಶ ವೈದ್ಯರತ್ತ ತಿರುಗುವುದು ಸಹಜ ಎಂದರು.

ಸರ್ಕಾರದ ನಿಯಮಗಳನ್ನು ಮೀರಿ ಖಾಸಗಿ ಶಾಲೆಗಳಲ್ಲಿ ಮಕ್ಕಳಿಂದ ಡೊನೇಷನ್ ಪಡೆಯಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಎಷ್ಟು ಶುಲ್ಕವಿದೆಯೋ ಅಷ್ಠೆ ಶುಲ್ಕ ಪಡೆದು ಶಿಕ್ಷಣ ನೀಡಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಜೊತೆ ಹಲವಾರು ಸಭೆ ನಡೆಸಿದ್ದೇವೆ. ಆದರೂ ಖಾಸಗಿ ಶಾಲೆಯವರು ಪೋಷಕರುಗಳಿಂದ ಹಣ ಸುಲಿಗೆ ಮಾಡುತ್ತಿರುವುದು ಇನ್ನು ನಿಂತಿಲ್ಲ ಎಂದು ಸಿದ್ದವೀರಪ್ಪ.

ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ಹನುಮಂತರೆಡ್ಡಿ,ಚಂದ್ರಮೌಳಿ, ಎಂ.ಟಿ.ಸತೀಶ್‍ರೆಡ್ಡಿ, ಎಂ.ಬಸವರಾಜಪ್ಪ, ತಿಮ್ಮಾರೆಡ್ಡಿ ಸೇರಿ ಅನೇಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆರ್‌ಆರ್‌ ಸಂಖ್ಯೆಗೆ ಅಧಾರ್‌ ಜೋಡಣೆ ಮಾಡಲ್ಲ: ರೈತರ ಕೃಷಿಗೆ ಬಹುಮುಖ್ಯವಾಗಿ ಬೇಕಾಗಿರುವ ನೀರು ಹಾಗೂ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದರೆ ಎಲ್ಲಾ ಸಬ್ಸಿಡಿಗಳನ್ನು ಕೈಬಿಡುತ್ತೇವೆ. ಎಲ್ಲಿಯವರೆಗೂ ಈ ಸೌಕರ್ಯ ಒದಗಿಸುವುದಿಲ್ಲವೋ ಅಲ್ಲಿಯತನಕ ಆರ್.ಆರ್.ನಂಬರ್ ಗೆ ಆಧಾರ್ ಜೋಡಣೆ ಮಾಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.