ವೃತ್ತಕ್ಕೆ ಹಾ.ಮಾ. ನಾಯಕ ಹೆಸರಿಡಲು ಕೆ.ವಿ. ಮಲ್ಲೇಶ್ ಆಗ್ರಹ

| Published : Feb 26 2024, 01:30 AM IST

ವೃತ್ತಕ್ಕೆ ಹಾ.ಮಾ. ನಾಯಕ ಹೆಸರಿಡಲು ಕೆ.ವಿ. ಮಲ್ಲೇಶ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನಾ ಎಂದೇ ಚಿರಪರಿಚಿತರು. ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹತ್ತಾರು ವರ್ಷ ನಿರ್ದೇಶಕರಾಗಿ, ಕಲಬುರಗಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕನ್ನಡದ ಏಳ್ಗೆಗೆ ದುಡಿದಿದ್ದಾರೆ. ಮಾರುಕಟ್ಟೆಯಲ್ಲಿ ದುರ್ಲಭವಾದ ಅಪರೂಪದ ಆಕರ ಗ್ರಂಥಗಳ ಪರಿಷ್ಕೃತ ಪುನರ್ ಮುದ್ರಣ, ಎಪಿಗ್ರಾಫಿಯ ಕರ್ನಾಟಿಕ, ಕನ್ನಡ ವಿಶ್ವಕೋಶ, ಕನ್ನಡ ಸಾಹಿತ್ಯ ಚರಿತ್ರೆ ಮುಂತಾದ ಮೌಲಿಕ ಸಂಪುಟಗಳಿಗೆ ದುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ನ್ಯೂ ಕಾಂತರಾಜ ಅರಸು ಮುಖ್ಯರಸ್ತೆ ಹಾಗೂ ಪಡುವಣ ಮುಖ್ಯರಸ್ತೆ ಹೊಂದಿಕೊಂಡಂತಿರುವ (ಕವಿತಾ ಬೇಕರಿ ಪಕ್ಕ) ವೃತ್ತಕ್ಕೆ ಹಾ.ಮಾ. ನಾಯಕ ಅವರ ಹೆಸರಿಡಲು ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಮಲ್ಲೇಶ್ ಆಗ್ರಹಿಸಿದ್ದಾರೆ.

ಹಾರೋಗದ್ದೆ ಮಾನಪ್ಪ ನಾಯಕರಾದ ಇವರು ಮೈಸೂರಿಗರಿಗೆ ಹಾಮಾನಾ ಎಂದೇ ಚಿರಪರಿಚಿತರು. ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹತ್ತಾರು ವರ್ಷ ನಿರ್ದೇಶಕರಾಗಿ, ಕಲಬುರಗಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕನ್ನಡದ ಏಳ್ಗೆಗೆ ದುಡಿದಿದ್ದಾರೆ. ಮಾರುಕಟ್ಟೆಯಲ್ಲಿ ದುರ್ಲಭವಾದ ಅಪರೂಪದ ಆಕರ ಗ್ರಂಥಗಳ ಪರಿಷ್ಕೃತ ಪುನರ್ ಮುದ್ರಣ, ಎಪಿಗ್ರಾಫಿಯ ಕರ್ನಾಟಿಕ, ಕನ್ನಡ ವಿಶ್ವಕೋಶ, ಕನ್ನಡ ಸಾಹಿತ್ಯ ಚರಿತ್ರೆ ಮುಂತಾದ ಮೌಲಿಕ ಸಂಪುಟಗಳಿಗೆ ದುಡಿದಿದ್ದಾರೆ.

ಅಮೇರಿಕಾ ದೇಶದ ಪೆನ್ಸಿಲ್ ವೇನಿಯ ವಿಶ್ವವಿದ್ಯಾಲಯದಲ್ಲಿ ಗೌರವಾನ್ವಿತ ಸಂದರ್ಶಕ ವಿದ್ವಾಂಸರಾಗಿದ್ದರು. ರುಮಾನಿಯಾ ದೇಶದ ಬುಖಾ ರೆಸಾರ್ಟ್ನಲ್ಲಿ ನಡೆದ ಹತ್ತನೆಯ ಅಂತರ ರಾಷ್ಟ್ರೀಯ ಭಾಷಾ ವಿಜ್ಞಾನಿಗಳ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಐಬಿಎಚ್ ಶಿಕ್ಷಣದತ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ ಬಹುಮಾನ, ‘ಸಂಪ್ರತಿ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಗೌರವ, ಪ್ರಶಸ್ತಿಗಳಿಗೆ ಅವರು ಪಾತ್ರರು. ಜತೆಗೆ ಬೀದರಿನಲ್ಲಿ ನಡೆದ ಅಖಿಲ ಭಾರತ 57ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇಂತಹ ಅಪೂರ್ವ ವ್ಯಕ್ತಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರು ನಡೆದಾಡಿದ ಹಾಗೂ ಬಾಳಿ ಬದುಕಿದ ಆ ಭಾಗಕ್ಕೆ ಅವರ ಹೆಸರಿಟ್ಟು ನಿತ್ಯ ಸ್ಮರಣೆಗೆ ಹಾಗೂ ಕನ್ನಡದ ಅಭ್ಯುದಯಕ್ಕೆ ದುಡಿದ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಗರದ ನ್ಯೂ ಕಾಂತರಾಜ ಅರಸು ಮುಖ್ಯರಸ್ತೆ ಹಾಗೂ ಪಡುವಣಮುಖ್ಯ ರಸ್ತೆ ಹೊಂದಿಕೊಂಡಂತಿರುವ (ಕವಿತಾ ಬೇಕರಿ ಪಕ್ಕ) ವೃತ್ತಕ್ಕೆ ಹಾ.ಮಾ. ನಾಯಕ ಅವರ ಹೆಸರಿಡಲು ಪಾಲಿಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.