ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಆಗ್ರಹಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 500 ವರ್ಷಗಳಿಂದ ನಡೆದ ಹೋರಾಟದಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದರ ಪರಿಣಾಮ ಇಂದು ಅಯೋಧ್ಯೆಯಲ್ಲಿ ಜ.22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಬೆಳಗಾವಿಯಿಂದ 500ಕ್ಕೂ ಹೆಚ್ಚು ಜನ ಕರಸೇವಕರು ಅಯೋಧ್ಯೆಗೆ ಹೋಗಿದ್ದರು. ರಾಮಮಂದಿರ ಹೋರಾಟದಲ್ಲಿ ಬೆಳಗಾವಿ ಜಿಲ್ಲೆ ಕೊಡುಗೆ ಸಾಕಷ್ಟಿದೆ, ಬಹಳಷ್ಟು ಜನರು ತಮ್ಮ ಕಾಲದಲ್ಲಿ ರಾಮಮಂದಿರ ನಿರ್ಮಾಣ ಆಗಲಿ ಎಂದು ಬಯಸಿದ್ದರು. ಆದರೆ ನಮಗೆ ಆ ಸೌಭಾಗ್ಯ ಸಿಕ್ಕಿರುವುದು ಸುವರ್ಣಕಾಲ ಎಂದರು.
ಶೋಭಾಯಾತ್ರೆಗೆ ತಡೆ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ದುರುದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ. ರಾಮಮಂದಿರ ಉದ್ಘಾಟನೆ ಯಶಸ್ವಿಯಾಗದಂತೆ ತಡೆಯಲು ಯತ್ನಿಸುತ್ತಿದ್ದಾರೆ ಎಂದರು. ಮೊದಲು ಕಾಂಗ್ರೆಸ್ ನವರು ನಮಗೆ ಆಹ್ವಾನ ನೀಡಿಲ್ಲ ಎಂದರು. ಆಹ್ವಾನ ಕೊಟ್ಟ ಮೇಲೆ ನಾವು ಹೋಗುವುದಿಲ್ಲ ಎಂದಿದ್ದಾರೆ. ಈಗ ಸಮಯ ಸಿಕ್ಕಾಗ ಹೋಗುತ್ತೇವೆ ಎನ್ನುತ್ತಿದ್ದಾರೆ. ರಾಮಮಂದಿರ ವಿರುದ್ಧ ವಾದ ಮಾಡಲು ಕಾಂಗ್ರೆಸ್ 50 ವಕೀಲರನ್ನು ನೇಮಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೆಲ್ಫಿ ವಿತ್ ನನ್ನ ರಾಮ ಎಂದು ಕರೆ ಕೊಟ್ಟಿದ್ದಾರೆ. ಆದ್ದರಿಂದ ಎಲ್ಲರೂ ರಾಮನ ಭಾವಚಿತ್ರದ ಜೊತೆ ಸೆಲ್ಫಿ ಹೊಡೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಬೇಕು. ಜ.22 ರಂದು ಜಿಲ್ಲೆಯಲ್ಲಿ ಮದ್ಯ ಮತ್ತು ಮಾಂಸದ ಅಂಗಡಿ ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಅಲ್ಲದೇ ರಾಮ ಭಕ್ತರು ಎರಡು ದಿನಗಳ ಕಾಲ ಮಾಂಸಾಹಾರ ಹಾಗೂ ಮದ್ಯ ಸೇವನೆ ಮಾಡದಂತೆ ವಿನಂತಿಸಿಕೊಂಡರು.ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ಜ.31 ರಿಂದ ಮಾರ್ಚ 25ರ ವರೆಗೆ ರಾಜ್ಯದ ರಾಮ ಭಕ್ತರಿಗೆ ಅಯೋಧ್ಯೆಯ ರಾಮ ದರ್ಶನ ಅಭಿಯಾನ ಹಮ್ಮಿಕೊಳ್ಳಲಾಗುವುದು. ರಾಜ್ಯದ ವಿವಿಧ 25 ಸ್ಥಳಗಳಿಂದ 25 ವಿಶೇಷ ರೈಲು ಸಂಚಾರ ನಡೆಯಲಿದೆ. ರಾಜ್ಯದ ಸುಮಾರು 35ಸಾವಿರಕ್ಕೂ ಹೆಚ್ಚು ರಾಮಭಕ್ತರು ರಾಮ ದರ್ಶನ ಮಾಡಲಿದ್ದಾರೆ. ಒಟ್ಟು 6 ದಿನಗಳ ಈ ಪ್ರವಾಸದಲ್ಲಿ ಪ್ರತಿಯೊಬ್ಬರಿಗೂ ₹ 3 ಸಾವಿರ ವೆಚ್ಚವಾಗಲಿದೆ. ಇದನ್ನು ರಾಮ ಭಕ್ತರೆ ಭರಿಸಬೇಕು. ರೈಲ್ವೆಯಲ್ಲಿ ಉಪಹಾರ ಊಟ ವ್ಯವಸ್ಥೆ ಮಾಡಲಾಗುವುದು. ಅಯೋಧ್ಯೆಯಲ್ಲಿ 48 ಕಡೆ ಪ್ರಸಾದ ನಡೆಯಲಿದ್ದು ಅದರಲ್ಲಿ 2 ಕಡೆ ಕರ್ನಾಟಕ ರಾಮ ಭಕ್ತರಿಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸಂಸದೆ ಮಂಗಳಾ ಅಂಗಡಿ, ಮಾಜಿ ಶಾಸಕ ಸಂಜಯ ಪಾಟೀಲ, ಮಹಾನಗರ ಅಧ್ಯಕ್ಷ ಗೀತಾ ಸುತಾರ, ಸಂದೀಪ ದೇಶಪಾಂಡೆ, ಮುರಘೇಂದ್ರ ಪಾಟೀಲ, ಎಫ್.ಎಸ್.ಸಿದ್ದನಗೌಡರ, ಶರದ ಪಾಟೀಲ, ಉಜ್ವಲಾ ಬಡವನಾಚೆ, ಸಂತೋಷ ದೇಶನೂರ ಇತರರು ಇದ್ದರು.-----ಲೋಕಸಭೆಗೆ ಬಿಜೆಪಿಗೆ ಹೆಚ್ಚು ಸ್ಥಾನ !ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕಾಂಗ್ರೆಸ್ ಜನ ವಿರೋಧಿ ಆಡಳಿತ ನಡೆಸಿದೆ. ಅಲ್ಲದೇ ಮೋದಿ ಅವರ ಸ್ವಚ್ಛ ಆಡಳಿತದಿಂದಾಗಿ ದೇಶದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬರಲಿದೆ. ಅದರಂತೆ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.