ಮಹಾಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು: ಕುಶಾಲನಗರದಲ್ಲಿ ಪ್ರತಿಭಟನೆ

| Published : Sep 24 2024, 01:53 AM IST

ಮಹಾಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು: ಕುಶಾಲನಗರದಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರದಲ್ಲಿ ಸ್ಥಳೀಯ ದೇವಾಲಯ ಒಕ್ಕೂಟ ಮತ್ತು ತಿರುಪತಿ ಭಕ್ತರ ಸಮೂಹ ಮೌನ ಪ್ರತಿಭಟನೆ ನಡೆಯಿತು. ನೂರಾರು ಮಂದಿ ಮೆರವಣಿಗೆ ತೆರಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ವಿಶ್ವದ ಕೋಟ್ಯಂತರ ಭಕ್ತಾದಿಗಳ ಶ್ರದ್ಧಾ ಕೇಂದ್ರ ತಿರುಪತಿ ದೇವಸ್ಥಾನದಲ್ಲಿ ವಿತರಣೆ ಮಾಡುವ ಮಹಾಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬೆರಕೆ ಮಾಡಿದ ಪ್ರಕರಣವನ್ನು ಖಂಡಿಸಿ ಕುಶಾಲನಗರದಲ್ಲಿ ಸ್ಥಳೀಯ ದೇವಾಲಯ ಒಕ್ಕೂಟ ಮತ್ತು ತಿರುಪತಿ ಭಕ್ತರ ಸಮೂಹ ಮೌನ ಪ್ರತಿಭಟನೆ ನಡೆಯಿತು.

ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಬಳಿಯಿಂದ ರಥ ಬೀದಿ ಮೂಲಕ ಆಂಜನೇಯ ದೇವಾಲಯ ತನಕ ನೂರಾರು ಮಂದಿ ಮೌನ ಮೆರವಣಿಗೆ ತೆರಳಿದರು.

ಈ ಸಂದರ್ಭ ಮಾತನಾಡಿದ ಕುಶಾಲನಗರ ಗಣಪತಿ ದೇವಾಲಯದ ಪ್ರಧಾನ ಅರ್ಚಕರಾದ ನಾಗೇಂದ್ರ ಬಾಬು, ಇಂತಹ ಸೂಕ್ಷ್ಮ ಘಟನೆಗಳು ಧಾರ್ಮಿಕ ಕೇಂದ್ರಗಳಲ್ಲಿ ನಡೆಯಬಾರದು. ಈ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರಗಳು ಎಚ್ಚರ ವಹಿಸಬೇಕು ಎಂದರು.

ನಂತರ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಿರುಪತಿ ಭಕ್ತಾದಿಗಳ ಸಮೂಹದ ನೇತೃತ್ವ ವಹಿಸಿದ ಅಮೃತ ರಾಜ್, ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಮತ್ತು ಮಹಿಳಾ ಭಜನಾ ಮಂಡಳಿ ಸದಸ್ಯರು ಸೇರಿದಂತೆ ಭಕ್ತಾದಿಗಳು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.