ಸೋಮರಡ್ಡಿ ಅಳವಂಡಿ ಕೊಪ್ಪಳ

ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಜಾತ್ರೆಯ ತಯಾರಿ ಭರದಿಂದ ನಡೆದಿರುವ ವೇಳೆಯಲ್ಲಿ ದೇಗುಲದಿಂದ ಕೂಗಳತೆ ದೂರದಲ್ಲಿ ನೂರಾರು ಕುರಿ, ಕೋಳಿಗಳನ್ನು ಭಕ್ತರು ದೇವರ ಹೆಸರಿನಲ್ಲಿ ನಿತ್ಯವೂ ಬಲಿ ಕೊಡುತ್ತಿದ್ದರೂ ದೇವಸ್ಥಾನ ಆಡಳಿತ ಮಂಡಳಿ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ.

ಹುಲಿಗೆಮ್ಮ ದೇವಿ ಜಾತ್ರೆಯ ಕುರಿತು ಮಂಗಳವಾರ ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯುತ್ತಿದ್ದ ವೇಳೆ ದೇವಸ್ಥಾನದಿಂದ ಕೂಗಳತೆ ದೂರದಲ್ಲಿ ಪ್ರಾಣಿ ಬಲಿ ನೀಡುವ ಕಾರ್ಯ ಅಣಕಿಸುವಂತೆ ನಡೆಯುತ್ತಿತ್ತು. ಇನ್ನೂ ಆಶ್ಚರ್ಯವೆಂದರೆ ದೇವಸ್ಥಾನಕ್ಕೆ ಪ್ರಾಣಿಗಳನ್ನು ಮೆರವಣಿಗೆಯಲ್ಲಿ ತಂದು, ಅವುಗಳನ್ನು ದೇವಸ್ಥಾನದ ಸುತ್ತಮುತ್ತಲೂ ಎಲ್ಲರಿಗೂ ಕಾಣುವಂತೆ ದೇವರ ಹೆಸರಿನಲ್ಲಿ ಪೂಜೆ ಸಲ್ಲಿಸಿ, ಬಲಿ ನೀಡುತ್ತಿರುವುದು ಕಂಡು ಬಂದಿತು.

ನಿತ್ಯವೂ ಇಲ್ಲಿ ದೇವರ ಹೆಸರಿನಲ್ಲಿ ಬಲಿ ನೀಡಲಾಗುತ್ತದೆ. ಅದರಲ್ಲೂ ಹುಣ್ಣಿಮೆ ಮತ್ತು ಮಂಗಳವಾರ, ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಕುರಿ, ಕೋಳಿಗಳನ್ನು ಬಲಿ ನೀಡಲಾಗುತ್ತದೆ.

ಪ್ರಾಣಿ ಬಲಿ ನಿಷಿದ್ಧ ಎಂದು ಹೇಳುವ ಜಿಲ್ಲಾಡಳಿತವೇ ನಾಚುವಂತೆ ನಿತ್ಯವೂ ಪ್ರಾಣಿ ಬಲಿ ನೀಡುತ್ತಿದ್ದರೂ ಜಿಲ್ಲಾಡಳಿತ ಈ ಕುರಿತು ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪ್ರಾಣಿ ಬಲಿ ನೀಡುತ್ತಿರುವುದು ದೇವಸ್ಥಾನ ವ್ಯಾಪ್ತಿಯಲ್ಲಿ ಇಲ್ಲವಾದ್ದರಿಂದ ನಾವು ನಿಯಂತ್ರಣ ಮಾಡಲು ಆಗುವುದಿಲ್ಲ ಎಂದೇ ಹೇಳುತ್ತಾರೆ. ಹೀಗಾಗಿಯೇ ದೇವರ ಹೆಸರಿನಲ್ಲಿ ಹುಲಿಗೆಮ್ಮ ದೇವಸ್ಥಾನದ ಸುತ್ತಮುತ್ತಲೂ ಪ್ರಾಣಿ ಬಲಿ ಎಗ್ಗಿಲ್ಲದೆ ನಡೆಯುತ್ತದೆ.


ಅದರಲ್ಲೂ ತುಂಗಭದ್ರಾ ನದಿಯ ಭಾಗದಲ್ಲಿ ಪ್ರಾಣಿ ಬಲಿ ಬಹಿರಂಗವಾಗಿಯೇ ಮಾಡಲಾಗುತ್ತದೆ. ಗಿಡಗಳಿಗೆ ನೇತು ಹಾಕಿ, ಪ್ರಾಣಿಗಳನ್ನು ದೇವರಿಗೆ ಅರ್ಪಿಸುವ ಭರದಲ್ಲಿ ಬಲಿ ನೀಡುವುದು ಕಂಡು ಬರುತ್ತದೆ.

ಮಂಗಳವಾರ ಮತ್ತು ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಪ್ರಾಣಿ ಬಲಿ ನೀಡಿದರೆ ಹುಣ್ಣಿಮೆ ದಿವಸ ಸಾವಿರಾರು ಸಂಖ್ಯೆಯಲ್ಲಿ ಬಲಿ ನೀಡಲಾಗುತ್ತದೆ. ಈಗ ಹುಲಿಗೆಮ್ಮ ದೇವಿಯ ಜಾತ್ರೆ ಮೇ 2 ರಿಂದ 14 ವರೆಗೂ ನಡೆಯಲಿದ್ದು, ನಿತ್ಯವೂ ಸಹಸ್ರಾರು ಪ್ರಾಣಿ ಬಲಿ ನೀಡಲಾಗುತ್ತದೆ. ದೇವಸ್ಥಾನದ ಜಾತ್ರೆ ಮುಗಿಯುವುದರೊಳಗೆ 50 ಸಾವಿರಕ್ಕೂ ಅಧಿಕ ಕುರಿ, ಕೋಳಿ ಬಲಿ ನೀಡಲಾಗುತ್ತದೆ ಎನ್ನಲಾಗಿದೆ. ದೇವಸ್ಥಾನದ ಸುತ್ತಮುತ್ತಲು ಜಾಗದಲ್ಲಿ ಸಾಲು ಸಾಲು ಕುರಿಗಳನ್ನು ಬಲಿ ನೀಡಲಾಗುತ್ತದೆ.

ಜಾತ್ರೆಯ ವೇಳೆಯಲ್ಲಿ ಪ್ರಾಣಿ ಬಲಿ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಆಗ ನಿಯಂತ್ರಣ ಮಾಡಲಾಗುವುದು. ಪ್ರಾಣಿ ಬಲಿಗೆ ಅವಕಾಶ ನೀಡುವುದಿಲ್ಲ ಎಂದು ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಎಂ.ಎಚ್ ತಿಳಿಸಿದ್ದಾರೆ.

ಪ್ರಾಣಿ ಬಲಿ ನೀಡುತ್ತಿರುವುದು ದೇವಸ್ಥಾನದ ವ್ಯಾಪ್ತಿಯಲ್ಲಿ ಇಲ್ಲವಾದ್ದರಿಂದ ನಿಯಂತ್ರಣ ಮಾಡಲು ಹೇಗೆ ಸಾಧ್ಯ? ದೇವಸ್ಥಾನ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನೀಡಿದರೆ ಖಂಡಿತವಾಗಿಯೂ ಅದನ್ನು ತಡೆಯಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.