ಸಾರಾಂಶ
ಹುಬ್ಬಳ್ಳಿ:
ದಾವಣಗೆರೆಯಲ್ಲಿ ಗುರುವಾರ ತಡರಾತ್ರಿ ಬಂಧಿಸಿದ ಅಂಜಲಿ ಅಂಬಿಗೇರ ಕೊಲೆ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತನನ್ನು ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಗೆ ಕರೆತರಲಾಗಿದೆ. ತೀವ್ರ ಗಾಯಗೊಂಡಿರುವ ಈತನನ್ನು ಕಿಮ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಗೋವಾ ಅಥವಾ ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಳ್ಳಲು ಯೋಜನೆ ರೂಪಿಸಿದ್ದ ವಿಶ್ವನಾಥ, ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.ಇಲ್ಲಿಯ ವೀರಾಪೂರ ಓಣಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ. ಇಲ್ಲಿಂದ ಬಸ್ ಮೂಲಕ ಹಾವೇರಿಗೆ ತೆರಳಿ ಅಲ್ಲಿಂದ ರೈಲಿನ ಮೂಲಕ ಮೈಸೂರಿಗೆ ತೆರಳಿದ್ದ. ಆದರೆ ಮೈಸೂರಿಗೆ ಹೋದ ಬಳಿಕ ತಾನು ಕೊಲೆ ಮಾಡಿರುವುದೆಲ್ಲ ಮಾಧ್ಯಮಗಳಲ್ಲಿ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಅಥವಾ ಗೋವಾಕ್ಕೆ ತೆರಳಿ ತಲೆ ಮರೆಸಿಕೊಳ್ಳಬೇಕೆಂದು ಸಂಚು ನಡೆಸಿದ್ದ. ಅದಕ್ಕಾಗಿ ವಿಶ್ವಮಾನವ ರೈಲ್ ಹತ್ತಿ ಬೆಳಗಾವಿಗೆ ಹೊರಟ್ಟಿದ್ದ.
ಆದರೆ ದಾವಣಗೆರೆಯಲ್ಲಿ ರೈಲಿನಲ್ಲಿದ್ದ ಮಹಿಳೆಯೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ಆಗ ಸಾರ್ವಜನಿಕರು ಈತನನ್ನು ಥಳಿಸಿದ್ದಾರೆ ಎಂದು ಹೇಳಲಾಗಿದೆ. ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಚಲಿಸುವ ರೈಲಿನಿಂದಲೇ ಜಿಗಿದಿದ್ದರಿಂದ ಆತನ ತಲೆ, ಮುಖಕ್ಕೆ ತೀವ್ರವಾಗಿ ಗಾಯವಾಗಿವೆ.ಈತನನ್ನು ರೈಲ್ವೆ ಪೊಲೀಸರು, ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು, ಈತನ ಬಗ್ಗೆ ಮೊಬೈಲ್‌ನಲ್ಲಿ ಫೋಟೋ ಬಂದಿದ್ದು ನೋಡಿ ಈತನೇ ಅಂಜಲಿ ಕೊಲೆ ಮಾಡಿದ ಆರೋಪಿ ಇರಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹಿರಿಯ ಅಧಿಕಾರಿ ಬಂದು ಪರಿಶೀಲನೆ ನಡೆಸಿ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ವಿಷಯ ರವಾನಿಸಿದ್ದರು. ಆಮೇಲೆ ಈತನನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಈತ ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ. ಆತನಿಗೆ ಆರೋಗ್ಯ ಸುಧಾರಿಸಿದ ಬಳಿಕ ವಿವರವಾದ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ.ಕಿಮ್ಸ್‌ನಲ್ಲಿನ ಬಂಧಿ ಕೊಠಡಿಯಲ್ಲಿ ಈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ತಲೆ ಹಾಗೂ ಮುಖಕ್ಕೆ ತೀವ್ರತರನಾದ ಗಾಯಗಳಾಗಿದ್ದರಿಂದ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ರೈಲಿನಲ್ಲಿ ಮಹಿಳೆಗೆ ಚಾಕು ಹಾಕಿಲ್ಲ
ಹುಬ್ಬಳ್ಳಿಯಿಂದ ಮೈಸೂರಿಗೆ ಹೋಗಿದ್ದೆ. ಅಲ್ಲಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಬರುತ್ತಿದ್ದೆ. ಚಳಿಯಲ್ಲಿ ಮಲಗಿಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಹಲ್ಲೆ ನಡೆದು ರೈಲಿನಿಂದ ಬಿದ್ದಿದ್ದೇನೆ. ತಲೆಗೆ ಪೆಟ್ಟು ಬಿದ್ದಿರುವ ಕಾರಣದಿಂದ ಎಲ್ಲಿ ಬಿದ್ದಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ರೈಲಿನಲ್ಲಿ ಮಹಿಳೆಗೆ ಚಾಕು ಹಾಕಿಲ್ಲ, ನನ್ನ ಬಳಿ ಏನೂ ಇಲ್ಲ ಎಂದು ಆರೋಪಿ ಗಿರೀಶ ಸಾವಂತ ವೈದ್ಯರೆದರು ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.ಈತ ಯಾರು?ವಿಶ್ವನಾಥ ಅಲಿಯಾಸ್ ಗಿರೀಶ್, ಕಳೆದ ಕೆಲವರ್ಷದ ಹಿಂದೆ ಮೈಸೂರಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಮೂಲತಃ ಹುಬ್ಬಳ್ಳಿಯವನಾದ ಈತ ಇತ್ತೀಚಿಗೆ ಹುಬ್ಬಳ್ಳಿಗೆ ಬಂದಿದ್ದ. ಈತ ಆಟೋ ಚಾಲಕ ಎಂದು ಕೂಡ ಗುರುತಿಸಿಕೊಂಡಿದ್ದ. ಜತೆ ಜತೆಗೆ ಅಪರಾಧ ಪ್ರಕರಣಗಳಲ್ಲೂ ಭಾಗಿಯಾಗಿದ್ದ. ಬೈಕ್ ಕಳ್ಳತನ ಸೇರಿದಂತೆ ವಿವಿಧ ಕೇಸ್‌ಗಳಲ್ಲಿ ಈತ ಆರೋಪಿಯಾಗಿದ್ದ. ಈತನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರೇಮಿಗಳಾ? ಮದುವೆಯಾಗಿದ್ದರಾ?
ಅಂಜಲಿಯನ್ನು ಕಳೆದ ಕೆಲ ತಿಂಗಳ ಹಿಂದೆ ಪರಿಚಯ ಮಾಡಿಕೊಂಡಿದ್ದ ಈತ ಆಕೆಯನ್ನು ಪ್ರೀತಿಸಲಾರಂಭಿಸಿದ. ಆಕೆ ಕೂಡ ಈತನನ್ನು ಪ್ರೀತಿಸುತ್ತಿದ್ದಳಂತೆ. ಇತ್ತೀಚಿಗೆ ಇಬ್ಬರು ಮದುವೆಯಾಗಿದ್ದರಂತೆ. ಆ ಬಳಿಕ ಅದೇನಾಯ್ತೋ ಈತನೊಂದಿಗೆ ಆಕೆ ಸಂಪರ್ಕ ಇಟ್ಟುಕೊಂಡಿರಲಿಲ್ಲವಂತೆ. ಈತನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಳಂತೆ. ಇದರಿಂದಾಗಿ ಸಿಟ್ಟಾಗಿ ಈತ ಮೈಸೂರಿನಿಂದ ಬಂದು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಆದರೆ ತನಿಖೆ ಬಳಿಕವೇ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ.