ಅಂಜಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯ ಕಾರಣ

| Published : May 17 2024, 12:33 AM IST

ಸಾರಾಂಶ

ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರ ವೈಫಲ್ಯವಿದೆ. ನೇಹಾ ರೀತಿ ಕೊಲೆ ಮಾಡುವುದಾಗಿ ಹೇಳಿದ್ದಾನೆ. ಈ ಬಗ್ಗೆ ಅಂಜಲಿ ಮನೆಯವರು ದೂರು ಸಹ ನೀಡಿದ್ದಾರೆ

ಗದಗ: ಹುಬ್ಬಳ್ಳಿಯ ಅಂಜಲಿ ಹಾಗೂ ಸಂಬಂಧಿಕರು ಕೊಲೆ ಬೆದರಿಕೆ ಇದೆ ಎಂದು ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸದೇ ಪೊಲೀಸರು ಪರೋಕ್ಷವಾಗಿ ಅಂಜಲಿ ಕೊಲೆಗೆ ಕಾರಣರಾಗಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.

ಅವರು ಗುರುವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರ ವೈಫಲ್ಯವಿದೆ. ನೇಹಾ ರೀತಿ ಕೊಲೆ ಮಾಡುವುದಾಗಿ ಹೇಳಿದ್ದಾನೆ. ಈ ಬಗ್ಗೆ ಅಂಜಲಿ ಮನೆಯವರು ದೂರು ಸಹ ನೀಡಿದ್ದಾರೆ. ಮೊದಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೆ ಈ ಕೊಲೆ ತಪ್ಪಿಸಬಹುದಿತ್ತು. ಕೊಲೆ ತಡೆಯದೇ ಪರೋಕ್ಷವಾಗಿ ಕೊಲೆಗೆ ಪೊಲೀಸರು ಕಾರಣರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೊಲೀಸರನ್ನು ರಾಜಕೀಯ ವಿರೋಧಿಗಳ ಧಮನಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕಲು ಪೊಲೀಸರು ನಿರತರಾಗಿದ್ದಾರೆ.

ರಾಜ್ಯದಲ್ಲಿನ ಪೊಲೀಸರು ಇಸ್ಪೀಟು, ಮಟಕಾ, ಕ್ಲಬ್, ಮರಳು ದಂಧೆಯಲ್ಲಿ ಶಾಮಿಲಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಂಚ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡು ಬಂದಿದ್ದಾರೆ, ಹಾಗಾಗಿ ಅಧಿಕಾರಿಗಳು ನೇರವಾಗಿ ಹಾಗೂ ರಾಜ್ಯ ಸರ್ಕಾರ ಪರೋಕ್ಷವಾಗಿ ಭ್ರಷ್ಟಾಚಾರದಲ್ಲಿ‌ ಮುಳುಗಿದೆ. ಇಡೀ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆ ಹದಗೆಡಲು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ.

ಗೃಹ ಸಚಿವರು, ಮುಖ್ಯಮಂತ್ರಿಗಳ ವರ್ತನೆ ಗಮನಿಸಿ ಅವರು ರಾಜ್ಯದಲ್ಲಿ ಏನೂ ನಡದೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದು, ಇದರಿಂದ ರಾಜ್ಯದಲ್ಲಿ ಗೂಂಡಾಗಳು ನಿರ್ಭಿತಿ, ನಿರ್ಭಯವಾಗಿ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ಜನರ, ಹೆಣ್ಣುಮಕ್ಕಳು ಸೇರಿದಂತೆ ಯಾರ ಪ್ರಾಣಕ್ಕೂ ಸುರಕ್ಷತೆ ಇಲ್ಲ. ರಾಜ್ಯದಲ್ಲಿ ಭಯದ ವಾತಾವರಣ, ಗೂಂಡಾ ವಾತಾವರಣ ಇದೆ. ನೇಹಾ ಪ್ರಕರಣದಲ್ಲಿ ನಾವು ರಾಜಕೀಯ ಮಾಡಿಲ್ಲ. ಹಾಡುಹಗಲೇ ಕಾಲೇಜ್ ಕ್ಯಾಂಪಸ್ ನಲ್ಲಿ‌ ಕೊಲೆ ಆದರೆ ಸುಮ್ಮನೆ ಕುಳಿತುಕೊಳ್ಳಬೇಕಾ? ಕಾಂಗ್ರೆಸ್ ನವರು ವಿರೋಧ ಪಕ್ಷದಲ್ಲಿದ್ದರೆ ಸುಮ್ಮನೆ ಕೂಡುತ್ತಿದ್ದರಾ ? ಅಂಜಲಿ ಮನೆಗೆ ಹೊಕ್ಕು ಕೊಲೆ ಮಾಡುತ್ತಾರೆ ಅಂದರೆ ಪರಿಸ್ಥಿತಿ ಎಲ್ಲಿಗೆ ಬಂತು? ಎಲ್ಲಿದೆ ಕಾನೂನು ? ಎಲ್ಲಿದೆ ಪೊಲೀಸರ ಭಯ ಎಂದು ಪ್ರಶ್ನಿಸಿದರು.

ಒಂದು ಕಡೆ ಸಾವಿರ ವಿದ್ಯಾರ್ಥಿಗಳ ಮಧ್ಯೆ ನೇಹಾ ಕೊಲೆ ಆಗುತ್ತಾಳೆ. ಮತ್ತೊಂದು ಕಡೆ ಅಂಜಲಿ ಮನೆ ಹೊಕ್ಕು ಕೊಲೆ ಮಾಡುತ್ತಾರೆ ಅಂದರೆ, ಇದು ಗೂಂಡಾ ರಾಜ್ಯ ಅಲ್ಲದೆ ಇನ್ನೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ಘಾತುಕರೊಂದಿಗೆ ಕಾಂಗ್ರೆಸ್:

ಗೃಹ ಸಚಿವ ಪರಮೇಶ್ವರ ಅವರಿಗೆ ಪ್ರಶ್ನಿಸಿದ ಬೊಮ್ಮಾಯಿ, ನೇಹಾ ಕೊಲೆ ಆದಾಗ ಬರಲಿಲ್ಲ, ತನಿಖೆ ಚುರುಕುಗೊಳಿಸಲಿಲ್ಲ. ಅಂಜಲಿ‌ ಕೊಲೆ ಆದಾಗಲೂ ಉದಾಸೀನ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮಹಿಳೆ ಮೇಲೆ ಸಾಮೂಹಿಕ ರೇಪ್ ಆದರೂ ತಿರುಗಿ ನೋಡಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ದಲಿತ ಮಹಿಳೆ ವಿವಸ್ತ್ರಗೊಳಿಸಿದರೂ ನೋಡಲಿಲ್ಲ.? ಕಾಂಗ್ರೆಸ್ ಯಾರ ಪರವಾಗಿದ್ದೀರಿ ? ರಾಜ್ಯದಲ್ಲಿ ಏನು ನಡೆಯುತ್ತಿದೆ. ಇದನ್ನು ನೋಡಿ ವಿರೋಧ ಪಕ್ಷವಾಗಿ ಸುಮ್ಮನೇ ಕುಳಿತುಕೊಳ್ಳಬೇಕಾ ಎಂದು ಆಕ್ರೋಶ ವ್ಯಕ್ತ ಪಡಿಸಿದರು.