ಅಂಜಲಿ ಹತ್ಯೆಗೈದ ಆರೋಪಿಯಿಂದ ಚಾಕು ಇರಿತ, ಚಿಕಿತ್ಸೆ ಪರದಾಡುತ್ತಿರುವ ಮಹಿಳೆ

| Published : May 20 2024, 01:32 AM IST / Updated: May 20 2024, 09:37 AM IST

ಅಂಜಲಿ ಹತ್ಯೆಗೈದ ಆರೋಪಿಯಿಂದ ಚಾಕು ಇರಿತ, ಚಿಕಿತ್ಸೆ ಪರದಾಡುತ್ತಿರುವ ಮಹಿಳೆ
Share this Article
  • FB
  • TW
  • Linkdin
  • Email

ಸಾರಾಂಶ

ಸದ್ಯ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ್ಮೀ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕು ಇರಿತದಿಂದ ಕೈ ನರ ಕತ್ತರಿಸಿದ್ದು, ಆಪರೇಷನ್‌ ಮಾಡಲಾಗಿದೆ

ಮುಳಗುಂದ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆಗೈದ ಆರೋಪಿ ವಿಶ್ವನಾಥ ಸಾವಂತನಿಂದ ದಾವಣಗೆರೆ ಸಮೀಪ ರೈಲಿನಲ್ಲಿ ಹಲ್ಲೆಗೊಳಗಾದ ಪಟ್ಟಣದ ಬಡ ಮಹಿಳೆ ಲಕ್ಷ್ಮೀ ಮಹಾಂತೇಶ ಸೊರಟೂರ (29) ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

ಲಕ್ಷ್ಮೀ ಮತ್ತು ಮಹಾಂತೇಶ ತುಮಕೂರು ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಮಗನನ್ನು ಸೇರಿಸಲು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಹುಬ್ಬಳ್ಳಿಯ ಯುವತಿಯನ್ನು ಕೊಂದ ಗಿರೀಶ ಸಾವಂತ ಇದೇ ರೈಲಿನಲ್ಲಿ ಇದ್ದ. ಮಧ್ಯಾಹ್ನ 2.30ರ ಸುಮಾರಿಗೆ ಆತ ಲಕ್ಷ್ಮೀ ಜತೆ ಅನುಚಿತವಾಗಿ ವರ್ತಿಸಿ ಕೈಗೆ ಚಾಕು ಇರಿದಿದ್ದಾನೆ. ಮಹಿಳೆಯ ಪತಿ ಪ್ರತಿರೋಧ ಒಡ್ಡಿದ ಕಾರಣಕ್ಕೆ ಬೇರೆ ಬೋಗಿಗೆ ಕಾಲ್ಕಿತ್ತಿದ್ದಾನೆ. ಘಟನೆಯ ಕುರಿತು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದಾಗ ದಾವಣಗೆರೆ ರೈಲು ನಿಲ್ದಾಣದಲ್ಲಿ ಆರೋಪಿಯನ್ನು ವಶ ಪಡೆಯಲಾಗಿದೆ.

ಆತ ಹುಬ್ಬಳ್ಳಿ ಅಂಜಲಿ ಹತ್ಯೆ ಆರೋಪಿ ಎಂಬುದು ತನಿಖೆ ಬಳಿಕ ಗೊತ್ತಾಗಿದೆ. ಚಾಕು ಇರಿತದಿಂದ ತೀವ್ರ ಅಸ್ವಸ್ಥಗೊಂಡ ಮಹಿಳೆಯನ್ನು ದಾವಣಗೆರೆ ಸ್ಟೇಷನ್‌ನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲವಿಗಿ ರೈಲು ನಿಲ್ದಾಣದಿಂದ ತುಮಕೂರಿಗೆ ಪ್ರಯಾಣಿಸುತ್ತಿದ್ದ ದಂಪತಿ ಗಿರೀಶನ ನೀಚ ಕೃತ್ಯದಿಂದ ಸಂಕಷ್ಟ ಎದುರಿಸುವಂತಾಗಿದ್ದು, ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದ ದಂಪತಿ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಸದ್ಯ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ್ಮೀ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕು ಇರಿತದಿಂದ ಕೈ ನರ ಕತ್ತರಿಸಿದ್ದು, ಆಪರೇಷನ್‌ ಮಾಡಲಾಗಿದೆ. ಈ ವರೆಗೂ ₹ 25ರಿಂದ ₹ 30 ಸಾವಿರ ಖರ್ಚಾಗಿದೆ. ಚಿಕಿತ್ಸೆ ನೀಡಿದ ವೈದ್ಯರು 3ರಿಂದ 4 ತಿಂಗಳು ವಿಶ್ರಾಂತಿಗೆ ಹೇಳಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಯಾವಾಗ ಎಂಬುದು ಗೊತ್ತಿಲ್ಲ. ರೈಲ್ವೆ ಇಲಾಖೆಯವರು ಘಟನೆ ನಡೆದ ವೇಳೆಯಲ್ಲಿ ₹ 5000 ಕೊಟ್ಟು ಹೋಗಿದ್ದಾರೆ. ಪತ್ನಿಯ ಚಿಕಿತ್ಸೆಗೆ ಹಣ ಭರಿಸುವುದಕ್ಕೆ ಪತಿಯಿಂದ ಸಾಧ್ಯವಾಗುತ್ತಿಲ್ಲ. ನಮ್ಮದು ಕೂಲಿ ಕುಟುಂಬ ಈ ದೊಡ್ಡ ಮೊತ್ತ ಭರಿಸುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಮಹಾಂತೇಶ.